ಏ.1ರಿಂದ ಆಟೋ ಪೇಮೆಂಟ್‌ ಆಗದಿರಬಹುದು, ಎಚ್ಚರ!| ಆಟೋ ಪೇಮೆಂಟ್‌ಗೆ ಆರ್‌ಬಿಐ ಹೊಸ ನಿಯಮ| ಆದರೆ ಹೊಸ ನಿಯಮ ಇನ್ನೂ ಅಳವಡಿಸಿಕೊಳ್ಳದ ಬ್ಯಾಂಕ್‌ಗಳು| ಹೀಗಾಗಿ ಗ್ರಾಹಕರಿಗೆ ತೊಂದರೆ ಸಾಧ್ಯತೆ| 5000 ರು.ಗಿಂತ ಹೆಚ್ಚು ಮೊತ್ತದ ಪಾವತಿಗೆ ಅನ್ವಯ

ಮುಂಬೈ(ಮಾ.31): ನೀವು ಇಂಟರ್ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐನಲ್ಲಿ ವಿದ್ಯುತ್‌ ಬಿಲ್‌, ನೀರಿನ ಬಿಲ್‌, ಒಟಿಟಿ ಸೇವೆಗೆ ಶುಲ್ಕ ಪಾವತಿ ಮುಂತಾದವುಗಳಿಗೆ ಆಟೋ ಪೇಮೆಂಟ್‌ (ನಿಗದಿತ ದಿನಾಂಕದಂದು ತನ್ನಿಂತಾನೇ ಬಿಲ್‌ ಪಾವತಿ) ಆಯ್ಕೆಗೆ ನೋಂದಣಿ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಏ.1ರಿಂದ ನಿಮ್ಮ ಆಟೋ ಪೇಮೆಂಟ್‌ ಆಯ್ಕೆ ಕೆಲಸ ಮಾಡದಿರಬಹುದು. ಒಮ್ಮೆ ಖಾತ್ರಿಪಡಿಸಿಕೊಳ್ಳಿ.

ಹೌದು, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಏ.1ರಿಂದ ಅನ್ವಯವಾಗುವಂತೆ ಅಡಿಷನಲ್‌ ಫ್ಯಾಕ್ಟರ್‌ ಆಫ್‌ ಅಥೆಂಟಿಕೇಶನ್‌ (ಎಎಫ್‌ಎ) ಎಂಬ ಹೊಸ ನಿಯಮ ಜಾರಿಗೆ ತಂದಿದೆ. ಆದರೆ, ಬಹುತೇಕ ಬ್ಯಾಂಕುಗಳು, ಪೇಮೆಂಟ್‌ ಬ್ಯಾಂಕುಗಳು ಹಾಗೂ ಯುಪಿಐ ಆ್ಯಪ್‌ಗಳು (ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಇತ್ಯಾದಿ) ಇದನ್ನು ಇನ್ನೂ ಅಳವಡಿಸಿಕೊಂಡಿಲ್ಲ.

ಹೀಗಾಗಿ ಇಂತಹ ಬ್ಯಾಂಕ್‌ ಅಥವಾ ಯುಪಿಐ ಆ್ಯಪ್‌ನಲ್ಲಿ ಆಟೋ ಪೇಮೆಂಟ್‌ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಯಿದೆ. ನಿಗದಿತ ದಿನದಂದು ಬಿಲ್‌ ಪಾವತಿಯಾಗದಿದ್ದರೆ ಸಂಬಂಧಪಟ್ಟಸಂಸ್ಥೆಗಳು ಗ್ರಾಹಕರಿಗೆ ದಂಡ ಅಥವಾ ಬಡ್ಡಿ ವಿಧಿಸಬಹುದು.

ಆರ್‌ಬಿಐ ಹೊಸ ನಿಯಮ ಏನು?

ಆಟೋ ಪೇಮೆಂಟ್‌ ಆಯ್ಕೆ ಪಡೆದಿರುವ ಗ್ರಾಹಕರಿಗೆ ಬ್ಯಾಂಕುಗಳು 5 ದಿನಗಳ ಮೊದಲು ಒಮ್ಮೆ ಇ-ಮೇಲ್‌ ಅಥವಾ ಎಸ್‌ಎಂಎಸ್‌ ಕಳುಹಿಸಿ ಆಟೋ ಪೇಮೆಂಟ್‌ಗೆ ಒಪ್ಪಿಗೆ ಪಡೆದುಕೊಳ್ಳಬೇಕು. 5000 ರು.ಗಿಂತ ಹೆಚ್ಚಿನ ಪಾವತಿಯಿದ್ದರೆ ಒನ್‌-ಟೈಮ್‌ ಪಾಸ್‌ವರ್ಡ್‌ ಮೂಲಕ ಪ್ರತಿ ಬಾರಿಯೂ ಗ್ರಾಹಕರಿಂದ ಒಪ್ಪಿಗೆ ಪಡೆಯಬೇಕು. ಇಲ್ಲದಿದ್ದರೆ ಏ.1ರಿಂದ ಆಟೋ ಪೇಮೆಂಟ್‌ ಆಗುವುದಿಲ್ಲ ಎಂಬ ನಿಯಮವನ್ನು ಆರ್‌ಬಿಐ ಜಾರಿಗೆ ತಂದಿದೆ. ಬಹುತೇಕ ಬ್ಯಾಂಕುಗಳು ಇನ್ನೂ ತಮ್ಮ ಗ್ರಾಹಕರಿಂದ ಈ ರೀತಿಯ ಒಪ್ಪಿಗೆ ಪಡೆದುಕೊಂಡಿಲ್ಲ. ಹೀಗಾಗಿ ಒಟ್ಟಾರೆ ಸುಮಾರು 2000 ಕೋಟಿ ರು. ಮೌಲ್ಯದ ಆಟೋ ಪೇಮೆಂಟ್‌ ವ್ಯವಹಾರಗಳು ಏ.1ರಿಂದ ವ್ಯತ್ಯಯವಾಗುವ ಸಾಧ್ಯತೆಯಿದೆ.