ಗ್ರಾಹಕರ ಖಾತೆಯಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬರೋಬ್ಬರಿ ಆದಾಯ ಗಳಿಸಿವೆ.

ನವದೆಹಲಿ[ಡಿ.23]: ಖಾತೆಯಲ್ಲಿ ಕನಿಷ್ಠ ಹಣ ಕಾಪಾಡಿಕೊಳ್ಳದ (ಮಿನಿಮಂ ಬ್ಯಾಲೆನ್ಸ್‌) ಗ್ರಾಹಕರಿಗೆ ವಿಧಿಸುವ ದಂಡ ಮತ್ತು ಎಟಿಎಂನಲ್ಲಿ ಉಚಿತದ ನಂತರ ಬಳಕೆಗೆ ವಿಧಿಸುವ ಶುಲ್ಕಗಳ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕಳೆದ ಮೂರೂವರೆ ವರ್ಷಗಳಲ್ಲಿ 10000 ಕೋಟಿ ರು. ಆದಾಯಗಳಿಸಿವೆ ಎಂದು ಸರ್ಕಾರ, ಸಂಸತ್ತಿಗೆ ಮಾಹಿತಿ ನೀಡಿದೆ.

ಜನಧನ ಹೊರತುಪಡಿಸಿ ಉಳಿದ ಖಾತೆಗಳಲ್ಲಿ ಕನಿಷ್ಠ ಹಣ ಕಾಪಾಡಿಕೊಳ್ಳದ ಖಾತೆಗಳಿಗೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ಇದಲ್ಲದೆ ಮೆಟ್ರೋ ನಗರಗಳಲ್ಲಿ ಗ್ರಾಹಕರಿಗೆ ಅವರು ಖಾತೆ ಹೊಂದಿರುವ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಮಾಸಿಕ 5 ವಹಿವಾಟನ್ನು ಉಚಿತವಾಗಿ, ಇತರೆ ಬ್ಯಾಂಕ್‌ನ ಎಟಿಎಂಗಳಲ್ಲಿ 3 ಉಚಿತ ವಹಿವಾಟು ನಡೆಸುವ ಅವಕಾಶ ನೀಡಿವೆ. ನಂತರದ ಪ್ರತಿ ವಹಿವಾಟಿಗೂ 20 ರು. ಶುಲ್ಕ ವಿಧಿಸಲಾಗುತ್ತದೆ.

ಹೀಗೆ ವಿಧಿಸುವ ದಂಡ ಮತ್ತು ಶುಲ್ಕದ ಮೂಲಕ ಬ್ಯಾಂಕ್‌ಗಳು ಮೂರೂವರೆ ವರ್ಷದಲ್ಲಿ 10000 ಕೋಟಿ ರು. ಆದಾಯ ಸಂಗ್ರಹಿಸಿವೆ. ಖಾಸಗಿ ಬ್ಯಾಂಕ್‌ಗಳು ಇನ್ನೂ ನಾನಾ ರೀತಿಯ ಶುಲ್ಕ ಮತ್ತು ದಂಡ ವಿಧಿಸುತ್ತವೆ. ಆದರೆ ಆ ಮಾಹಿತಿ ಸರ್ಕಾರದ ಬಳಿ ಇಲ್ಲ ಎಂದು ಹಣಕಾಸು ಸಚಿವಾಲಯ ಲಿಖಿತವಾಗಿ ನೀಡಿರುವ ಉತ್ತರದಲ್ಲಿ ತಿಳಿಸಿದೆ.