Asianet Suvarna News Asianet Suvarna News

ಬರೋಡಾ ಬ್ಯಾಂಕ್ ಈಗ ದೇಶದಲ್ಲೇ ನಂ.2

ಬರೋಡಾ ಬ್ಯಾಂಕ್‌ ಇನ್ನು ದೇಶದ ನಂ.2 |  ವಿಜಯ, ದೇನಾ ಬ್ಯಾಂಕ್‌ಗಳು ಬಿಒಬಿ ಜೊತೆ ವಿಲೀನ | ಬಿಒಬಿಯಲ್ಲಿ ವಿಲೀನವಾದ 12 ಕೋಟಿ ಗ್ರಾಹಕರು |  ಮಾಸಾಂತ್ಯದೊಳಗೆ ವಿಲೀನ ಪ್ರಕ್ರಿಯೆ ಪೂರ್ಣ

Bank of Baroda becomes 2nd largest public sector bank after merger
Author
Bengaluru, First Published Apr 2, 2019, 10:14 AM IST
  • Facebook
  • Twitter
  • Whatsapp

ಬೆಂಗಳೂರು (ಏ. 02): ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಏ.1ರಿಂದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಜತೆಗೆ ವಿಲೀನಗೊಂಡಿದೆ. ತನ್ಮೂಲಕ ಬ್ಯಾಂಕ್‌ ಆಫ್‌ ಬರೋಡಾ (ಬಿಓಬಿ) ದೇಶದ ಎರಡನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿ ಮಾರ್ಪಾಡಾಗಿದೆ.

ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ನ ಗ್ರಾಹಕರು ಬಿಓಬಿ ಬ್ಯಾಂಕ್‌ನಲ್ಲಿ ವಿಲೀನಗೊಂಡ ಪರಿಣಾಮ, ಬ್ಯಾಂಕ್‌ ಆಫ್‌ ಬರೋಡಾ ಇನ್ನು 12 ಕೋಟಿ ಗ್ರಾಹಕರನ್ನು ಹೊಂದಿದಂತೆ ಆಗಲಿದೆ. ಜೊತೆಗೆ ಬ್ಯಾಂಕ್‌ ಆಫ್‌ ಬರೋಡ 15 ಲಕ್ಷ ಕೋಟಿ ರು.ಗಳಿಗೂ ಅಧಿಕ ವ್ಯವಹಾರ ಹೊಂದಿದ ಬ್ಯಾಂಕ್‌ ಆಗಲಿದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ವಿಜಯ ಬ್ಯಾಂಕ್‌ ಡಿಜಿಎಂ ಸುಧಾಕರ್‌ ಮತ್ತು ದೇನಾ ಬ್ಯಾಂಕ್‌ ಡಿಜಿಎಂ ರಾಘವನ್‌, ದೇಶದಲ್ಲಿ ಇದೇ ಮೊದಲಿಗೆ ಮೂರು ಪ್ರಮುಖ ಬ್ಯಾಂಕ್‌ಗಳು ವಿಲೀನಗೊಂಡಿವೆ. ಮೂರು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು 2018 ಸೆಪ್ಟೆಂಬರ್‌ನಲ್ಲಿ ವಿಲೀನಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು, ವಿಲೀನ ಪ್ರಕ್ರಿಯೆ ಯಶಸ್ವಿಯಾಗಿದೆ.

2019 ಮಾಚ್‌ರ್‍ 30ರಂದು ಹೊರಡಿಸಿದ ಅಧಿಸೂಚನೆ ಅನ್ವಯ ಬ್ಯಾಂಕ್‌ ಆಫ್‌ ಬರೋಡಾ, ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ಎಲ್ಲ ಶಾಖೆಗಳು ಬ್ಯಾಂಕ್‌ ಆಫ್‌ ಬರೋಡಾ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.

ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕಿನ ಠೇವಣಿದಾರರೂ ಸೇರಿದಂತೆ ಎಲ್ಲ ಗ್ರಾಹಕರನ್ನು ಬ್ಯಾಂಕ್‌ ಆಫ್‌ ಬರೋಡಾ ಗ್ರಾಹಕರಾಗಿ ಏ.1ರಿಂದಲೇ ಪರಿಗಣಿಸಲಾಗುವುದು ಎಂದ ಅವರು, ಈ ವಿಲೀನಗೊಂಡ ಬ್ಯಾಂಕ್‌ಗಳು ವಿಸ್ತೃತವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿವೆ.

9500ಕ್ಕೂ ಹೆಚ್ಚು ಶಾಖೆಗಳು, 13400ಕ್ಕೂ ಹೆಚ್ಚು ಎಟಿಎಂಗಳು, 85 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು, 8.75 ಲಕ್ಷ ಕೋಟಿ ರು.ಗಳಿಗೂ ಅಧಿಕ ಠೇವಣಿಗಳು ಹಾಗೂ 6.25 ಲಕ್ಷ ಕೋಟಿ ರು.ಗಳಿಗೂ ಅಧಿಕ ಮುಂಗಡವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರ, ಗುಜರಾತ್‌, ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಶಾಖೆಗಳ ಜಾಲಕ್ಕೆ ಮತ್ತಷ್ಟುಸೇರ್ಪಡೆಗೊಳಿಸಲಿದೆ. ಗುಜರಾತ್‌ನಲ್ಲಿ ಶೇ.22ರಷ್ಟುಮಾರುಕಟ್ಟೆಪಾಲು ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಂಥ ರಾಜ್ಯಗಳಲ್ಲಿ ಶೇ.8ರಿಂದ 10ರಷ್ಟುಪಾಲು ಹೊಂದಿದೆ.

120 ದಶಲಕ್ಷಕ್ಕೂ ಅಧಿಕ ಗ್ರಾಹಕರು ಬ್ಯಾಂಕಿಂಗ್‌ ಸೇವೆಗಳನ್ನು ಪಡೆಯಲಿದ್ದು, ನಗದು ನಿರ್ವಹಣೆ ಪರಿಹಾರಗಳು, ಹಣಕಾಸು ಯೋಜನೆ, ಸಂಪತ್ತು ವ್ಯವಸ್ಥಾಪನೆ ಸೇವೆಗಳು ಸೇರಿದಂತೆ ವಿಸ್ತೃತವಾದ ಉತ್ಪನ್ನ ಶ್ರೇಣಿಯ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ದೇನಾ ಬ್ಯಾಂಕ್‌ ಗ್ರಾಹಕರು ತಕ್ಷಣದಿಂದಲೇ ನವೀಕೃತ ವ್ಯವಸ್ಥೆಯ ಮೂಲಕ ಸಾಲ ಸೌಲಭ್ಯಗಳನ್ನು ಪಡೆಯಲಿದ್ದಾರೆ. ವಿದೇಶಿ ಕರೆನ್ಸಿ ನೆರವು ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಗ್ರಾಹಕರಿಗೆ ಲಭ್ಯವಾಗಲಿದ್ದು, ಇದರ ಜತೆಗೆ ಬ್ಯಾಂಕ್‌ ಆಫ್‌ ಬರೋಡಾದ 101 ಅಂತಾರಾಷ್ಟ್ರೀಯ ಶಾಖೆಗಳ ಸೇವೆಯನ್ನೂ ಪಡೆಯಲಿದ್ದಾರೆ. ವಿಜಯ ಬ್ಯಾಂಕಿನ ಯೋಜನೆಗಳಾದ ಎಸ್‌ಆರ್‌ಟಿಓ ಫಂಡಿಂಗ್‌, ಪ್ಲಾಂಟೇಷನ್‌ ಫೈನಾನ್ಸಿಂಗ್‌ ಸೌಲಭ್ಯಗಳು ಇತರ ಎರಡು ಬ್ಯಾಂಕ್‌ಗಳ ಗ್ರಾಹಕರಿಗೂ ದೊರೆಯಲಿವೆ ಎಂದರು.

ಮಾಸಾಂತ್ಯದೊಳಗೆ ಬ್ಯಾಂಕ್‌ ವಿಲೀನ ಪ್ರಕ್ರಿಯೆ ಪೂರ್ಣ

ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ಗಳು ಬಿಒಬಿ ಬ್ಯಾಂಕ್‌ನೊಂದಿಗಿನ ವಿಲೀನ ಪ್ರಕ್ರಿಯೆ ಆರಂಭಗೊಂಡಿದ್ದು, ಏಪ್ರಿಲ್‌ ಮಾಸಾಂತ್ಯದೊಳಗೆ ಪರಿಪೂರ್ಣವಾಗಿ ವಿಲೀನಗೊಂಡು ಏಕ ಕೋರ್‌ ಬ್ಯಾಂಕ್‌ ವ್ಯವಸ್ಥೆ ಜಾರಿಯಾಗಲಿದೆ. ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ಗಳ ಶಾಖೆಗಳ ಮುಂದಿನ ನಾಮಫಲಕಗಳ ಬದಲಾಯಿಸುವ ಕಾರ್ಯವು ಏ. 1 ರಿಂದಲೇ ಆರಂಭಗೊಂಡಿದೆ.

ಅಲ್ಲದೆ, ಬ್ಯಾಂಕ್‌ನ ಆಂತರಿಕ ವ್ಯವಹಾರಕ್ಕೆ ಸಂಬಂಧಿಸಿ ಹಾಗೂ ಗ್ರಾಹಕರಿಗೆ ನೀಡುವ ಸೇವೆಗಳಲ್ಲಿ ಬ್ಯಾಂಕ್‌ಗಳ ಹೆಸರು ಬದಲಾವಣೆ ಸಂಬಂಧಿಸಿದ ಎಲ್ಲಾ (ಚೆಕ್‌, ಪಾಸ್‌ ಬುಕ್‌ ಇತ್ಯಾದಿ) ಸೇವೆಗಳಲ್ಲೂ ಹೆಸರು ಬದಲಾವಣೆ ಪ್ರಕ್ರಿಯೆ ಈ ಮಾಸಾಂತ್ಯದೊಳಿಗೆ ಪೂರ್ಣಗೊಳ್ಳಲಿದೆ.

ಜತೆಗೆ, ಮಾಹಿತಿ ತಂತ್ರಜ್ಞಾನ ಸಮನ್ವಯ ಪ್ರಕ್ರಿಯೆ 12-18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಅದರ ಅನ್ವಯ ಮೂರು ಬ್ಯಾಂಕ್‌ಗಳ ಗ್ರಾಹಕರ ಖಾತೆಗಳು ಏಕೈಕ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ವರ್ಗಾವಣೆಗೊಳ್ಳಲಿವೆ ಎಂದು ಬ್ಯಾಂಕ್‌ನ ಮೂಲಗಳು ತಿಳಿಸಿವೆ.

Follow Us:
Download App:
  • android
  • ios