ಮುಂಬೈ[ಡಿ.01]: ಎಟಿಎಂಗಳಲ್ಲಿ ಐದು ಬಾರಿ ಹಣ ಹಿಂಪಡೆಯುವುದು, ಖಾತೆದಾರರಿಗೆ ಬ್ಯಾಂಕುಗಳು ಚೆಕ್‌ ಪುಸ್ತಕ ನೀಡುವುದು ಉಚಿತ ಸೌಲಭ್ಯವೇ ಆಗಿದ್ದರೂ, ಅದಕ್ಕೆ ಇನ್ನು ಮುಂದೆ ಗ್ರಾಹಕರು ಶೇ.18ರಷ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಬೇಕಾಗಬಹುದು. ಶೀಘ್ರದಲ್ಲೇ ಬ್ಯಾಂಕುಗಳಿಂದ ಈ ಕುರಿತಂತೆ ಅಧಿಕೃತ ಘೋಷಣೆ ಹೊರಬೀಳುವ ಎಲ್ಲ ಸಾಧ್ಯತೆಗಳಿವೆ.

ಬ್ಯಾಂಕುಗಳು ಗ್ರಾಹಕರಿಗೆ ವಿವಿಧ ಉಚಿತ ಸೇವೆಗಳನ್ನು ಒದಗಿಸುತ್ತವೆ. ಆದರೆ ಅದು ಗ್ರಾಹಕರಿಗೆ ಉಚಿತವಾಗಿದ್ದರೂ, ಅದಕ್ಕೊಂದು ಮೌಲ್ಯ ಇರುತ್ತದೆ. ಅದಕ್ಕೆ ತೆರಿಗೆ ಕಟ್ಟಿಎಂದು, ತೆರಿಗೆ ಇಲಾಖೆ ಬ್ಯಾಂಕುಗಳಿಗೆ ಕಳೆದ ಎರಡು ತಿಂಗಳಿನಿಂದ ಪ್ರಾಥಮಿಕ ನೋಟಿಸುಗಳನ್ನು ರವಾನಿಸುತ್ತಿದೆ. ಹೀಗಾಗಿ ಉಚಿತ ಸೇವೆ ಪಡೆಯುತ್ತಿರುವ ಗ್ರಾಹಕರಿಗೆ ಆ ತೆರಿಗೆ ಹೊರೆಯನ್ನು ವರ್ಗಾಯಿಸಲು ಬ್ಯಾಂಕುಗಳು ಸಜ್ಜಾಗುತ್ತಿವೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕುಗಳು ಹೊರೆಯನ್ನು ವರ್ಗಾವಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದು, ಈ ತಿಂಗಳಿನಿಂದಲೇ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿವೆ. ಆನಂತರ ಎಲ್ಲ ಬ್ಯಾಂಕುಗಳೂ ಅದೇ ಹಾದಿ ತುಳಿಯುವ ನಿರೀಕ್ಷೆ ಇದೆ.

ಒಂದೇ ರೀತಿಯ ವ್ಯವಹಾರಕ್ಕೆ ಬ್ಯಾಂಕುಗಳಿಂದ ಬ್ಯಾಂಕುಗಳಿಗೆ ಜಿಎಸ್‌ಟಿಯಲ್ಲಿ ವ್ಯತ್ಯಾಸವಾಗುವ ಸಂಭವವಿದೆ. ಯಾವ ಬ್ಯಾಂಕು ಯಾವ ಸೇವೆಗೆ ಎಷ್ಟುಮೌಲ್ಯ ಎಂದು ನಿಗದಿಪಡಿಸುತ್ತದೋ ಅದರ ಮೇಲೆ ಶೇ.18ರ ಜಿಎಸ್‌ಟಿ ಲೆಕ್ಕಾಚಾರ ನಡೆಯುತ್ತದೆ. ಈ ರೀತಿ ಸಂಗ್ರಹವಾಗುವ ಹಣ ನೇರವಾಗಿ ಸರ್ಕಾರಕ್ಕೆ ಹೋಗಲಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘದ ಸಿಇಒ ವಿ.ಜಿ. ಕಣ್ಣನ್‌ ಅವರು ತಿಳಿಸಿದ್ದಾರೆ.

ಚೆಕ್‌ಬುಕ್‌, ಹೆಚ್ಚುವರಿ ಕ್ರೆಡಿಟ್‌ ಕಾರ್ಡ್‌, ಎಟಿಎಂ ಬಳಕೆ ಹಾಗೂ ಇಂಧನ ಸರ್ಚಾಜ್‌ರ್‍ ವಾಪಸ್‌ನಂತಹ ಹಲವು ಉಚಿತ ಸೇವೆಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುತ್ತಿವೆ.