ಬೆಂಗಳೂರು(ನ.9): ನಿಮ್ಮ ಬ್ಯಾಂಕ್ ನಿಂದ ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ಸಂದೇಶಗಳು ಮೊಬೈಲ್ ಗೆ ಬರುತ್ತಿರಬಹುದು.

ನಿಮ್ಮಲ್ಲಿ ಚಿಪ್ ಆಧಾರಿತ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡುಗಳಿಲ್ಲದಿದ್ದರೆ ಅಥವಾ ಹಳೆಯ ಕಾರ್ಡುಗಳನ್ನು ಹೊಂದಿದ್ದರೆ ಅದು ಡಿಸೆಂಬರ್ 31ರವರೆಗೆ ಮಾತ್ರ ಮೌಲ್ಯವನ್ನು ಹೊಂದಿರುತ್ತದೆ. ಹಳೆಯ ಕಾರ್ಡುಗಳನ್ನು ಹೊಂದಿದ್ದವರು ಈ ವರ್ಷದ ಅಂತ್ಯದೊಳಗೆ ಹೊಸ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಬೇಕು.

ಹೊಸ ಕಾರ್ಡ್ ಯಾಕೆ?: 

ಗ್ರಾಹಕರಿಗೆ ಚಿಪ್ ಆಧಾರಿತ ಹೊಸ ಕಾರ್ಡುಗಳನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಆನ್ ಲೈನ್ ವಂಚನೆಯಿಂದ ಗ್ರಾಹಕರ ಖಾತೆಗಳನ್ನು ರಕ್ಷಿಸಲು ಆರ್‌ಬಿಐ ಈ ನಿರ್ಧಾರ ಮಾಡಿದೆ.

ಬ್ಯಾಂಕುಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಪೈರೆಸಿ ಇತ್ತೀಚೆಗೆ ಬಹಳ ಆತಂಕಕಾರಿ ವಿಷಯವಾಗಿದೆ. ಅದನ್ನು ನಿವಾರಿಸಲು ಆರ್ ಬಿಐ ಹೊಸ ಚಿಪ್ ಆಧಾರಿತ ಇಎಂವಿ ಕಾರ್ಡುಗಳನ್ನು ತಂದಿದೆ. ಅದು ಗ್ರಾಹಕರ ಹಣವನ್ನು ಆನ್ ಲೈನ್ ವಂಚನೆಗಾರರಿಂದ ರಕ್ಷಿಸುತ್ತದೆ. ಈ ಹೊಸ ನಿಯಮ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ಕಾರ್ಡುಗಳಿಗೆ ಅನ್ವಯವಾಗುತ್ತದೆ.

ಕಳೆದ ಜೂನ್ ನಲ್ಲಿ ಲೆಕ್ಕ ಹಾಕಿರುವಂತೆ ನಮ್ಮ ದೇಶದಲ್ಲಿ 39 ಮಿಲಿಯನ್ ಗಿಂತಲೂ ಅಧಿಕ ಕ್ರೆಡಿಟ್ ಕಾರ್ಡುಗಳು ಮತ್ತು 944 ಮಿಲಿಯನ್ ಡೆಬಿಟ್ ಕಾರ್ಡುಗಳು ಸಕ್ರಿಯವಾಗಿವೆ.

ಇಎಂವಿ ಕಾರ್ಡುಗಳು ಹೇಗೆ ಸುರಕ್ಷಿತ?: 

ಈಗಿರುವ ಹಳೆಯ ಡೆಬಿಟ್, ಕ್ರೆಡಿಟ್ ಕಾರ್ಡುಗಳು ಮ್ಯಾಗ್ನೆಟಿಕ್ ಸ್ಟ್ರಿಪ್ ಆಧಾರಿತವಾದದ್ದು. ಅದರಲ್ಲಿ ಗ್ರಾಹಕರ ಖಾತೆ ವಿವರಗಳು ತುಂಬಿರುತ್ತದೆ. ಎಟಿಎಂ ಮೆಶಿನ್ ನಲ್ಲಿ ಕಾರ್ಡನ್ನು ಸ್ವೈಪ್ ಮಾಡಿದಾಗ ಖಾತೆಯ ಮಾಹಿತಿ ಪ್ರಕ್ರಿಯೆ ನಡೆದು ವಹಿವಾಟು ಏರ್ಪಾಡಾಗುತ್ತದೆ.

ಇಎಂವಿಯಲ್ಲಾದರೆ, ಕಾರ್ಡುಗಳಲ್ಲಿ ಚಿಪ್ ಇರುತ್ತದೆ. ಅದರಲ್ಲಿ ಗ್ರಾಹಕರ ಖಾತೆಯ ಸಂಪೂರ್ಣ ಮಾಹಿತಿ ಅಡಗಿರುತ್ತದೆ. ಎಟಿಎಂನಲ್ಲಿ ಕಾರ್ಡನ್ನು ಬಳಸಿದಾಗ ಅದು ಪಿನ್ ಸಂಖ್ಯೆಯನ್ನು ಕೇಳುತ್ತದೆ. ನಂತರವಷ್ಟೇ ಅಲ್ಲಿ ವಹಿವಾಟು ನಡೆಯುತ್ತದೆ. ಪಿನ್ ಸಂಖ್ಯೆಯಿಲ್ಲದೆ ಹಣ ತೆಗೆಯಲು ಸಾಧ್ಯವಿಲ್ಲ, ಹೀಗಾಗಿ ವಂಚಕರಿಂದ ಕಾಪಾಡಬಹುದು.

ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡುಗಳ ಹಿಂಭಾಗ ಕಪ್ಪು ಗೆರೆಗಳು ಮಾತ್ರ ಇದ್ದರೆ ಮತ್ತು ಚಿನ್ನದ ಬಣ್ಣದ ಚಿಪ್ ಕಾರ್ಡಿನ ಮುಂಭಾಗ ಕೇಂದ್ರ ಭಾಗದಲ್ಲಿ ಅಥವಾ ಎಡಭಾಗದಲ್ಲಿದ್ದರೆ ಅದು ಮ್ಯಾಗ್ ಸ್ಟ್ರೈಪ್ ಗಳಾಗಿರುತ್ತದೆ. ಅದನ್ನು ಬ್ಯಾಂಕಿಗೆ ನೀಡಿ ಹೊಸ ಕಾರ್ಡು ಪಡೆಯಬೇಕು.

ಹೊಸ ಕಾರ್ಡಿಗೆ ಅರ್ಜಿ ಸಲ್ಲಿಕೆ ಹೇಗೆ?: 

ಹೊಸ ಕಾರ್ಡು ಪಡೆಯಲು ಯಾವುದೇ ಶುಲ್ಕವಿಲ್ಲ. ನಿಮ್ಮ ಬ್ಯಾಂಕಿಗೆ ಪಾಸ್ ಬುಕ್ ನೊಂದಿಗೆ ಭೇಟಿ ನೀಡಿ. ಹೊಸ ಕಾರ್ಡು ಬೇಕೆಂಬ ಅರ್ಜಿಯೊಂದನ್ನು ತುಂಬಿ ಬ್ಯಾಂಕಿಗೆ ನೀಡಿ. ಆನ್ ಲೈನ್ ನಲ್ಲಿ ಕೂಡ ಹೊಸ ಚಿಪ್ ಆಧಾರಿತ ಡೆಬಿಟ್/ ಕ್ರೆಡಿಟ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.