ಈಶ್ವರ ಶೆಟ್ಟರ 

ಬಾಗಲಕೋಟೆ(ಮಾ.06): ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್ ಬಾಗಲಕೋಟೆ ಜಿಲ್ಲೆಗೆ ಸಂಪೂರ್ಣ ನಿರಾಶದಾಯಕ ಬಜೆಟ್ ಆಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ರೈತರ ಹಾಗೂ ಸಂತ್ರಸ್ತರ ಧ್ವನಿಯಾಗಬೇಕಿದ್ದ ಬಜೆಟ್‌ನಲ್ಲಿ ಯಾವುದೇ ರೀತಿಯಲ್ಲಿ ಯೋಜನೆಯ ಅನುಷ್ಠಾನದ ಪ್ರಸ್ತಾವ ಇಲ್ಲದಿರುವುದು ಸಹಜವಾಗಿ ಜಿಲ್ಲೆಯ ಸಂತ್ರಸ್ತರಲ್ಲಿ ಅಸಮಾಧಾನ ಮೂಡಿಸಿದೆ. 

ಏಷ್ಯಾದಲ್ಲಿಯೇ ಅತಿದೊಡ್ಡ ನೀರಾವರಿ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಅದರಲ್ಲೂ ಯೋಜನೆಯ ಕೊನೆ ಹಂತದ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಪರ್ವ ಕಾಲವಾಗಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಪ್ರತಿನಿಧಿಯೂ ಆಗಿರುವ ಸರ್ಕಾರದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರ ಭರವಸೆಯ ಮಾತುಗಳು ಮೇಲ್ನೋಟಕ್ಕೆ ಹುಸಿಯಾದಂತಿವೆ. 
ಬಜೆಟ್ ನಲ್ಲಿ ಎತ್ತಿನಹೊಳೆ, ಕಳಸಾಬಂಡೂರಿ ಯೋಜನೆಗೆ ನಿರ್ದಿಷ್ಟ ಹಣಕಾಸು ಘೋಷಿಸಿರುವ ಸರ್ಕಾರ ಕೃಷ್ಣಾ ಸಂತ್ರಸ್ತರ ಪುನರ್ವಸತಿಗೆ ಯಾಕೆ ನಿರ್ದಿಷ್ಟ ಹಣ ಘೋಷಿಸಿಲ್ಲ ಎಂಬುದು ಸಂತ್ರಸ್ತರ ಪ್ರಶ್ನೆಯಾಗಿದೆ. ಹಲವು ವರ್ಷಗಳ ಹಿಂದೆ ಬಾಗಲಕೋಟೆಗೆ ಬಜೆಟ್‌ನಲ್ಲಿ ಘೋಷಿಸಲಾದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಅನಿವಾರ್ಯತೆಯೊಂದಿಗೆ ಜಿಲ್ಲೆಯಲ್ಲಿ ಆರಂಭಗೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಸರ್ಕಾರದಿಂದ ಸ್ಪಂದನೆ ದೊರೆಯಲಾರದ್ದು ನಿರಾಶೆ ತಂದಿದ್ದರೆ, ಪಾರಂಪರಿಕ ತಾಣವಾಗಿರುವ ಐಹೊಳೆ, ಪಟ್ಟದಕಲ್ಲು ಸ್ಥಳಾಂತರದ ವಿಷಯ ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ಅಲ್ಲಿನ ಗ್ರಾಮಸ್ಥರಲ್ಲಿ ನಿರಾಶೆ ಮೂಡಿಸಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನೆಗುದಿಗೆ ಬಿದ್ದಿರುವ ಏತ ನೀರಾವರಿಗಳು, ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯ, ನೆರೆ ಸಂತ್ರಸ್ತರ ಶಾಶ್ವತ ಬದುಕಿಗೆ ಸಿಗದ ವಿಶೇಷ ಅನುದಾನ, ಜಿಲ್ಲಾ ಕೇಂದ್ರವಾಗಿರುವ ಬಾಗಲಕೋಟೆ ಪರಿಸರದಲ್ಲಿ ಪ್ರಸ್ತಾಪವಾಗದ ಕೈಗಾರಿಕೆಗಳ ಕುರಿತು ಜನತೆಯಲ್ಲಿ ಅಸಮಾಧಾನ ತಂದಿದೆ. 

ಜಿಲ್ಲೆಗೆ ಸಿಗದ ಜಲಧಾರೆ: 

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರದ ಮಹತ್ವಾಂಕಾಕ್ಷೆಯ ಯೋಜನೆಯಾದ ಜಲಧಾರೆಯ ಮೊದಲನೆ ಹಂತದಲ್ಲಿ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ ಬಜೆಟ್‌ನಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಿಕೊಂಡಿದೆ. ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟಮೆಂಟ್ ಬ್ಯಾಂಕ್ (ಎಐಐಬಿ) ನೆರವಿನೊಂದಿಗೆ 700 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 

ವಿಪರ್ಯಾಸವೆಂದರೆ ಈ ಯೋಜನೆಯ ಆರಂ ಭಿಕ ಚರ್ಚೆ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಬಾಗಲಕೋಟೆಯಲ್ಲಿ ಸಭೆ ಸೇರಿದ ಸಂದರ್ಭದಲ್ಲಿ ನದಿಗಳ ಮೂಲವಾಗಿರುವ ಬಾಗಲಕೋಟೆ ಜಿಲ್ಲೆಯನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಅಲ್ಲದೆ, ವಿಫಲವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬದಲಾಗಿ ಜಲಧಾರೆ ಯೋಜನೆಯನ್ನು ತರಲು ನಿರ್ಧರಿಸುವ ಮಾತುಗಳನ್ನಾಡಿದ್ದರು. ಈಗ ಅದು ಸಹ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಉಪಮುಖ್ಯಮಂತ್ರಿಯಂತಹ ಬಹುದೊಡ್ಡ ಜವಾಬ್ದಾರಿ ಇರುವ ಗೋವಿಂದ ಕಾರಜೋಳ ಸೇರಿದಂತೆ ಪ್ರಭಾವಿ ಶಾಸಕರನ್ನು ಹೊಂದಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ಬಾಗಲಕೋಟೆ ವಿಷಯದಲ್ಲಿ ಯಾಕೆ ಈ ನಿರಾಸಕ್ತಿ ಎಂಬುವುದು ಯಕ್ಷಪ್ರಶ್ನೆಯಾಗಿ ಜಿಲ್ಲೆಯ ಜನತೆಯನ್ನು ಕಾಡಲಾರಂಭಿಸಿದೆ. ಒಟ್ಟಾರೆ ಗುರುವಾರ ಬಿಎಸ್‌ವೈ ಮಂಡಿಸಿರುವ ಬಜೆಟ್ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗದೆ ಇರುವುದು ಜನರಲ್ಲಿ ಭ್ರಮ ನಿರಸನ ಮೂಡಿಸಿದೆ.

ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿಯ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 25 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಆದರೆ ಬಾದಾಮಿ ಕ್ಷೇತ್ರದಲ್ಲಿನ ಒಟ್ಟಾರೆ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿಗಳು ಪತ್ರದ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದು ಒಟ್ಟು 1500 ಕೋಟಿ ಪ್ರಸ್ತಾಪವಾಗಿತ್ತು. ಆದರೆ ಸಿಕ್ಕಿದ್ದು ಮಾತ್ರ ಕೇವಲ 25 ಕೋಟಿ ಮಾತ್ರ. ಮುಧೋಳ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಮುಧೋಳ ನಗರಕ್ಕೆ ಕೆ-ಸೇಫ್ ಅಡಿಯಲ್ಲಿ ಹೊಸ ಅಗ್ನಿಶಾಮಕ ಠಾಣೆಯನ್ನು ಈ ಬಜೆಟ್‌ನಲ್ಲಿ ಪಡೆದಿರುವುದು ಒಂದಾದರೆ, ಸ್ವಾತಂತ್ರ್ಯ ಹೋರಾಟದ ಭಾಗವಾದ ಮುಧೋಳ ತಾಲೂಕಿನ ಹಲಗಲಿ ಬೇಡರು ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 1 ಲಕ್ಷ ನಗದು ಪ್ರಶಸ್ತಿ ರೂಪದಲ್ಲಿ ನೀಡಲು ನಿರ್ಧರಿಸಿದ್ದು, 2020-21 ನೇ ಸಾಲಿನಲ್ಲಿ 60 ಲಕ್ಷಗಳನ್ನು ನಿಗದಿಪಡಿಸಿರುವುದು ಮಾತ್ರ ಜಿಲ್ಲೆಯ ಮಟ್ಟಿಗೆ ಸರ್ಕಾರದ ಕೊಡುಗೆ ಎನ್ನಬಹುದು.

ಸರ್ವತೋಮುಖ ಅಭಿವೃದ್ಧಿಯ ಬಜೆಟ್

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾ ಟಕ ರಾಜ್ಯದ ಸರ್ವ ಜನಾಂಗದ ಕಲ್ಯಾ ಣವನ್ನು ಗಮನದಲ್ಲಿ ಟ್ಟುಕೊಂಡು ಸರ್ವತೋಮುಖ ಅಭಿವೃದ್ಧಿಗೆ 2020-21 ನೇ ಸಾಲಿನ ಆಯವ್ಯಯ ಮಂಡಿ ಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ರಾಜ್ಯ ನೆರೆ-ಬರ, ರೈತರ ಸಾಲ ಮನ್ನಾ ಯೋಜನೆಯ ವ್ಯವಸ್ಥಿತ ಅನುಷ್ಠಾನ ಸೇರಿದಂತೆ, ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗಾಗಿ ಅತ್ಯುತ್ತಮವಾದ ಆಯವ್ಯಯ ವನ್ನು ಮಂಡಿಸಿದ್ದಾರೆ. ಕೃಷ್ಟಾ ಮೇಲ್ದಂಡೆ ಯೋಜನೆಗೆ ನೀರಾವರಿ ಇಲಾಖೆಯು ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವ ಸಂದರ್ಭದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್‌ಆರ್) ಕಾಮಗಾರಿಗಳಿಗೆ 10 ಸಾವಿರ ಕೋಟಿ ರು. ಅನುದಾನವನ್ನು 2020-21 ನೇ ಸಾಲಿನಲ್ಲಿ ಒದಗಿಸುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೀರಾವರಿಗೆ ವಿಶೇಷ ಕಾಳಜಿ: ಸಂಗಮೇಶ

ಕರ್ನಾಟಕದ ನೀರಾವರಿ ಹಾಗೂ ನೀರು ಸಮಪ ಕರ್ ನಿರ್ವಹಣೆ ಕುರಿತು ನಾನು ಸರ್ಕಾರ ಕ್ಕೆ ಸಲ್ಲಿಸಿದ ಡಿ.ಪಿ.ಆರ್‌ಗಳನ್ನು ಪರಿಗಣಿ ಸಿ ಅವುಗಳಲ್ಲಿ ಐದು ಸಲಹೆಗಳನ್ನು ಸ್ವೀಕರಿಸಿ ಬಜೆಟ್ ನಲ್ಲಿ ಘೋಷಿಸಿರುವುದು ತಮಗೆ ಸಂತೋಷ ತಂದಿದೆ ಎಂದು ಯುವ ಉದ್ಯಮಿ ಸಂಗಮೇಶ ನಿರಾಣಿ ತಿಳಿಸಿದ್ದಾರೆ. ತುಂಗಭದ್ರಾ ನದಿಗೆ ನವಲೆ ಎಂಬಲ್ಲಿ ಪರ್ಯಾಯ ಆಣೆಕಟ್ಟು, ನಿರ್ಮಾಣಕ್ಕೆ ಸರ್ಕಾರದ ಪರವಾ ಗಿ ಡಿ.ಪಿ.ಆರ್ ರಚನೆಗೆ 20 ಕೋಟಿ ಮೀಸಲಿರಿಸಲಾಗಿದೆ. ಮಳೆ ನೀರು ಕೊಯ್ಲು ವಿಶೇಷ ಯೋಜನೆಗೆ ಅನುದಾನ, ಅಂ ತರ್ಜಲವೃದ್ಧಿ, ಕೆರೆಗಳ ರಕ್ಷಣೆ, ಹನಿ ನೀರಾವರಿ, ಏತ ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಅವಕಾಶ ಮಾಡಿ ಕೊಡಲಾಗಿದೆ. ಯಡಿಯೂರಪ್ಪ ರೈತ ರು ಹಾಗೂ ನೀರಾವರಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂಬುದನ್ನು ಪ್ರಸಕ್ತ ಬಜೆಟ್ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.