ಅಜೀಂ ಪ್ರೇಮ್‌ಜಿ ನಂ.1 ದಾನಿ, 2021ರಲ್ಲಿ 9,713 ಕೋಟಿ ದಾನ: ಅದಾನಿಗೆ 8ನೇ ಸ್ಥಾನ!
* ಅಜೀಂ ಪ್ರೇಮ್‌ಜಿ ಮತ್ತೊಮ್ಮೆ ಭಾರತದ ನಂ.1 ದಾನಿ ಎಂಬ ಹಿರಿಮೆಗೆ ಪಾತ್ರ
* ಅಜೀಂ ಪ್ರೇಮ್‌ಜಿ ನಂ.1 ದಾನಿ 2021ರಲ್ಲಿ 9713 ಕೋಟಿ ದಾನ
* ಮುಖೇಶ್ ಅಂಬಾನಿ ನಂ.3, ಗೌತಮ್ ಅದಾನಿಗೆ 8ನೇ ಸ್ಥಾನ
ಮುಂಬೈ(ಅ.29): ಬೆಂಗಳೂರು ಮೂಲದ ಉದ್ಯಮಿ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಮತ್ತೊಮ್ಮೆ ಭಾರತದ ನಂ.1 ದಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 2021ರಲ್ಲಿ ಅಜೀಂ ನಿತ್ಯ 27 ಕೋಟಿ ರು.ನಂತೆ ಒಂದು ವರ್ಷದಲ್ಲಿ ಒಟ್ಟಾರೆ 9713 ಕೋಟಿ ರು.ಗಳನ್ನು ವಿವಿಧ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಎಡೆಲ್‌ಗೀವ್ ಹರೂನ್ ಇಂಡಿಯಾ ದಾನಿಗಳ ಪಟ್ಟಿಬಿಡುಗಡೆಯಾಗಿದ್ದು, ಅದರನ್ವಯ ಅಜೀಂ ಪ್ರೇಮ್ ಜಿ (9713 ಕೋಟಿ ರು.), ಎಚ್‌ಸಿಎಲ್ ಸಂಸ್ಥಾಪಕ ಶಿವ ನಾಡಾರ್ (1263 ಕೋಟಿ ರು.) ಮತ್ತು ರಿಲಯನ್ ಮುಖ್ಯಸ್ಥ ಮುಕೇಶ್ ಅಂಬಾನಿ (577 ಕೋಟಿ ರು.), ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ (377 ಕೋಟಿ ರು.), ಇಸ್ಫೋಸಿಸ್‌ನ ಸಹ ಸಂಸ್ಥಾಪಕ ನಂದನ್ ನೀಲೇಕಣಿ (189 ಕೋಟಿ ರು.) ಟಾಪ್ 5 ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ನಂ.2 ಶ್ರೀಮಂತ ಗೌತಮ್ ಅದಾನಿ 130 ಕೋಟಿ ರು. ದಾನ ಮಾಡುವ ಮೂಲಕ 8ನೇ ಸ್ಥಾನದಲ್ಲಿದ್ದಾರೆ.
ಈ ದಾನದಲ್ಲಿ ಬಹಳಷ್ಟುಹಣ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ ಮುಂತಾದವುಗಳಿಗೆ ವ್ಯಯವಾಗಲಿದೆ. ಭಾರತದ ಅತಿ ಹೆಚ್ಚು ಪ್ರಮಾಣದ ಹೂಡಿಕೆದಾರ ರಾಕೇಶ್ ಜುಂಝುನ್‌ವಾಲಾ 50 ಕೋಟಿ ರು. ದಾನ ಮಾಡುವ ಮೂಲಕ ಮೊದಲ ಬಾರಿ ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.
ಹೆಸರು ಹಾಗೂ ದಾನದ ಪ್ರಮಾಣ
* ಅಜೀಂ ಪ್ರೇಮ್‌ಜಿ 9713 ಕೋಟಿ ರು.
* ಶಿವನಾಡರ್ 1263 ಕೋಟಿ ರು.
* ಮುಖೇಶ್ ಅಂಬಾನಿ 577 ಕೋಟಿ ರು.
* ಕುಮಾರ ಮಂಗಲಂ ಬಿರ್ಲಾ 377 ಕೋಟಿ ರು.
* ನಂದನ್ ನಿಲೇಕಣಿ 183 ಕೋಟಿ ರು.
* ಹಿಂದುಜಾ ಕುಟುಂಬ 166 ಕೋಟಿ ರು.
* ಬಜಾಜ್ ಕುಟುಂಬ 136 ಕೋಟಿ ರು.
* ಗೌತಮ್ ಅದಾನಿ 130 ಕೋಟಿ ರು.
* ಅನಿಲ್ ಅಗರ್‌ವಾಲ್ 130 ಕೋಟಿ ರು.
* ಬರ್ಮನ್ ಕುಟುಂಬ 114 ಕೋಟಿ ರು.
ಬೆಜೋಸ್, ಮಸ್ಕ್ ಸಾಲಿಗೆ ರಿಲಯನ್ಸ್ ಒಡೆಯ: 100 ಶತಕೋಟಿ ಡಾಲರ್ ಕ್ಲಬ್‌ಗೆ ಅಂಬಾನಿ!
ಸತತ 14 ವರ್ಷಗಳಿಂದ ಭಾರತದ ನಂ.1 ಶ್ರೀಮಂತ, 4 ವರ್ಷಗಳಿಂದ ಏಷ್ಯಾದ(Asia) ನಂ.1 ಸಿರಿವಂತ ಎಂಬ ಹಿರಿಮೆ ಹೊಂದಿರುವ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ(Mukesh Ambani) ಇದೀಗ 100 ಶತಕೋಟಿ ಡಾಲರ್ (7.50 ಲಕ್ಷ ಕೋಟಿ) ಆಸ್ತಿ ಹೊಂದಿರುವ ವಿಶ್ವದ 11 ಭಾರೀ ಶ್ರೀಮಂತರ ಪಟ್ಟಿಸೇರಿದ್ದಾರೆ.
ಶುಕ್ರವಾರ ರಿಲಯನ್ ಇಂಡಸ್ಟ್ರೀಸ್(Reliance Industries) ಷೇರು ಮೌಲ್ಯಗಳು ಭಾರೀ ಏರಿಕೆ ಕಂಡ ಬೆನ್ನಲ್ಲೇ ಅಂಬಾನಿ ಆಸ್ತಿ 100.6 ಶತಕೋಟಿ ಡಾಲರ್ (7.54 ಲಕ್ಷ ಕೋಟಿ ರು.) ದಾಟಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮುಕೇಶ್ ವಿಶ್ವದ ಆಗರ್ಭ ಸಿರಿವಂತರ ಪಟ್ಟಿಸೇರಿದ್ದಾರೆ ಎಂದು ‘ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್’(Bloomberg Billionaires Index) ವರದಿ ಮಾಡಿದೆ.
ಇದುವರೆಗೆ 10 ಶ್ರೀಮಂತರು ಮಾತ್ರವೇ 100 ಶತಕೋಟಿ ಡಾಲರ್ ಪಟ್ಟಿಯಲ್ಲಿದ್ದರು. ಅವರೆಂದರೆ ಟೆಸ್ಲಾದ ಎಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜೋಸ್, ಲೂಯಿಸ್ ವ್ಯೂಟನ್‌ನ ಬೆರ್ನಾರ್ಡ್ ಅರ್ನಾಲ್ಟ್, ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್, ಗೂಗಲ್‌ನ ಲ್ಯಾರಿಪೇಜ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಗೂಗಲ್‌ನ ಸೆರ್ಗೆಯ್ ಬ್ರಿನ್, ಒರಾಕಲ್‌ನ ಲ್ಯಾರಿ ಎಲ್ಲಿಸನ್, ಹೂಡಿಕೆದಾರ ಸ್ಟೀವ್ ಬಲ್ಮಾರ್, ಹೂಡಿಕೆದಾರ ವಾರನ್ ಬಫೆಟ್.