ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನ ಉಳಿಸಿಕೊಂಡ ಮುಖೇಶ್ ಅಂಬಾನಿ; ಅದಾನಿ, ದಮಾನಿ ಸಂಪತ್ತಿನಲ್ಲಿ ಇಳಿಕೆ
ಬ್ಲೂಮ್ ಬರ್ಗ್ ಬಿಡುಗಡೆಗೊಳಿಸಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಈ ವರ್ಷದ ಜನವರಿಯಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ನವದೆಹಲಿ (ಆ.14): ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 11ರಂದು ಬ್ಲೂಮ್ ಬರ್ಗ್ ಬಿಡುಗಡೆಗೊಳಿಸಿದ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. 96.4 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿ ಕೂಡ ಹೌದು. 66 ವರ್ಷದ ಮುಖೇಶ್ ಅಂಬಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಈ ವರ್ಷದ ಜನವರಿಯಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಅಮೆರಿಕ ಮೂಲದ ಹಿಂಡೆನ್ ಬರ್ಗ್ ರಿಸರ್ಚ್ ವರದಿ ಬಳಿಕ ಅದಾನಿ ಸಮೂಹ ಸಂಸ್ಥೆ ಮುಖ್ಯಸ್ಥ ಗೌತಮ್ ಅದಾನಿ ಸಂಪತ್ತಿನಲ್ಲಿ ಭಾರೀ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದ ನಂ.1 ಶ್ರೀಮಂತ ಉದ್ಯಮಿ ಪಟ್ಟ ಮರಳಿ ಮುಖೇಶ್ ಅಂಬಾನಿ ತೆಕ್ಕೆಗೆ ಸೇರಿತ್ತು. ಜನವರಿ 24ರಂದು ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ತನ್ನ ವರದಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಮೇಲೆ ವಂಚನೆ ಆರೋಪ ಮಾಡಿತ್ತು. ಪರಿಣಾಮ ಅದಾನಿ ಸಮೂಹದ ಎಲ್ಲ ಷೇರುಗಳು ಕೂಡ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದವು. ಇನ್ನೊಂದೆಡೆ ರಿಲಯನ್ಸ್ ಸಮೂಹ ಸಂಸ್ಥೆಗಳ ಷೇರುಗಳು ಈ ವರ್ಷದ ಜನವರಿಯಿಂದ ಉತ್ತಮ ನಿರ್ವಹಣೆ ತೋರುತ್ತಿವೆ.
ಈ ವರ್ಷದ ಪ್ರಾರಂಭದಿಂದ ಷೇರು ಮಾರುಕಟ್ಟೆಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಶೇ.7.3ಕ್ಕೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ಟಾಪ್ 15 ಶ್ರೀಮಂತ ಉದ್ಯಮಿಗಳಲ್ಲಿ ಗೌತಮ್ ಅದಾನಿ ಹಾಗೂ ರಾಧಾಕಿಶಾನ್ ದಮಾನಿ ಸಂಪತ್ತಿನಲ್ಲಿ ಮಾತ್ರ ಇಳಿಕೆ ಕಂಡುಬಂದಿದೆ. ಜನವರಿ 1ರಿಂದ ರಿಲಯನ್ಸ್ ಷೇರುಗಳಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದ್ದು, ಅಂಬಾನಿ ಸಂಪತ್ತಿನಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಣಕಾಸು ಸೇವೆಗಳ ವಿಭಾಗ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಈ ತಿಂಗಳ ಕೊನೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗುವ ನಿರೀಕ್ಷೆಯಿದೆ.
ಅಮೆರಿಕಾದಲ್ಲಿದ್ದ ಐಷಾರಾಮಿ ಮನೆ ಮಾರಿದ ಮುಖೇಶ್ ಅಂಬಾನಿ... ಎಷ್ಟು ಕೋಟಿಯ ಮನೆ ಇದು
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. 147 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕುವ ಮೂಲಕ ವಿಶ್ವದ ಎರಡನೇ ಶ್ರೀಮಂತ ಉದ್ಯಮಿ ಪಟ್ಟವನ್ನು ಪಡೆದುಕೊಂಡಿದ್ದರು. ಆದರೆ, ಈ ವರ್ಷದ ಜನವರಿ 25ರಂದು ಅಮೆರಿಕದ ಹಿಂಡೆನ್ ಬರ್ಗ್ ಸಂಸ್ಥೆ ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಮಾಡಿದ ಬಳಿಕ ಅವರ ಸಂಪತ್ತಿನಲ್ಲಿ ಭಾರೀ ಇಳಿಕೆಯಾಗಿತ್ತು. ಈ ವರ್ಷ ಇಲ್ಲಿಯ ತನಕ ಅದಾನಿ ಸಂಪತ್ತಿನಲ್ಲಿ 57 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಅದಾನಿ ಅವರ 10 ಲಿಸ್ಟೆಡ್ ಸಂಸ್ಥೆಗಳು ಮಾರುಕಟ್ಟೆ ಕ್ಯಾಪಿಟಲೈಸೇಷನ್ ನಲ್ಲಿ 104 ಬಿಲಿಯನ್ ಡಾಲರ್ ಕಳೆದುಕೊಂಡಿವೆ.
ಇನ್ನು ರಿಟೇಲ್ ಮಾರುಕಟ್ಟೆಯಲ್ಲಿ ಬಿಗಿಯಾದ ಹಿಡಿತ ಹೊಂದಿದ್ದ 2020ರ ಪ್ರಾರಂಭದಲ್ಲಿ ಭಾರತದ ಎರಡನೇ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದ ರಾಧಾಕಿಶಾನ್ ದಮಾನಿ ಸಂಪತ್ತಿನಲ್ಲಿ ಕೂಡ ಇಳಿಕೆಯಾಗಿದ್ದು, ಈ ಬಾರಿಯ ದೇಶದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿದ್ದಾರೆ. ಅವೆನ್ಯೂ ಸೂಪರ್ ಮಾರ್ಕೆಟ್ ಷೇರುಗಳ ಬೆಲೆಯಲ್ಲಿ ಕುಸಿತವಾದ ಬೆನ್ನಲ್ಲೇ ದಮಾನಿ ನಿವ್ವಳ ಸಂಪತ್ತು 2023ರಲ್ಲಿ 2.4 ಬಿಲಿಯನ್ ಡಾಲರ್ ಇಳಿಕೆಯಾಗಿದ್ದು, 16.9 ಬಿಲಿಯನ್ ಡಾಲರ್ ತಲುಪಿದೆ.
ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್ ನ್ಯೂಸ್: 999 ರೂ. ಗೆ ರೀಲಾಂಚ್ ಆಯ್ತು ಮುಖೇಶ್ ಅಂಬಾನಿಯ ಜಿಯೋಭಾರತ್ V2 ಫೋನ್
ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ನಂ.1 ಪಟ್ಟದಲ್ಲೇ ಮುಂದುವರಿದಿದ್ದಾರೆ. 2023ನೇ ಸಾಲಿನಲ್ಲಿ ಅವರ ಸಂಪತ್ತಿನಲ್ಲಿ 87 ಬಿಲಿಯನ್ ಡಾಲರ್ ಏರಿಕೆಯಾಗುವ ಮೂಲಕ 224 ಬಿಲಿಯನ್ ಡಾಲರ್ ತಲುಪಿದೆ. ಇನ್ನು ಫ್ರೆಂಚ್ ಶ್ರೀಮಂತ ಉದ್ಯಮಿ ಎಲ್ ವಿಎಂಎಚ್ ಗ್ರೂಪ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ 191 ಬಿಲಿಯನ್ ಡಾಲರ್ ಸಂಪತ್ತಿನ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 163 ಬಿಲಿಯನ್ ಡಾಲರ್ ಹಾಗೂ 130 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಹಾಗೂ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿದ್ದಾರೆ.