ಕೇಂದ್ರ ಸರ್ಕಾರ, ಸಾಮಾನ್ಯ ಜನರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೆಲವು ಮಹಿಳೆಯರಿಗೆ ನೆರವಾಗ್ತಿವೆ. ಸರ್ಕಾರದ ಒಂದು ಯೋಜನೆಯಲ್ಲಿ ಮಹಿಳೆಯರಿಗೆ 6 ಸಾವಿರ ರೂಪಾಯಿ ಸಿಗುತ್ತೆ. ಅದಕ್ಕೆ ಏನು ಅರ್ಹತೆ ಎಂಬ ವಿವರ ಇಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನಡೆಸುತ್ತವೆ. ಕರ್ನಾಟಕದಲ್ಲಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಮಹಿಳೆಯರ ಅನುಕೂಲಕ್ಕಾಗಿ ಕೆಲ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದರಂತೆ ಮಹಿಳೆಯರ ಸಬಲೀಕರಣಕ್ಕಾಗಿ, ಅವರಿಗೆ ಆರ್ಥಿಕ ಸಹಾಯವನ್ನೂ ನೀಡಲು ಕೇಂದ್ರ ಸರ್ಕಾರ ಕೂಡ ಅನೇಕ ಯೋಜನೆಗಳನ್ನು ಮಹಿಳೆಯರಿಗಾಗಿ ನಡೆಸುತ್ತಿದೆ. ಕೇಂದ್ರ ಸರ್ಕಾರ ಶುರು ಮಾಡಿದ ಯೋಜನೆಯೊಂದರ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ. ಈ ಯೋಜನೆಯಲ್ಲಿ ಸರ್ಕಾರ, ಮಹಿಳೆಯರಿಗೆ 6 ಸಾವಿರ ರೂಪಾಯಿಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆ ಲಾಭ ಪಡೆಯಲು ಯಾರು ಅರ್ಜಿ ಸಲ್ಲಿಸಬಹುದು ಮತ್ತು ಯಾವೆಲ್ಲ ಲಾಭವಿದೆ ಎನ್ನುವುದನ್ನು ನಾವು ನಿಮಗೆ ಹೇಳ್ತೇವೆ.
ಕೇಂದ್ರ ಸರ್ಕಾರ (Central Government) 6 ಸಾವಿರ ನೀಡ್ತಿರುವ ಯೋಜನೆ ಯಾವುದು? : ಮೋದಿ (Modi) ಸರ್ಕಾರ ಪ್ರಧಾನ ಮಂತ್ರಿ (Prime Minister) ಮಾತೃತ್ವ ವಂದನಾ ಯೋಜನೆ ಎಂಬ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯ ಮೂಲಕ ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತ ಕೇಂದ್ರ ಸರ್ಕಾರದಿಂದ ಮಹಿಳೆಯರ ಖಾತೆಗೆ ಬರುತ್ತದೆ.
SUBWAY OFFER: ಹೀಗೆ ಮಾಡಿದ್ರೆ ಜೀವನ ಪರ್ಯಂತ ಸಿಗುತ್ತೆ ಉಚಿತ ಸ್ಯಾಂಡ್ವಿಚ್!
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಎಂದರೇನು? : ದೇಶಾದ್ಯಂತ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರ ಮಾತೃತ್ವ ವಂದನಾ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಗರ್ಭಿಣಿಯರಿಗೆ ಸರಕಾರದಿಂದ ಆರ್ಥಿಕ ನೆರವು ನೀಡಲಾಗುತ್ತದೆ. ಕೇಂದ್ರ ಸರ್ಕಾರವು ಗರ್ಭಿಣಿಯರಿಗೆ ಹೆರಿಗೆಗೆ ಮುನ್ನ ಮತ್ತು ನಂತರ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಬರುವ ರೋಗಗಳನ್ನು ತಡೆಗಟ್ಟಲು ಆರ್ಥಿಕ ಸಹಾಯ ನೀಡುತ್ತದೆ. ಗರ್ಭಾವಸ್ಥೆಯಲ್ಲಿ ಪೌಷ್ಠಿಕ ಆಹಾರ ಸೇವನೆ ಮಾಡೋದು ಮುಖ್ಯವಾಗುತ್ತದೆ. ಹಾಗೆಯೇ ಹಗೆರಿಗೆ ನಂತ್ರವೂ ಅತ್ಯಗತ್ಯ. ಅದಕ್ಕೆ ಅನುಕೂಲವಾಗಲೆಂದೇ 6000 ರೂಪಾಯಿಗಳನ್ನು ನೀಡುತ್ತದೆ.
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? : ಈ ಯೋಜನೆಗೆ ಅರ್ಜಿ ಸಲ್ಲಿಸುವ ಗರ್ಭಿಣಿಯರ ವಯಸ್ಸು 19 ವರ್ಷಕ್ಕಿಂತ ಕಡಿಮೆ ಇರಬಾರದು. ನೀವು ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ನೀವು ಈ ಯೋಜನೆಯ ಅಧಿಕೃತ ವೆಬ್‌ಸೈಟ್ wcd.nic.in/schemes/pradhan-mantri-matru-vandana-yojana ಗೆ ಭೇಟಿ ನೀಡಬಹುದು. ಇಲ್ಲಿ ನೀವು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ನೀವು ಈ ವೆಬ್ ಸೈಟ್ ನಿಂದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಅರ್ಜಿ ಭರ್ತಿ ಮಾಡಿ ಅದನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಬಹುದು. ಅಂಗನವಾಡಿಯಲ್ಲಿ ಅಥವಾ ಸಹಾಯವಾಣಿ ಸಂಖ್ಯೆ 7998799804 ಗೆ ಕರೆ ಮಾಡಿದ್ರೆ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಬೇಕಾಗುವ ದಾಖಲೆ : ಪೋಷಕರ ಆಧಾರ್ ಕಾರ್ಡ್, ಪೋಷಕರ ಗುರುತಿನ ಚೀಟಿ, ಮಗುವಿನ ಜನನ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ಪಾಸ್ ಬುಕ್ ಅವಶ್ಯಕತೆ ಇರುತ್ತದೆ.
ಮೂರು ಕಂತುಗಳಲ್ಲಿ ಸಿಗುತ್ತೆ ಹಣ : ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಜನವರಿ 1, 2017 ರಂದು ಪ್ರಾರಂಭವಾಗಿದೆ. ದೇಶಾದ್ಯಂತ ಇರುವ ಎಲ್ಲಾ ಗರ್ಭಿಣಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಗರ್ಭಿಣಿಯರು ಒಂದೇ ಬಾರಿ 6 ಸಾವಿರ ರೂಪಾಯಿಯನ್ನು ಪಡೆಯಲು ಸಾಧ್ಯವಿಲ್ಲ. ಗರ್ಭಿಣಿಯರಿಗೆ ಮೂರು ಕಂತುಗಳಲ್ಲಿ 6000 ರೂಪಾಯಿಯನ್ನು ಸರ್ಕಾರ ನೀಡುತ್ತದೆ. ಈ ಮೊತ್ತವನ್ನು ನೇರವಾಗಿ ಗರ್ಭಿಣಿಯರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
