ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಒಂದೇ ವರ್ಷದಲ್ಲಿ ಮೂರನೇ ಬಾರಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಜನವರಿ 20, 2025 ರಿಂದ ಹೊಸ ದರಗಳು ಜಾರಿಗೆ ಬರಲಿವೆ.

ಬೆಂಗಳೂರು (ಜ,10): ರಾಜ್ಯ ಸರ್ಕಾರ ಅಕ್ಷರಶಃ ಮದ್ಯಪ್ರಿಯರ ಲೂಟಿಗೆ ಇಳಿಯುವಂಥ ನಿರ್ಧಾರ ಮಾಡಿದೆ. ಈಗಾಗಲೇ ಜನರ ದಿನನಿತ್ಯದ ಅಗತ್ಯ ವಸ್ತುಗಳ ಎಲ್ಲಾ ಬೆಲೆಗಳಲ್ಲೂ ಏರಿಕೆಯಾಗಿದ್ದು, ತೀರಾ ಇತ್ತೀಚೆಗೆ ರಾಜ್ಯದಲ್ಲಿ ಬಸ್‌ ಟಿಕೆಟ್‌ ದರವನ್ನು ಶೇ.15ರಷ್ಟು ಏರಿಕೆ ಮಾಡಿದೆ. ಮೆಟ್ರೋ ದದರ ಕೂಡ ಏರಿಕೆಯಾಗಲಿದೆ. ಜನವರಿ 20 ರಿಂದ ಮತ್ತೊಮ್ಮೆ ಬಿಯರ್‌ ಬೆಲೆಗಳ ಏರಿಕೆ ಆಗುವ ಸಾಧ್ಯತೆ ಇದೆ. ಹಾಗೇನಾದರೂ ಇದು ಜಾರಿಯಾದಲ್ಲಿ ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರ ಮೂರನೇ ಬಾರಿಗೆ ಬಿಯರ್‌ ಬೆಲೆಯಲ್ಲಿ ಏರಿಕೆ ಮಾಡಿದಂತಾಗಲಿದೆ.
ರಾಜ್ಯದಲ್ಲಿ ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದ್ದು, ಬಿಯರ್‌ ಪ್ರಿಯರು ಬೆಲೆ ಏರಿಕೆಯೊಂದಿಗೆ ಸಂಕಷ್ಟ ಎದುರಿಸುವಂತಾಗಿದೆ. ಬುಧವಾರ ಹೊಸ ದರವನ್ನು ಪ್ರಸ್ತಾಪ ಮಾಡಲಾಗಿದ್ದು 2025ರ ಜನವರಿ 20ರಿಂದ ಇದು ಜಾರಿಗೆ ಬರಲಿದೆ. ಅಂತಿಮ ಅಧಿಸೂಚನೆಯ ಬಳಿಕ ಈ ದರಗಳು ಅನುಷ್ಠಾನಗೊಳ್ಳಲಿದೆ. ಬಿಯರ್‌ನ ರಿಟೇಲ್‌ ಬೆಲೆಗಳು ಬ್ರ್ಯಾಂಡ್‌ಗೆ ಅನುಗುಣವಾಗಿ ಬದಲಾಗಲಿದ್ದು, ಪ್ರೀಮಿಯಂ ಬಿಯರ್‌ನ ಬೆಲೆ ಮೇಲೆ ಕನಿಷ್ಠ 10 ರಿಂದ ಗರಿಷ್ಠ 50 ರೂಪಾಯಿಯವರೆಗೆ ಏರಿಕೆಯಾಗಲಿದೆ.

ಪರಿಷ್ಕೃತ ದರಗಳ ಅಡಿಯಲ್ಲಿ 5% ಕ್ಕಿಂತ ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್‌ಗೆ ಪ್ರತಿ ಬಲ್ಕ್ ಲೀಟರ್‌ಗೆ 12 ರೂಪಾಯಿ ಮತ್ತು 5% ರಿಂದ 8% ರ ನಡುವಿನ ಆಲ್ಕೋಹಾಲ್ ಅಂಶವಿರುವ ಬಿಯರ್‌ಗೆ 20 ರೂಪಾಯಿ ಅನ್ವಯಿಸುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಮುಂದಿನ ಬೆಲೆ ಹೊಂದಾಣಿಕೆಗಳ ಕುರಿತು ಚರ್ಚೆಗಳು ನಡೆಯುತ್ತಿರುವಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಗುರುವಾರ ತಿಳಿಸಿದ್ದಾರೆ.

ಆಗಸ್ಟ್ 2024 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸ್ಟ್ರಾಂಗ್‌ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಸರಿಸುವ ಮೂಲಕ ಇತ್ತೀಚಿನ ಅಧಿಸೂಚನೆ ಹೊರಡಿಸಲಾಗಿದೆ. ಜುಲೈ 2023 ರ ರಾಜ್ಯ ಬಜೆಟ್‌ನಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯದ (IMFL) ಮೇಲಿನ ಸುಂಕವನ್ನು 20% ರಷ್ಟು ಹೆಚ್ಚಿಸಲಾಗಿತ್ತು. ಅಂದೂ ಕೂಡ ಬಿಯರ್ ಬೆಲೆಗಳು 10% ರಷ್ಟು ಹೆಚ್ಚಳವಾಗಿತ್ತು. ಅದರ ಬೆನ್ನಲ್ಲಿಯೇ ಈ ಬೆಲೆ ಏರಿಕೆ ಬಂದಿದೆ.

ಇದು ಜಾರಿಗೆ ಬಂದರೆ, ಕರ್ನಾಟಕದಲ್ಲಿ ಕೇವಲ ಒಂದು ವರ್ಷದಲ್ಲಿ ಮೂರನೇ ಬಿಯರ್ ಬೆಲೆ ಏರಿಕೆಯಾಗಲಿದೆ. ವಿವಿಧ ವಲಯಗಳಲ್ಲಿ ಹೆಚ್ಚುತ್ತಿರುವ ವೆಚ್ಚಗಳ ನಡುವೆಯೂ ಸರ್ಕಾರದ ಆದಾಯ ತಂತ್ರಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಬಿಯರ್ ಪ್ರಿಯರು ಮತ್ತು ಉದ್ಯಮದ ಪಾಲುದಾರರು ಈ ಆಗಾಗ್ಗೆ ಏರಿಕೆಯ ಪರಿಣಾಮವನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಈ ರಾಜ್ಯಕ್ಕೆ ಬಿಯರ್‌ ಸರಬರಾಜು ಮಾಡೋದಿಲ್ಲ ಎಂದ ಕಿಂಗ್‌ಫಿಶರ್‌ ಬ್ರ್ಯಾಂಡ್‌!

ಇದರ ನಡುವೆ, ಹೈನೆಕೆನ್ ಮತ್ತು ಕಿಂಗ್‌ಫಿಷರ್‌ನಂತಹ ಪ್ರಸಿದ್ಧ ಬಿಯರ್ ಬ್ರಾಂಡ್‌ಗಳ ತಯಾರಕರಾದ ಯುನೈಟೆಡ್ ಬ್ರೂವರೀಸ್, ರಾಜ್ಯ-ಚಾಲಿತ ಮದ್ಯ ವಿತರಣಾ ಸಂಸ್ಥೆಯಾದ ತೆಲಂಗಾಣ ಪಾನೀಯ ನಿಗಮ ಲಿಮಿಟೆಡ್ (ಟಿಜಿಬಿಸಿಎಲ್) ಗೆ ತನ್ನ ಬಿಯರ್ ಸರಬರಾಜು ಮಾಡುವುದನ್ನು ನಿಲ್ಲಿಸಿರುವುದಾಗಿ ಘೋಷಿಸಿತು. ಇದರ ಪರಿಣಾಮವಾಗಿ, ಭಾರತದ ಅತಿದೊಡ್ಡ ಮದ್ಯ ಮಾರುಕಟ್ಟೆಗಳಲ್ಲಿ ಒಂದಾದ ತೆಲಂಗಾಣದಲ್ಲಿ ಅದರ ಉತ್ಪನ್ನಗಳು ಇನ್ನು ಮುಂದೆ ಮಾರಾಟಕ್ಕೆ ಲಭ್ಯವಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ನಿರಂತರ ಪ್ರಯತ್ನಗಳ ಹೊರತಾಗಿಯೂ ತೆಲಂಗಾಣ ರಾಜ್ಯದಲ್ಲಿ ಬಿಯರ್‌ಬೆಲೆಗಳಲ್ಲಿ ಏರಿಕೆ ಮಾಡಲಾಗಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಕ್ಕೆ ಹೋಲಿಸಿದರೆ, ತೆಲಂಗಾಣದಲ್ಲಿ ಬಿಯರ್‌ ಬೆಲೆ ಶೇ. 30ರಷ್ಟು ಕಡಿಮೆ ಇದೆ.

ದೇಶದ 11 ಡಿಸ್ಟಿಲರಿಗಳಿಂದ ಟ್ಯಾಕ್ಸ್‌ ಮೋಸ, ಸರ್ಕಾರಕ್ಕೆ 13 ಸಾವಿರ ಕೋಟಿ ನಷ್ಟ ಎಂದ ಮಹಾಲೇಖಪಾಲ!