ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದಾರೆ. ಕೆಲವೊಂದು ವಿಡಿಯೋ, ಫೋಟೋ ಹಂಚಿಕೊಂಡು ಜನರ ಗಮನ ಸೆಳೆಯುತ್ತಾರೆ. ಈಗ ಚಾಯ್ ಸೇವಾ ಕಾ ಮಂದಿರ್ ವಿಡಿಯೋ ಪೋಸ್ಟ್ ಮಾಡಿ, ಬಾಬಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನಂದ್ ಮಹೀಂದ್ರಾ ಅವರ ಹೊಸ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅಮೃತಸರದ ಟೀ ಸ್ಟಾಲ್‌ನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ಪೋಸ್ಟ್ ಮಾಡಿರುವ ವಿಡಿಯೋ ಸಾಮಾನ್ಯ ಟೀ ಸ್ಟಾಲ್ ವಿಡಿಯೋ ಅಲ್ಲ. ಈ ಟೀ ಅಂಗಡಿಯನ್ನು ಭಿನ್ನವಾಗಿ ನಿರ್ಮಿಸಲಾಗಿದೆ. ಬೃಹತ್ ಆಲದ ಮರದೊಳಗೆ ಟೀ ಸ್ಟಾಲ್ ಇದೆ.
ನೀವು ರಸ್ತೆ (Road) ಬದಿಯಲ್ಲಿ ಅನೇಕ ಟೀ ಸ್ಟಾಲ್ ಗಳನ್ನು ನೋಡಿರ್ತೀರಿ. ಕೆಲವರು ಯಾವುದೇ ಸ್ಟಾಲ್ ಇಲ್ಲದೆ, ಥರ್ಮಸ್ ನಲ್ಲಿ ಟೀ ಹಾಕಿ, ಅಂಗಡಿ ಅಂಗಡಿಗೆ ಮಾರಾಟ ಮಾಡ್ತಾರೆ. ಮತ್ತೆ ಕೆಲವರು ಗ್ರಾಹಕರನ್ನು ಸೆಳೆಯಲು ಟೀ ಸ್ಟಾಲ (Tea Stall) ನ್ನು ಸ್ವಲ್ಪ ಭಿನ್ನವಾಗಿ ನಿರ್ಮಾಣ ಮಾಡಿರುತ್ತಾರೆ. ಆದ್ರೆ ಈಗ ಆನಂದ್ ಮಹೀಂದ್ರಾ (Anand Mahindra) ಪೋಸ್ಟ್ ಮಾಡಿರುವ ವಿಡಿಯೋದಲ್ಲಿರುವ ಟೀ ಸ್ಟಾಲ್ ಆಲದ ಮರದ ನೆರಳಿನಲ್ಲಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಚಹಾವನ್ನು ಗ್ಯಾಸ್ ಸ್ಟೌವ್ ಬದಲು ಒಲೆಯ ಮೇಲಿಟ್ಟು ಸಿದ್ಧಪಡಿಸುತ್ತಿದ್ದಾರೆ.
4000 ಕೋಟಿ ಮೌಲ್ಯದ ಅರಮನೆಯಲ್ಲಿದ್ದರೂ ಸ್ವಂತ ದುಡಿಮೆಗೆ ತರಕಾರಿ ಮಂಡಿ ತೆರೆದ ರಾಜವಂಶಸ್ಥ ಸಿಂಧಿಯಾ ಮಗ!
ಬಾಬಾರ ಸರಳತೆ ಮತ್ತು ಒಳ್ಳೆಯತನ ಉದ್ಯಮಿ ಆನಂದ್ ಮಹೀಂದ್ರಾರ ಹೃದಯವನ್ನು ತಟ್ಟಿದೆ. ಅಲ್ಲದೆ ಸಾಮಾನ್ಯ ಜನರು ಕೂಡ ಬಾಬಾ ಟೀ ಸ್ಟಾಲ್ ಇಷ್ಟಪಟ್ಟಿದ್ದಾರೆ. ಈ ಹೃದಯಸ್ಪರ್ಶಿ ವೀಡಿಯೊವನ್ನು ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಮೃತಸರದಲ್ಲಿ ನೋಡಲು ಹಲವು ಸ್ಥಳಗಳಿವೆ. ಆದರೆ ಮುಂದಿನ ಬಾರಿ ನಾನು ನಗರಕ್ಕೆ ಭೇಟಿ ನೀಡಿದಾಗ, ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುವ ಜೊತೆಗೆ ಚಾಯ್ ಸೇವಾ ಮಂದಿರಕ್ಕೂ ಅವಶ್ಯಕವಾಗಿ ಭೇಟಿ ನೀಡ್ತೇನೆ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಬಾಬಾ 40 ವರ್ಷಗಳಿಂದ ಈ ಟೀ ಅಂಗಡಿ ನಡೆಸುತ್ತಿದ್ದಾರೆ. ನಮ್ಮ ಹೃದಯವು ದೊಡ್ಡ ಮಂದಿರ ಎಂದು ಅವರು ಬರೆದುಕೊಂಡಿದ್ದಾರೆ.
ಜುಲೈ 23 ರಂದು ಆನಂದ್ ಮಹೀಂದ್ರಾ ಅವರು ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇಲ್ಲಿಯವರೆಗೆ ಸುಮಾರು 3 ಲಕ್ಷ 78 ಸಾವಿರಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. 12 ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ಅಲ್ಲದೆ, ಅನೇಕ ಬಳಕೆದಾರರು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಲಾಕ್‌ಡೌನ್ ವೇಳೆ ಚಾಕೊಲೇಟ್ ಕಂಪನಿ ತೆರೆದು ಕೋಟ್ಯಧಿಪತಿಯಾದ ಹುಡುಗನಿಗೀಗ 19ವರ್ಷ!
ಈ ವಿಡಿಯೋವನ್ನು ವೀಕ್ಷಿಸಿದ ಬಳಕೆದಾರರು, ಈ ವಿಡಿಯೋ ಶೇರ್ ಮಾಡಿದ್ದಕ್ಕೆ ಆನಂದ್ ಮಹೀಂದ್ರಾಗೆ ಧನ್ಯವಾದ ಹೇಳಿದ್ದಾರೆ. ಮತ್ತೆ ಕೆಲವರು ಟೀ ಮಾರುವ ಅಜ್ಜನಿಗೆ ಸೆಲ್ಯೂಟ್ ಮಾಡಿದ್ದಾರೆ. ನಿಜವಾಗಿಯೂ ಈ ವೀಡಿಯೊ ಹೃದಯ ಮುಟ್ಟಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬಾಬಾ ಜೀ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು ಎಂದು ಇನ್ನೊಬ್ಬರು ಬರೆದಿದ್ದಾರೆ.
ಬಾಬಾ ಹೆಸರು ಅಜಿತ್ ಸಿಂಗ್. ಅನೇಕರಿಗೆ ಇವರ ಹೆಸರು ಗೊತ್ತಿಲ್ಲ. ಬಾಬಾ ಎಂದು ಅವರನ್ನು ಕರೆಯುತ್ತಾರೆ. ಯಾವುದೇ ಆಸೆ ಇಲ್ಲ, ಬಾಬಾ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡ್ತಾ ಇರಿ, ಚೆನ್ನಾಗಿರ್ತೀರಿ ಎಂದು ಬಾಬಾ ಹೇಳುತ್ತಾರೆ. ಸೇವೆ ಮಾಡ್ತಿದ್ದೇನೆ ಎನ್ನುವ ಬಾಬಾ, ಹಣ ನೀಡದೆ ಹೋದ್ರೂ ಗ್ರಾಹಕರನ್ನು ಕೇಳೋದಿಲ್ಲವಂತೆ. ಟೀಗೆ ಅಗತ್ಯವಿರುವ ಸಾಮಾನುಗಳನ್ನು ಖುದ್ದು ತಾವೇ ಹೋಗಿ ತರುವ ಬಾಬಾಗೆ ಯಾವುದೇ ಕಳ್ಳತನವಾಗುವ ಭಯವೂ ಇಲ್ಲ. ಅವರ ಸ್ಟಾಲ್ ಗೆ ಯಾವುದೇ ಬಾಗಿಲು, ಭದ್ರತೆ ಇಲ್ಲ. ಮಸಾಲೆ ಹಾಕಿ ಟೀ ತಯಾರಿಸುವ ಬಾಬಾ ಒಂದು ಗ್ಲಾಸ್ ಟೀಗೆ 10 ರೂಪಾಯಿ ಪಡೆಯುತ್ತಾರೆ. ಗ್ಲಾಸ್ ಲೋಟವನ್ನು ಕೂಡ ಅವರೇ ಕ್ಲೀನ್ ಮಾಡ್ತಾರೆ. ಬೆಳಿಗ್ಗೆ 9 ಗಂಟೆಯಿಂದ ಶುರುವಾಗುವ ಅವರ ಅಂಗಡಿಯಲ್ಲಿ ಸಿಗುವ ಟೀ ಅಧ್ಬುತವಾಗಿರುತ್ತೆ. ನೀವೂ ಅಮೃತಸರಕ್ಕೆ ಹೋದಾಗ ಒಮ್ಮೆ ಭೇಟಿ ನೀಡಿ.
