ಮತ್ತೆ 1700 ಅಂಕ ಕುಸಿತ: 3 ವರ್ಷ ಹಿಂದಕ್ಕೆ ಸೆನ್ಸೆಕ್ಸ್| ಹೂಡಿಕೆದಾರರಿಗೆ 3 ದಿನದಲ್ಲಿ 16 ಲಕ್ಷ ಕೋಟಿ ನಷ್ಟ| 30 ಸಾವಿರಕ್ಕಿಂತ ಕೆಳಕ್ಕೆ ಕುಸಿದ ಮುಂಬೈ ಸೂಚ್ಯಂಕ| 12000 ಅಂಕ: ಫೆ.17ರಿಂದ ಮಾ.17ರವರೆಗೆ 1 ತಿಂಗಳಲ್ಲಿ ಸೆನ್ಸೆಕ್ಸ್ ಕುಸಿತ| 5233 ಅಂಕ: ಕಳೆದ ಮೂರು ದಿನಗಳಲ್ಲಿ ಸೆನ್ಸೆಕ್ಸ್ ಕಳೆದುಕೊಂಡ ಅಂಕಗಳು
ಮುಂಬೈ[ಮಾ.19]: ಕೊರೋನಾ ಸೋಂಕಿನ ಭೀತಿ ಬುಧವಾರವೂ ಭಾರತದ ಷೇರುಪೇಟೆ ಮೇಲೆ ಮಾರಕವಾಗಿ ಎರಗಿದ್ದು, ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಅನ್ನು 1709 ಅಂಕಗಳಷ್ಟುಕುಸಿಯುವಂತೆ ಮಾಡಿದೆ. ಪರಿಣಾಮ ಸೆನ್ಸೆಕ್ಸ್ 28869 ಅಂಕಗಳಲ್ಲಿ ಮುಕ್ತಾಯವಾಗಿದ್ದು, 3 ವರ್ಷಗಳ ಕನಿಷ್ಠಕ್ಕೆ ಇಳಿದಿದೆ. ಈ ಹಿಂದೆ ಸೆನ್ಸೆಕ್ಸ್ 29000 ಅಂಕಗಳಿಗಿಂತ ಕೆಳಗೆ ಇಳಿದಿದ್ದು 2017ರ ಜನವರಿಯಲ್ಲಿ. ಇದೇ ವೇಳೆ ನಿಫ್ಟಿಕೂಡಾ 498 ಅಂಕ ಇಳಿದು 8469 ಅಂಕಗಳಲ್ಲಿ ಮುಕ್ತಾಯವಾಗಿದೆ.
ಕೊರೋನಾ ಸೋಂಕಿನಿಂದಾಗಿ ಆರ್ಥಿಕತೆ ಮೇಲೆ ಉಂಟಾಗಿರುವ ಅಡ್ಡ ಪರಿಣಾಮ ನಿವಾರಿಸಲು ಅಮೆರಿಕ, ಬ್ರಿಟನ್ ಸೇರಿದಂತೆ ಹಲವಾರು ದೇಶಗಳು ದೇಶಗಳು ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಣೆ ಮಾಡಿದ್ದು, ಷೇರುಪೇಟೆ ಮೇಲೆ ಗಂಭೀರ ಪರಿಣಾಮ ಬೀರಿತು. ಆರ್ಥಿಕತೆ ಕುಸಿದಿರುವುದು ಖಚಿತವಾದ ಕಾರಣದಿಂದಾಗಿಯೇ ಈ ಪ್ಯಾಕೇಜ್ ಘೋಷಿಸಲಾಗುತ್ತಿದೆ ಎಂಬುದು ಮಾರುಕಟ್ಟೆಯ ಆತಂಕಕ್ಕೆ ಕಾರಣವಾಯ್ತು.
ಜೊತೆಗೆ ಜಾಗತಿಕ ರೇಟಿಂಗ್ ಸಂಸ್ಥೆಯಾದ ಎಸ್ ಆ್ಯಂಡ್ ಪಿ 2020ರಲ್ಲಿ ಭಾರತದ ಆರ್ಥಿಕ ಪ್ರಗತಿ ದರವನ್ನು ಶೇ.5.2ಕ್ಕೆ ಇಳಿಸಿದ್ದು, ಟೆಲಿಕಾಂ ಕಂಪನಿಗಳು ಎಜಿಆರ್ ಶುಲ್ಕವನ್ನು ನಿಗದಿತ ಅವಧಿಯಲ್ಲಿ ಪಾವತಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶ ಕೂಡಾ ಷೇರುಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.
ಹೀಗಾಗಿ ಬುಧವಾರ ಮಧ್ಯಾಹ್ನದವರೆಗೂ ಸೆನ್ಸೆಕ್ಸ್ ಏರುಗತಿಯಲ್ಲೇ ಇತ್ತಾದರೂ ಬಳಿಕ ಭಾರೀ ಏರಿಳಿಕೆಯ ಹೊಯ್ದಾಟ ನಡೆಸಿತು. ಹೀಗಾಗಿ ಸೆನ್ಸೆಕ್ಸ್ ಬುಧವಾರ ಒಟ್ಟಾರೆ 2488 ಅಂಕಗಳ ಏರಿಳಿಕೆ ಕಂಡು ದಿನದಂತ್ಯಕ್ಕೆ ಇಳಿಕೆಯಲ್ಲೇ ಮುಕ್ತಾಯವಾಯಿತು.
ಕಳೆದ 3 ದಿನಗಳಲ್ಲಿ ಸೆನ್ಸೆಕ್ಸ್ ಒಟ್ಟಾರೆ 5233 ಅಂಕ ಕುಸಿತ ಕಂಡಿದ್ದು, ಹೂಡಿಕೆದಾರರಿಗೆ 15.72 ಲಕ್ಷ ಕೋಟಿ ರು. ನಷ್ಟಉಂಟು ಮಾಡಿದೆ. ಇನ್ನು ಕಳೆದ 1 ತಿಂಗಳ ಅವಧಿಯಲ್ಲಿ ಅಂದರೆ ಫೆ.17ರಿಂದ ಮಾ.17ರವರೆಗಿನ ಅವಧಿಯಲ್ಲಿ ಸೆನ್ಸೆಕ್ಸ್ ಭರ್ಜರಿ 12000 ಅಂಕಗಳ ಕುಸಿತ ಕಂಡಿದೆ. ಫೆ.20ರಂದು ಸೆನ್ಸೆಕ್ಸ್ 41055 ಅಂಕಗಳಲ್ಲಿ ಮುಕ್ತಾಯವಾಗಿದ್ದರೆ, ಬುಧವಾರ 28869 ಅಂಕಗಳಲ್ಲಿ ಅಂತ್ಯವಾಗಿದೆ.
