ನವದೆಹಲಿ(ಆ.18): ಆಫೀಸ್ ನಲ್ಲೂ ಕೆಲಸ, ಮನೆಗೆ ಬಂದ್ರೂ ಬರೀ ಕೆಲಸದ್ದೇ ಚಿಂತೆ. ಇದು ನಿಮ್ಮ ಸಮಸ್ಯೆ ಕೂಡ ಹೌದಾ?.ಇದಕ್ಕೆ ಇ-ಕಾಮರ್ಸ್ ದೈತ್ಯ ಅಮೆಜಾನ್ ನ ಭಾರತದ ಮುಖ್ಯಸ್ಥ ಅಮಿತ್ ಅಗರವಾಲ್ ಪರಿಹಾರವೊಂದನ್ನು ಕಂಡು ಹಿಡಿದಿದ್ದಾರೆ. 

ಬಹಳಷ್ಟು ಜನರಿಗೆ ಕಚೇರಿಯೇ ಜೀವನ ಎಂಬಂತಾಗಿರುತ್ತದೆ. ಮನೆಯಲ್ಲೂ ಆಫೀಸ್ ಕೆಲಸ. ಆಗಿಂದಾಗ್ಗೆ ಇ-ಮೇಲ್ಸ್ ಚೆಕ್ ಮಾಡುತ್ತಾ, ವಾಟ್ಸಾಪ್ ನೋಡುತ್ತಾ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ವ್ಯಕ್ತಿಯ ಶೇಯೋಭಿವೃದ್ಧಿಗೆ ಯೋಗ್ಯವಲ್ಲ ಎಂದು ಮಾನಸಿಕ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. 

ಇಷ್ಟೆಲ್ಲಾ ಒತ್ತಡಕ್ಕೆ ಗುರಿಯಾಗುತ್ತಿರುವ ಉದ್ಯೋಗಿಗಳಿಗೆ ಅಮೆಜಾನ್ ಇಂಡಿಯಾ ಮುಖ್ಯಸ್ಥ ಅಮಿತ್ ಅಗರವಾಲ್ ಖಡಕ್ ಕೌನ್ಸೆಲಿಂಗ್ ನೀಡಿದ್ದಾರೆ. ಸಂಜೆ 6 ರಿಂದ ಬೆಳಗಿನ 8 ಗಂಟೆ ತನಕ ಇ-ಮೇಲ್ಸ್, ವರ್ಕ್ ಕಾಲ್ಸ್‌ಗೆ ಪ್ರತಿಕ್ರಿಯಿಸಬೇಡಿ ಎಂದು ತನ್ನ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ. 

ಔದ್ಯೋಗಿಕ ಜೀವನ ಮತ್ತು ಖಾಸಗಿ ಜೀವನದ ನಡುವೆ ಸಮರ್ಥವಾದ ಹೊಂದಾಣಿಕೆ ಇರಬೇಕು ಎಂದು ಅಮಿತ್ ಅಗರವಾಲ್ ತಮ್ಮ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. ಅದೇ ರೀತಿ ಉದ್ಯೋಗದ ಸ್ಥಳದಲ್ಲಿ ಹೇಗೆ ಶಿಸ್ತಿನಿಂದ ಇರಬೇಕು ಎಂಬುದನ್ನೂ ಅಮಿತ್ ತಿಳಿಸಿದ್ದಾರೆ. 

ಅಮಿತ್ ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿರುವ ಇ-ಮೇಲ್ ಸಾಮಾಜಿಕ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿದೆ. ಆದರೆ ಅಗರವಾಲ್ ಅವರ ಇ-ಮೇಲ್‌ಗೆ ಅಮೆಜಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ವಿಶೇಷ.