ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದೇವಸ್ಥಾನಗಳ ಧ್ವಜ ಸ್ಥಂಭ, ತಿರುಪತಿ, ಶಬರಿಮಲ ಸೇರಿ ಕೆಲ ದೇವಸ್ಥಾನಗಳಿಗೆ ಕಾಣಿಕೆ ನೀಡಿರುವನ್ನು ಮಲ್ಯ ಬಹಿರಂಪಡಿಸಿದ್ದಾರೆ. ಇದೇ ವೇಳೆ ದೇವರು, ದೇವಸ್ಥಾನಗಳ ಮೇಲಿನ ನಂಬಿಕೆ ಕುರಿತು ಇದೇ ಮೊದಲ ಬಾರಿಗೆ ಮಲ್ಯ ಮಾತನಾಡಿದ್ದಾರೆ.
ನವದೆಹಲಿ(ಜೂ.07) ಕುಕ್ಕೆ ಸುಬ್ರಹ್ಮಣ್ಯ, ಮೂಕಾಂಬಿಕಾ ದೇವಸ್ಥಾನಕ್ಕೆ ಧ್ವಂಜಸ್ಥಂಭ, ತಿರುಪತಿ ದೇಗುಲದ ಗರ್ಭಗುಡಿ ಮೇಲಿನ ಚಿನ್ನದ ಹೊದಿಕೆ, ಶಬರಿಮಲೆ ದೇವಸ್ಥಾನದ ಮೇಲಿನ ಚಿನ್ನದ ಮೇಲ್ಜಾವಣಿ ಕಾಣಿಕೆ ಸೇರಿದಂತೆ ಹಲವು ದೇವಸ್ಥಾನಕ್ಕೆ ಕಾಣಕೆ ನೀಡಿದ್ದೇನೆ ಎಂದು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ. ಯೂಟ್ಯೂಬರ್ ರಾಜ್ ಶಮಾನಿ ನಡೆಸಿದ ವಿಶೇಷ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ತಮ್ಮ ದೇವರ ನಂಬಿಕೆ, ಭಕ್ತಿ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಕೆಲ ದೇವಸ್ಥಾನಗಳಿಗೆ ನೀಡಿದ ಕಾಣಿಕೆಯನ್ನು ಮಲ್ಯ ಬಹಿರಂಗಪಡಿಸಿದ್ದಾರೆ.
ಪಾಡ್‌ಕಾಸ್ಟ್ ವೇಳ ರಾಜ್ ಶಮಾನಿ, ನಿಮಗೆ ದೇವರ ಮೇಲೆ ನಂಬಿಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಿಜಯ್ ಮಲ್ಯ ನೀಡಿದ ಉತ್ತರ ಇದೀಗ ಹಲವೆಡೆ ಹಂಚಿಕೊಳ್ಳಲಾಗುತ್ತಿದೆ. ವಿಜಯ್ ಮಲ್ಯ ನೀಡಿದ ಕಾಣಿಕೆ, ಭಕ್ತಿಯ ಜೊತೆಗೆ ಇದೇ ದೇವರು ತನ್ನನ್ನು ಸಂಕಷ್ಟದಿಂದ ಪಾರು ಮಾಡಲಿದೆ ಎಂದಿದ್ದಾರೆ.
ದೇಗುಲಕ್ಕ ವಿಜಯ್ ಮಲ್ಯ ನೀಡಿದ್ದಾರೆ ಕೋಟಿ ಕೋಟಿ ರೂ ಕಾಣಿಕೆ
ನಾನು ದೇವರನ್ನು ಅತೀಯಾಗಿ ನಂಬುತ್ತೇನೆ. ನಾನೊಬ್ಬ ಅತೀವ ಧಾರ್ಮಿಕ ವ್ಯಕ್ತಿ. ಭಾರತದ ಹಲವು ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ದೇವರ ದರ್ಶನ ಪಡೆದಿದ್ದೇನೆ. ಪ್ರಮುಖವಾಗಿ ದಕ್ಷಿಣ ಭಾರತದ ಬಹುತೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಭಕ್ತಿಯಿಂದ ನಡೆದುಕೊಂಡಿದ್ದೇನೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ. ಇದೇ ವೇಳೆ ದೇವಸ್ಥಾನಗಳಿಗೆ ನನ್ನ ಭಕ್ತಿಯ ಕಾಣಿಕೆಯನ್ನೂ ಸಲ್ಲಿಸಿದ್ದೇನೆ. ಕೇರಳದ ಶಬರಿ ಮಲೆ ದೇವಸ್ಥಾನ ಮೇಲಿರುವ ಚಿನ್ನದ ಮೇಲ್ಜಾವಣಿಯನ್ನು ಕಾಣಿಕೆಯಾಗಿ ನಾನು ನೀಡಿದ್ದೇನೆ. ತಿರುಮಲದ ತಿರುಪತಿ ದೇವಸ್ಥಾನದ ಗರ್ಭಗುಡಿಯ ಚಿನ್ನದ ಹೊದಿಕೆಯನ್ನು ನಾನು ಭಕ್ತಿಯ ಕಾಣಿಕೆಯಾಗಿ ನೀಡಿದ್ದೇನೆ. ಕರ್ನಾಟಕದ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಮುಂಭಾಗದಲ್ಲಿರುವ ಧ್ವಜಸ್ಥಂಬ ನಾನು ಕಾಣಿಕೆಯಾಗಿ ನೀಡಿರುವ ಸ್ಥಂಬಗಳಾಗಿದೆ. ಇದೇ ರೀತಿ ಹಲವು ದೇವಸ್ಥಾನಗಳಿಗೆ ಭಕ್ತಿಯ ಕಾಣಿಕೆ ಸಲ್ಲಿಸಿದ್ದೇನೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ದೇವರು ನನ್ನು ಕಾಪಾಡುತ್ತೇನೆ ಎಂಬ ನಂಬಿಕೆ
ದೇವರು, ದೇವಸ್ಥಾನ ಮೇಲೆ ಅತೀವ ಭಕ್ತಿಯಿಂದ ನಡೆದುಕೊಂಡಿರುವ ತನಗೆ ಅದೇ ದೇವರು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ. ದೇವರು ನನ್ನು ರಕ್ಷಿಸುತ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದ್ದಾರೆ.
ವಿಜಯ್ ಮಲ್ಯ ಪಾಡ್‌ಕಾಸ್ಟ್ ಸಂಚಲನ
ರಾಜ್ ಶಮಾನಿ ನಡೆಸಿದ ವಿಜಯ್ ಮಲ್ಯ ಪಾಡ್‌ಕಾಸ್ಟ್ ಹೊಸ ಸಂಚಲನ ಸೃಷ್ಟಿಸಿದೆ. ವಿಜಯ್ ಮಲ್ಯ ಮೇಲಿದ್ದ ಅಭಿಪ್ರಾಯಗಳು ಬದಲಾಗುತ್ತಿದೆ. ಸುದೀರ್ಘ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ, ತನ್ನ ಉದ್ಯಮ ಸಾಮ್ರಾಜ್ಯ ಹೇಗೆ ಪತನಗೊಂಡಿತ್ತು. ತಾನು ಭಾರತ ಬಿಡುವ ಪರಿಸ್ಥಿತಿ, ಅದರ ಹಿಂದಿನ ಅಸಲಿ ಕತೆಗಳನ್ನು ವಿಜಯ್ ಮಲ್ಯ ಬಿಚ್ಚಿಟ್ಟಿದ್ದಾರೆ. ತನ್ನ ವಿರುದ್ಧ ಸಾರ್ವಜನಿಕವಾಗಿ ರೂಪುಗೊಂಡಿರುವ ಅಭಿಪ್ರಾಯ, ದೂರುಗಳಲ್ಲಿ ಸತ್ಯಾಂಶವಿಲ್ಲ. ತಾನು ಯಾರನ್ನು ವಂಚಿಸಿಲ್ಲ. ಸಾಲವಾಗಿತ್ತು, ಕಂಪನಿ ನಷ್ಟದಲ್ಲಿತ್ತು ನಿಜ. ಬ್ಯಾಂಕ್ ಸಾಲ ತೀರಿಸಲು ಹಲವು ಪ್ರಯತ್ನ ಮಾಡಿದ್ದೆ. ಆದರೆ ಸರ್ಕಾರವಾಗಲಿ, ವ್ಯವಸ್ಥೆಯಾಗಲಿ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಸರ್ಕಾರ, ರಾಜಕಾರಣಿಗಳು ನನ್ನನ್ನು ಫುಟ್ಬಾಲ್ ರೀತಿ ಬಳಸಿಕೊಂಡರು ಎಂದು ವಿಜಯ್ ಮಲ್ಯ ಹೇಳಿದ್ದಾರೆ. ಎಲ್ಲವನ್ನು ನಾನು ಸ್ವೀಕರಿಸುತ್ತೇನೆ. ಸಾರ್ವಜನಿಕರ ದೂರು, ಆಕ್ರೋಶ, ಅಪಮಾನ, ನೋವು ಎಲ್ಲವನ್ನು ಸ್ವೀಕರಿಸುತ್ತೇನೆ. ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಕಾನೂನು ಹೋರಾಟ ಮಾಡುತ್ತಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಹೋರಾಟ ಮುಂದುವರಿಸುತ್ತೇನೆ ಎಂದು ವಿಜಯ್ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
