ನವದೆಹಲಿ(ಫೆ.02): ನಿಮಗೆಲ್ಲಾ TRIVAGO ಜಾಹೀರಾತು ನೋಡಿ ನೋಡಿ ಬೇಜಾರಾಗಿರಬೇಕಲ್ಲ?. ಯಾವ ಟಿವಿ ಚಾನೆಲ್, ಯಾವ ಆನ್‌ಲೈನ್ ಪೋರ್ಟಲ್ ಓಪನ್ ಮಾಡಿದರೂ TRIVAGO ಜಾಹೀರಾತು ಕಣ್ಣುಗಳನ್ನು ಆವರಿಸಿ ಬಿಡುತ್ತದೆ.

ಆದರೆ TRIVAGO ಜಾಹೀರಾತಿನಲ್ಲಿ ಕಾಣಿಸಿಕೊಳ್ತಾರಲ್ಲಾ ಅವರು ಯಾರೆಂದು ಬಹುತೇಕರಿಗೆ ಗೊತ್ತಿಲ್ಲ. ಹೌದು TRIVAGO ಜಾಹೀರಾತಿನಲ್ಲಿ ಪರದೆ ಮೇಲೆ ಕಾಣಿಸಿಕೊಳ್ಳುವ ಯುವಕನ ಹೆಸರು ಅಭಿನವ್ ಕುಮಾರ್.

ಅರೆ! ಜಾಹೀರಾತಿನಲ್ಲಿ ನಟಿಸುವ ನಟನೊಬ್ಬನ ಮಾತು ಇಲ್ಲೇಕೆ ಅಂತೀರಾ?. ಇಲ್ಲೇ ಇರೋದು ಮಜಾ. ಅಸಲಿಗೆ TRIVAGO ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅಭಿನವ್ ಕುಮಾರ್ ನಟ ಅಲ್ಲ, ಬದಲಿಗೆ TRIVAGO ಇಂಡಿಯಾ ಕಂಪನಿಯ ನೌಕರ.

ಆಶ್ಚರ್ಯವಾಯ್ತಾ? ಹೌದು, ಅಭಿನವ್ ಕುಮಾರ್‌ TRIVAGO ಇಂಡಿಯಾ ಸಂಸ್ಥೆಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದವರು. TRIVAGO ಜಾಹೀರಾತಿಗೆ ಸೆಲೆಬ್ರಿಟಿಯೋರ್ವನ ಅನ್ವೇಷಣೆಯಲ್ಲಿದ್ದ ಕಂಪನಿಗೆ ತಮ್ಮದೇ ಸಂಸ್ಥೆಯ ಉದ್ಯೋಗಿಯೊಬ್ಬರನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವ ಐಡಿಯಾ ಹೊಳೆಯಿತು.

ಅದರಂತೆ ಅಭಿನವ್ ಕುಮಾರ್ ಅವರನ್ನು ಜಾಹೀರಾತಿಗೆ ಬಳಸಿಕೊಳ್ಳಲಾಯಿತು. TRIVAGOದ ಸರಣಿ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಭಿನವ್ ಕುಮಾರ್ ಅವರನ್ನು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯ್ತು.

ಹಲವರು ಅಭಿನವ್ ಕುಮಾರ್ ಅವರಿಗೆ ನೇರವಾಗಿ ಟ್ವೀಟ್ ಮಾಡಿ ಟ್ರೋಲ್ ಮಾಡತೊಡಗಿದರು. ಆದರೆ ಈ ಟ್ರೋಲ್‌ಗಳನ್ನು ಕ್ರೀಡಾಭಾವದಿಂದಲೇ ಸ್ವೀಕರಿಸಿದ ಅಭಿನವ್, ತಮಗೆ ಮಾಡಿದ ಟ್ರೋಲ್‌ಗಳನ್ನು ತಾವೇ ಖುದ್ದು ಶೇರ್ ಮಾಡಿ ಎಂಜಾಯ್ ಮಾಡತೊಡಗಿದರು.

ಆದರೆ ಇದೆಲ್ಲಾ ಈಗ ಇತಿಹಾಸ. ಟ್ರೋಲ್‌ಗಳಿಂದಲೇ ಫೇಮಸ್ ಆದ ಅಭಿನವ್ ಕುಮಾರ್ ಅವರನ್ನು TRIVAGO ಇದೀಗ ಭಾರತದ ಶಾಆಖೆಯ ಮುಖ್ಯಸ್ಥರನ್ನಾಗಿ ನೇಮಿಸಿದೆ.