ಬೀಜಿಂಗ್(ಆ.24): ಅಮೆರಿಕ ಅಧ್ಯಕ್ಷ ಚೀನಾ ಹಾಗೂ ರಷ್ಯಾಗಳ ವಿರುದ್ಧ ವ್ಯಾಪಾರ ಯುದ್ಧ ಘೋಷಣೆ ಮಾಡಿದ್ದಾರೆ. ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ 100ರಷ್ಟು ಸುಂಕ ಹೇರುವ ಮೂಲಕ ಚೀನಾಕ್ಕೆ ಮರ್ಮಾಘಾತವನ್ನೇ ನೀಡಿದ್ದಾರೆ.

ಟ್ರಂಪ್​ ನೀತಿ ಬೆನ್ನಲ್ಲೇ ಚೀನಾದ ಬೃಹತ್​ ಕಂಪನಿ ಅಲಿಬಾಬಾ ತಾನು ಅಮೆರಿಕದ ವಾಣಿಜ್ಯ ಯುದ್ಧವನ್ನು ಎದುರಿಸಿ ನಿಲ್ಲಲು ಸಮರ್ಥವಾಗಿರುವುದಾಗಿ ತಿಳಿಸಿದೆ. ಅಮೆರಿಕದೊಡನೆ ವಾಣಿಜ್ಯ ಸಮರಕ್ಕೂ ಕಂಪನಿ ಸಿದ್ಧವಿದೆ ಎಂದು ಘೋಷಿಸಲಾಗಿದೆ. ಜೊತೆಗೆ ಅಮೆರಿಕಕ್ಕೆ ಸೆಡ್ಡು ಹೊಡೆಯುವ ನಂಬಿಕೆ ಇದೆ ಎಂದು ಹೇಳಿಕೆ ನೀಡುವ  ಮೂಲಕ ಪರೋಕ್ಷವಾಗಿ ಯುದ್ಧಕ್ಕೂ ಆಹ್ವಾನ ನೀಡಿದೆ.

ನಿನ್ನೆ ಕಂಪನಿಯ ಒಟ್ಟು ಲಾಭವನ್ನು ಅಲಿಬಾಬಾ ಸಂಸ್ಥೆ ಘೋಷಿಸಿದ್ದು, ಚೀನಾದ ಲೆಕ್ಕದಲ್ಲಿ 8.7 ಬಿಲಿಯನ್​ ನಿವ್ವಳ ಲಾಭ ಗಳಿಸಿದೆ. ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಅಲಿಬಾಬಾ ಕಂಪನಿ ಬರೋಬ್ಬರಿ 8,865 ಕೋಟಿ ರೂ. ನಿವ್ವಳ ಲಾಭ ಗಳಿಕೆ ಮಾಡಿದೆ.  

ಅಮೆರಿಕದ ಉತ್ಪನ್ನಗಳ ಬೆಲೆ ಏರಿಕೆಯಾದರೆ, ಚೀನಾ ಗ್ರಾಹಕರು ಸ್ವದೇಶದ ಉತ್ಪನ್ನಗಳನ್ನು ಬಳಸುತ್ತಾರೆ ಅಥವಾ ಪ್ರಪಂಚದ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಾರೆ ಎಂದು ಅಲಿಬಾಬಾ ಸಂಸ್ಥೆಯ ಉಪಾಧ್ಯಕ್ಷ ಜೋಸೆಫ್​ ತ್ಸೈ ಹೇಳಿದ್ದಾರೆ.

ಅಲಿಬಾಬಾ ಸಂಸ್ಥೆ ಎಂದಿಗೂ ವಾಣಿಜ್ಯ ಯುದ್ಧವನ್ನು ಅಪೇಕ್ಷಿಸಿಲ್ಲ ಎಂದಿರುವ ಜೋಸೆಫ್, ಆದರೆ ಅಮೆರಿಕ  ಮಾರುಕಟ್ಟೆಯಲ್ಲಿ ವ್ಯಾಪಾರ ಕಷ್ಟವಾದರೆ, ಸಂಸ್ಥೆಗೆ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ ಎಂಧು ತಿಳಿಸಿದ್ದಾರೆ. ಈಗಾಗಲೆ ಅಮೆರಿಕ - ಚೀನಾ ಮಧ್ಯೆ ವ್ಯಾಪಾರ ವಹಿವಾಟಿನ ವಿಷಯದಲ್ಲಿ ಮನಸ್ತಾಪ ಉಂಟಾಗಿದ್ದು, ಅಲಿಬಾಬಾ ಸಂಸ್ಥೆಯ ಈ ಹೇಳಿಕೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.