ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಬುಧವಾರ ದಿನವಿಡಿ ಚಿನ್ನಾಭರಣ ವಹಿವಾಟು ಭರ್ಜರಿಯಾಗಿ ನಡೆದಿದ್ದು, ಪ್ರತಿ ವರ್ಷದಂತೆ ರಾಜ್ಯದಲ್ಲೆ ಅತೀ ಹೆಚ್ಚು ಖರೀದಿ ಆಗಿದೆ.

 ಬೆಂಗಳೂರು : ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಬುಧವಾರ ದಿನವಿಡಿ ಚಿನ್ನಾಭರಣ ವಹಿವಾಟು ಭರ್ಜರಿಯಾಗಿ ನಡೆದಿದ್ದು, ಪ್ರತಿ ವರ್ಷದಂತೆ ರಾಜ್ಯದಲ್ಲೆ ಅತೀ ಹೆಚ್ಚು ಖರೀದಿ ಆಗಿದೆ.

ಬುಧವಾರ ಬೆಳಗ್ಗೆ 7 ರಿಂದ ರಾತ್ರಿ 11ಗಂಟೆವರೆಗೂ ಗ್ರಾಹಕರು ಆಭರಣಗಳನ್ನು ಖರೀದಿಸಿದರು. ಪ್ರತಿಷ್ಠಿತ ಮಳಿಗೆಗಳಲ್ಲಿ ಮಾತ್ರವಲ್ಲದೆ, ಸಣ್ಣ ಸಣ್ಣ ಮಳಿಗೆಗಳಲ್ಲೂ ಕೂಡ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ವಹಿವಾಟು ನಡೆಯಿತು. ಚಿನ್ನ ಕೊಳ್ಳಲು ಬಂದವರು ತಮ್ಮೊಡನೆ ಅರ್ಚಕರನ್ನು ಕರೆತಂದು ಮಳಿಗೆಯಲ್ಲೇ ಪೂಜೆ ಮಾಡಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು.

ನಗರದ ಮಲ್ಲೇಶ್ವರ, ಬಸವನಗುಡಿ, ಜಯನಗರ, ನಾಗರಬಾವಿ ರಿಂಗ್‌ ರೋಡ್, ವೈಟ್‌ಫೀಲ್ಡ್‌, ಕೋರಮಂಗಲ ಸೇರಿದಂತೆ ವಿವಿಧೆಡೆ ಇರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರು ಚಿನ್ನ ಖರೀದಿ ಮಾಡಿದ್ದರು. ಈ ಮೊದಲೇ ಮುಂಗಡ ಕಾಯ್ದಿರಿಸಿದ್ದವರು ಹಬ್ಬದ ದಿನದಂದೆ ಮನೆಗೆ ಚಿನ್ನ ಕೊಂಡೊಯ್ಯಬೇಕು ಎಂಬ ಕಾರಣದಿಂದ ಬುಧವಾರ ಮನೆಗೆ ಒಯ್ದರು.

ಗ್ರಾಹಕರಿಗೆ ಆತಿಥ್ಯ:

ಗ್ರಾಹಕರ ಆತಿಥ್ಯಕ್ಕಾಗಿ ಕೆಲವೆಡೆ ಮಳಿಗೆ ಹೊರಗಡೆಯೇ ಪೆಂಡಾಲ್‌, ಚೇರ್‌ಗಳನ್ನು ಹಾಕಲಾಗಿತ್ತು. ಜತೆಗೆ ಜ್ಯೂಸ್‌, ಮಜ್ಜಿಗೆ ಕೊಟ್ಟು ಒಳಗಡೆ ಕಳುಹಿಸಲಾಗುತ್ತಿತ್ತು. ಜತೆಗೆ ಹೆಚ್ಚಿನ ಖಾಸಗಿ ಭದ್ರತೆಯನ್ನೂ ಅಳವಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: 1 ಲಕ್ಷವಾದ ಬಳಿಕ ಭಾರತದದಲ್ಲಿ ಚಿನ್ನದ ಬೆಲೆ ಕುಸಿತ ಕಾಣುತ್ತಿರೋದ್ಯಾಕೆ? ಇಂದಿನ ದರ ಎಷ್ಟು?

ಕಾಯಿನ್‌ ಮೂಲಕ ಹೂಡಿಕೆ:

ಮಳಿಗೆಗಳಲ್ಲಿ ಆಭರಣಗಳ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಕಿವಿಯೋಲೆ, ಬಳೆ, ನೆಕ್ಲೆಸ್‌, ಬ್ರೇಸ್‌ಲೇಟ್‌, ಆಂಟಿಕ್‌ ಜ್ಯುವೆಲರಿಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಈ ಮೂಲಕ ಗ್ರಾಹಕರು ಬೇಕಾದ ಆಭರಣಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ಆಭರಣಗಳನ್ನು ಬಳಸದೆ ಹೂಡಿಕೆಯ ಉದ್ದೇಶ ಹೊಂದಿರುವವರು ಚಿನ್ನದ ಕಾಯಿನ್‌ಗಳನ್ನು ಖರೀದಿ ಮಾಡಿದರು.

ಹೂಡಿಕೆ ಸಲುವಾಗಿ ‘ಗೋಲ್ಡ್‌ ಕಾಯಿನ್‌’ ಖರೀದಿ ಹೆಚ್ಚಾಗಿತ್ತು. ಈ ಬಾರಿ ಅರ್ಧ ಗ್ರಾಂ ನಿಂದ 100 ಗ್ರಾಂ ವರೆಗಿನ ಕಾಯಿನ್‌ಗಳನ್ನು ಮಳಿಗೆಗಳಲ್ಲಿದ್ದವು. ಆಭರಣ ಖರೀದಿ ಅಗತ್ಯ ಇಲ್ಲದವರು ಚಿನ್ನ ಖರೀದಿಸಲೇಬೇಕೆಂಬ ಒಲವುಳ್ಳವರು ಅಗತ್ಯದಷ್ಟು ಕಾಯಿನ್‌ಗಳನ್ನು ಖರೀದಿ ಮಾಡಿದ್ದಾರೆ ಎಂದು ವರ್ತಕರು ತಿಳಿಸಿದರು.

ಇದನ್ನೂ ಓದಿ: ಶೀಘ್ರದಲ್ಲಿಯೇ 70,000 ರೂ.ಗೆ 10 ಗ್ರಾಂ ಬಂಗಾರ; ₹27,000 ಇಳಿಕೆ ಮಾಹಿತಿ ಕೊಟ್ಟ ಚಿನ್ನದ ಗಣಿಯ ಸಿಇಒ

ಸ್ತ್ರೀಶಕ್ತಿ ಸಂಘದಿಂದ ಪಡೆದ ಸಾಲದಲ್ಲಿ ಚಿನ್ನ ಖರೀದಿ:

ಸ್ತ್ರೀಶಕ್ತಿ ಸಂಘದಿಂದ ಸಾಲ ಪಡೆದವರು ಮಕ್ಕಳ ಶಾಲಾ ಶುಲ್ಕವನ್ನು ಕಂತಿನಲ್ಲಿ ಪಡೆದು ಉಳಿದ ಮೊತ್ತದಲ್ಲಿ ಚಿನ್ನ ಖರೀದಿ ಮಾಡಿದ್ದಾರೆ. ಇದು ಹೂಡಿಕೆ ಮಾಡಿದಂತೆಯೂ ಆಗಿದೆ. ಚಿನ್ನಾಭರಣ ಮಳಿಗೆಗಳಲ್ಲಿ ಮಹಿಳೆಯರು ಈ ರೀತಿ ಹೇಳಿ ಕೊಂಚ ರಿಯಾಯಿತಿಯನ್ನೂ ಪಡೆದಿದ್ದಾರೆ ಎಂದು ಬೆಂಗಳೂರಿನ ವರ್ತಕರು ತಿಳಿಸಿದರು.