ಬೆಂಗಳೂರು[ಏ.16]: ಉದ್ಯಮಿ ಸದಾನಂದ ಮಯ್ಯ ಅವರು ಪ್ರಾರಂಭಿಸಿದ್ದ ‘ಮಯ್ಯಾಸ್‌ ಬೆವರೇಜಸ್‌ ಮತ್ತು ಫುಡ್ಸ್‌’ ಸಿದ್ಧ-ಆಹಾರಗಳ ಕಂಪನಿಯು ಕೊನೆಗೂ ಆರ್ಥಿಕ ಸಂಕಷ್ಟದಿಂದ ಪಾರಾಗಿದೆ.

ಒಂದು ವರ್ಷಕ್ಕೂ ಅಧಿಕ ಕಾಲದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಸಂಸ್ಥೆಯನ್ನು ಪುನರ್‌ ನಿರ್ಮಾಣ ಮಾಡಲು ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಾಲಯ (ಎನ್‌ಸಿಎಲ್‌ಟಿ)ದ ಪರಿಹಾರ ವೃತ್ತಿಪರರು (ರೆಸಲ್ಯೂಷನ್‌ ಪ್ರೊಫೆಷನಲ್ಸ್‌) ಆಕಾಶಿಕಾ ಫುಡ್ಸ್‌ ಸಂಸ್ಥೆಯನ್ನು ಆಯ್ಕೆ ಮಾಡಿದ್ದು, ನಿರ್ವಹಣೆಯನ್ನು ಆಕಾಶಿಕಾ ಫುಡ್ಸ್‌ಗೆ ವಹಿಸಿದ್ದಾರೆ.

ಕರ್ನಾಟಕ ಬ್ಯಾಂಕ್‌ನ ಮುಂದಾಳತ್ವದ ಸಾಲಗಾರ ಸಮಿತಿಯು (ಕಮಿಟಿ ಆಫ್‌ ಕ್ರೆಡಿಟರ್ಸ್‌) ಆಕಾಶಿಕಾ ಫುಡ್ಸ್‌ ಪ್ರೈ ಲಿ. ಸಲ್ಲಿಸಿದ ಯೋಜನೆಗಳನ್ನು ಎನ್‌ಸಿಎಲ್‌ಟಿಗೆ ಅನುಮೋದನೆಗಾಗಿ ಶಿಫಾರಸು ಮಾಡಿ ಕಳುಹಿಸಿದೆ. ಎಲ್ಲಾ ಇತರ ಬಿಡ್‌ಗಳ ಮೌಲ್ಯಮಾಪನ ಮತ್ತು ಸಂಭಾವ್ಯ ಪರಿಹಾರ ವೃತ್ತಿಪರರೊಂದಿಗೆ ಚರ್ಚೆ ಕೈಗೊಂಡ ಬಳಿಕ ಈ ನಿರ್ಧಾರ ಕೈಗೊಂಡರು ಎಂದು ಪರಿಹಾರ ವೃತ್ತಿಪರರಾದ ಆಶೀಶ್‌ ಕನೋಡಿಯಾ ಅವರು ಮಯ್ಯಾಸ್‌ ವೆಬ್‌ಸೈಟ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಕಾಶಿಕಾ ಫರ್ಮ್ಸ್ ಗೆ ಅದು ಯಶಸ್ವಿ ಬಿಡ್ಡರ್‌ ಆಗಿರುವುದನ್ನು ಖಾತರಿಪಡಿಸುವ ಆಶಯ ಪತ್ರವನ್ನು (ಲೆಟರ್‌ ಆಫ್‌ ಇಂಟೆಂಟ್‌) ತಾವು ನೀಡಿದ್ದೇವೆ. ಆದರೆ, ತೀರ್ಮಾನ ಕೈಗೊಳ್ಳುವ ಪ್ರಾಧಿಕಾರವಾದ ಎನ್‌ಸಿಎಲ್‌ಟಿಯು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಕನೋಡಿಯಾ ಹೇಳಿದ್ದಾರೆ.

ಆಕಾಶಿಕಾ ಫುಡ್ಸ್‌ನ ನಿರ್ದೇಶಕ ಹಾಗೂ ಬೆಂಗಳೂರು ವಿತರಕರ ವೇದಿಕೆಯ ಅಧ್ಯಕ್ಷರಾದ ಎಸ್‌. ನವಮೋಹನ್‌ ಕುಮಾರ್‌, ಮಯ್ಯಾಸ್‌ನ ಮಾಲಿಕತ್ವವನ್ನು ಪಡೆಯಲಿದ್ದೇವೆ. ಆದರೆ, ಎನ್‌ಸಿಎಲ್‌ಟಿ ಹೊರಡಿಸುವ ಅಂತಿಮ ತೀರ್ಮಾನವು ಏಪ್ರಿಲ್‌ 20ರಂದು ಹೊಬರುವ ನಿರೀಕ್ಷೆ ಹಿನ್ನೆಲೆಯಲ್ಲಿ ನಾವು ಆರ್ಥಿಕ ವಿವರಗಳನ್ನು ಬಹಿರಂಗ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಆಕಾಶಿಕಾ ಫುಡ್ಸ್‌ ಕಂಪನಿ, ಮಯ್ಯಾಸ್‌ ಉದ್ಯೋಗಿಗಳು, ವಿತರಕರು, ಮತ್ತು ವ್ಯಾಪಾರಸ್ಥರ ಸಹಯೋಗವಾಗಿದೆ. ಬೆಂಬಲಿಗನಾಗಿ ನನ್ನ ತಂದೆ ಸದಾನಂದ ಮಯ್ಯ ಮತ್ತು ಸ್ವತಃ ನಾನು ಈ ಸಹಯೋಗಕ್ಕೆ ನಮ್ಮ ಸಹಕಾರ ವಿಸ್ತರಿಸಿದ್ದೇವೆ. ನನ್ನ ತಂದೆಗೆ ಆಹಾರ ಸಂಸ್ಕರಣೆ ಉದ್ಯಮದಲ್ಲಿ ಸರಿಸುಮಾರು 50 ವರ್ಷಗಳ ಅನುಭವವಿದೆ ಎಂದು ಸುದರ್ಶನ್‌ ಮಯ್ಯ ಹೇಳಿದ್ದಾರೆ.