ನವದೆಹಲಿ [ಜು.05]: ಕೃಷಿ ಉದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವ ರಾಜ್ಯಗಳ  ರ‍್ಯಾಂಕಿಂಗ್ ಅನ್ನು ನೀತಿ ಆಯೋಗ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕ ನಂ.8 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 

ಉಳಿದಂತೆ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಟಾಪ್ 3 ಸ್ಥಾನ ಪಡೆದುಕೊಂಡಿವೆ. ವಿಶೇಷವೆಂದರೆ ಮಾರುಕಟ್ಟೆ ಸುಧಾರಣೆ ಕ್ರಮಗಳನ್ನು ಜಾರಿ ಮಾಡುವ ಮುಂಚೂಣಿ ರಾಜ್ಯವೆಂದೇ ಪರಿಗಣಿಸಲಾದ ಕರ್ನಾಟಕ ಕೃಷಿ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವಲ್ಲಿ ಮಾತ್ರ ವಿಫಲವಾಗಿದೆ. 

ಭೂಮಿ ಗುತ್ತಿಗೆ ವಿಷಯದಲ್ಲಿ ಉದಾರೀಕರಣ ಮಾಡದೇ ಇರುವುದು ಹಾಗೂ ಖಾಸಗಿ ಭೂಮಿಯಲ್ಲಿನ ಮರಗಳಿಗೆ ಕೊಡಲಿ ಹಾಕುವ ವಿಷಯದಲ್ಲಿ ಕಠಿಣ ನಿಲುವು ಹೊಂದಿರುವ ಕಾರಣ,  ರ‍್ಯಾಂಕಿಂಗ್ ನಲ್ಲಿ ಕರ್ನಾಟಕ ಸರ್ಕಾರ ಹಿಂದೆ ಬಿದ್ದಿದೆ. ಅಲ್ಲದೆ, ದೇಶದ ರೈತರು ಬೆಳೆದ ಬೆಳೆಗಳಿಗೆ ಆನ್‌ಲೈನ್ ವೇದಿಕೆ ಕಲ್ಪಿಸುವ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಅಥವಾ ಇ-ನಾಮ್‌ನಲ್ಲಿ ಕರ್ನಾಟಕ ಇದುವರೆಗೂ ಸಂಯೋಜನೆಯಾಗಿಲ್ಲ. 

ಈ ಹಿನ್ನೆಲೆಯಲ್ಲಿ ಕೃಷಿ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕಳಪೆ ಸಾಧನೆ ಮಾಡಿದೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಕೃಷಿ ವಲಯದಲ್ಲಿ ಸಾಕಷ್ಟು ಅಭ್ಯುದಯ ಸಾಧಿಸಿದ ಪಂಜಾಬ್ ಆರ್ಥಿಕ ಸಮೀಕ್ಷೆಯ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದೆ. ಕೃಷಿ ಕ್ಷೇತ್ರಕ್ಕೆ ಉತ್ತಮ ವಾತಾವರಣ ನಿರ್ಮಿಸುವ ವಿಚಾರದಲ್ಲಿ ರಾಜ್ಯಗಳು ಎಲ್ಲಿ ಎಡವಿವೆ ಹಾಗೂ ಕೃಷಿ ವಲಯದ ಅಭಿವೃದ್ಧಿಗಾಗಿ ರಾಜ್ಯಗಳು ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.