* ಡೀಸೆಲ್‌ 100 ರು. ತಲುಪಲು ಕೇವಲ 20 ಪೈಸೆಯಷ್ಟೇ ಬಾಕಿ* ಪೆಟ್ರೋಲ್‌ 29 ಪೈಸೆ, ಡೀಸೆಲ್‌ 28 ಪೈಸೆ ಹೆಚ್ಚಳ* ಮೇ 4ರ ಬಳಿಕ 22ನೇ ಬಾರಿ ತೈಲ ದರ ಏರಿಕೆ

ನವದೆಹಲಿ(ಜೂ.12): ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ದರ 100ರ ಗಡಿ ದಾಟಿದ್ದಾಯ್ತು. ಇದೀಗ ಡೀಸೆಲ್‌ ದರವೂ 100ರ ಗಡಿಗೆ ಬಂದು ನಿಂತಿದೆ. ತೈಲ ಕಂಪನಿಗಳು ಶುಕ್ರವಾರ ಪೆಟ್ರೋಲ್‌ ಬೆಲೆಯನ್ನು ಲೀ.ಗೆ 29 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು ಲೀ.ಗೆ 28 ಪೈಸೆ ಹೆಚ್ಚಳ ಮಾಡಿವೆ. ಇದರೊಂದಿಗೆ ದೇಶದಲ್ಲೇ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುವ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಡೀಸೆಲ್‌ ಬೆಲೆ 99.80 ರು.ಗೆ ತಲುಪಿದೆ. ಜೊತೆಗೆ ಪೆಟ್ರೋಲ್‌ ದರ 106.94 ರು.ಗೆ ತಲುಪಿದೆ.

ಶುಕ್ರವಾರ ಮಾಡಿದ ಏರಿಕೆಯೊಂದಿಗೆ ತೈಲ ಕಂಪನಿಗಳು ಮೇ 4ರ ಬಳಿಕ 22ನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಮಾಡಿದಂತಾಗಿದೆ. ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್‌ ದರ ಲೀ.ಗೆ 5.45 ಮತ್ತು ಡೀಸೆಲ್‌ ದರ ಲೀ.ಗೆ 6.02ರು.ನಷ್ಟುಹೆಚ್ಚಳವಾಗಿದೆ.

ಶುಕ್ರವಾರದ ಏರಿಕೆ ಬಳಿಕ ಪೆಟ್ರೋಲ್‌ ದರ ಮೆಟ್ರೋ ನಗರಿಗಳಾದ ಮುಂಬೈನಲ್ಲಿ 102.04 ರು., ಬೆಂಗಳೂರಿನಲ್ಲಿ 99.05 ರು., ಚೆನ್ನೈ 97.19 ರು. ದೆಹಲಿಯಲ್ಲಿ 95.85, ಕೋಲ್ಕತಾ 95.80 ರು.ಗೆ ತಲುಪಿದೆ.