Asianet Suvarna News Asianet Suvarna News

ಏರೋ ಇಂಡಿಯಾ: ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಸಚಿವರ ಸಭೆ

ಏರೋ ಇಂಡಿಯಾ ಹಿನ್ನೆಲೆ ರಕ್ಷಣಾ ಕಂಪನಿ ಸಿಇಒಗಳ ಜೊತೆ 13ಕ್ಕೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಸಭೆ ನಡೆಸಲಿದ್ದಾರೆ. ಉದ್ಯಮಿಗಳು ಸರ್ಕಾರದ ನಡುವಿನ ಸಂಬಂಧ ವೃದ್ಧಿಗೆ ಚರ್ಚೆ ನಡೆಯಲಿದೆ. 

aero india 2023 rajnath singh to chair aerospace defence biz ceos round table ash
Author
First Published Feb 9, 2023, 12:12 PM IST

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ಏರೋ ಇಂಡಿಯಾದ 14ನೇ ಆವೃತ್ತಿಯ ಉದ್ಘಾಟನಾ ದಿನವಾದ ಫೆ.13ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ವೈಮಾನಿಕ ಹಾಗೂ ರಕ್ಷಣಾ ವಲಯದ ಸ್ವದೇಶಿ, ಜಾಗತಿಕ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ದುಂಡು ಮೇಜಿನ ಸಭೆ ನಡೆಯಲಿದೆ.
ಮೇಕ್‌ ಇನ್‌ ಇಂಡಿಯಾ ಅಭಿಯಾನ, ಮೂಲ ಉಪಕರಣ ತಯಾರಿಕೆಯನ್ನು (ಒಇಎಂ) ಉತ್ತೇಜಿಸುವ ಹಾಗೂ ಸುಲಭವಾಗಿ ವಹಿವಾಟು ನಡೆಸುವ ದೃಷ್ಟಿಯಿಂದ ಉದ್ದಿಮೆದಾರರು ಮತ್ತು ಸರ್ಕಾರದ ನಡುವಿನ ಸಂಬಂಧ ವೃದ್ಧಿ ಕುರಿತು ಮುಖ್ಯವಾಗಿ ಸಭೆಯಲ್ಲಿ ಚರ್ಚೆಯಾಗಲಿದೆ.

ಬೋಯಿಂಗ್‌, ಲಾಕ್ಹೀಡ್‌, ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌, ಜನರಲ್‌ ಅಟಾಮಿಕ್ಸ್, ಲೈಬರ್‌ ಗ್ರೂಪ್‌ ಮುಂತಾದ ಜಾಗತಿಕ ಹೂಡಿಕೆದಾರರು ಸೇರಿ 26 ದೇಶಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದುಂಡು ಮೇಜಿನ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಇದನ್ನು ಓದಿ: Aero India 2023, ಬೆಂಗಳೂರಲ್ಲಿ ಫೆ.13ರಿಂದ ವೈಮಾನಿಕ ಪ್ರದರ್ಶನ, ಟಿಕೆಟ್ ಬೆಲೆ ಪ್ರಕಟ!

ಎಚ್‌ಎಎಲ್‌, ಬಿಇಎಲ್‌, ಭಾರತ್‌ ಡೈನಾಮಿಕ್ಸ್ ಲಿಮಿಟೆಡ್‌ (ಬಿಡಿಎಲ್‌), ಬಿಇಎಂಎಲ್‌ ಲಿಮಿಟೆಡ್‌, ಮಿಶ್ರಾ ಧಾತು ನಿಗಮ ನಿಯಮಿತ ಮತ್ತಿತರ ದೇಶಿಯ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ದೇಶದ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಕಂಪನಿಗಳಾದ ಲಾರ್ಸೆನ್‌ ಮತ್ತು ಟರ್ಬೋ, ಭಾರತ್‌ ಫೋರ್ಜನ್‌, ಡೈನಾಮಿಟಿಕ್‌ ಟೆಕ್ನಾಲಜೀಸ್‌, ಬ್ರಹ್ಮೋಸ್‌ ಏರೋಸ್ಪೇಸ್‌ ಸೇರಿ ಮತ್ತಿತರ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.

ಸ್ವದೇಶೀಕರಣ, ರಫ್ತು ಉತ್ತೇಜನ ಬಗ್ಗೆ ಚರ್ಚೆ
ಭಾರತವನ್ನು ವಾಣಿಜ್ಯ ಉತ್ಪಾದನಾ ಕೇಂದ್ರವಾಗಿಸಲು ಕೈಗಾರಿಕೆಗಳು ಕೇವಲ ‘ಮೇಕ್‌ ಇನ್‌ ಇಂಡಿಯಾ’ ಆದರೆ ಸಾಲದು ‘ಮೇಕ್‌ ಇನ್‌ ಇಂಡಿಯಾ ಫಾರ್‌ ದಿ ವಲ್ಡ್‌ರ್‍’ ಆಗುವ ದೃಷ್ಟಿಯಿಂದ ರಕ್ಷಣಾ ಉಪಕರಣಗಳ ಉತ್ಪಾದನೆಗೂ ಹೆಚ್ಚು ಗಮನಹರಿಸಲಾಗುತ್ತಿದೆ. ರಕ್ಷಣಾ ಉಪಕರಣ, ಶಸ್ತ್ರಾಸ್ತ್ರ ಆಮದು ಬದಲಿಗಾಗಿ ಧನಾತ್ಮಕವಾಗಿ ಸ್ವದೇಶೀಕರಣ, ರಫ್ತು ಉತ್ತೇಜನ, ಎಫ್‌ಡಿಐ ಉದಾರೀಕರಣ ಮತ್ತು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆಯಂತಹ ಉಪಕ್ರಮಗಳ ಮೂಲಕ ಸರ್ಕಾರ ಭಾರತೀಯ ರಕ್ಷಣಾ ಉತ್ಪಾದನಾ ಪೂರಕ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದೆ. ಈ ವಿಚಾರಗಳನ್ನು ಕೇಂದ್ರಿಕರಿಸಿ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

ಇದನ್ನು ಓದಿ: Bengaluru: ಏರ್‌ ಶೋ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ‘ಜಿಯೋಸ್ಪೇಷಿಯಲ್‌’ ತಂತ್ರ!

ಏರ್‌ಶೋಗೆ ಪ್ರಧಾನಿ ಚಾಲನೆ?
ಜಾಗತಿಕ ವೈಮಾನಿಕ ಉದ್ಯಮದಲ್ಲಿ ಪ್ರಮುಖ ಪ್ರದರ್ಶನವಾದ ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಬಹುತೇಕ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುವ ಸಾಧ್ಯತೆ ಇದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿದೆ.

‘ಏರೋ ಇಂಡಿಯಾ’ದಲ್ಲಿ ವಿಶ್ವದಾದ್ಯಂತ ಒಟ್ಟು 731 ಪ್ರದರ್ಶಕರು ಭಾಗವಹಿಸಲಿದ್ದಾರೆ. ಏರೋಸ್ಪೇಸ್‌ ಕಂಪನಿಗಳ ಬೃಹತ್‌ ಪ್ರದರ್ಶನ ಮತ್ತು ವ್ಯಾಪಾರ ಮೇಳ ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಬಾರಿ ಪ್ರದರ್ಶನದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಫೆ.13ರಿಂದ 17ರ ವರೆಗೆ ಏರೋ ಇಂಡಿಯಾ ಶೋ, ಪ್ರಧಾನಿ ಮೋದಿ ಉದ್ಘಾಟನೆ: ಸಿಎಂ ಬೊಮ್ಮಾಯಿ

Follow Us:
Download App:
  • android
  • ios