Bengaluru: ಏರ್ ಶೋ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ‘ಜಿಯೋಸ್ಪೇಷಿಯಲ್’ ತಂತ್ರ!
ಫೆ.13ರಿಂದ ಫೆ.17ರವರೆಗೆ ನಡೆಯಲಿರುವ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆವರಣ ಮಾತ್ರವಲ್ಲ, ಅದರ ಸುತ್ತಲಿನ 225 ಚ.ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಂಭವನೀಯ ಹಾನಿ ಪ್ರಮಾಣ ತಗ್ಗಿಸುವುದಕ್ಕೆ ರಾಜ್ಯ ಸರ್ಕಾರವು ಕಾರ್ಯತಂತ್ರ ರೂಪಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಫೆ.03): ಫೆ.13ರಿಂದ ಫೆ.17ರವರೆಗೆ ನಡೆಯಲಿರುವ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆವರಣ ಮಾತ್ರವಲ್ಲ, ಅದರ ಸುತ್ತಲಿನ 225 ಚ.ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸಿದರೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಂಭವನೀಯ ಹಾನಿ ಪ್ರಮಾಣ ತಗ್ಗಿಸುವುದಕ್ಕೆ ರಾಜ್ಯ ಸರ್ಕಾರವು ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ನೆರವು ಪಡೆಯಲಾಗಿದೆ.
ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಬಳಸಿ ವಾಯು ಪ್ರದರ್ಶನ ನಡೆಯುವ ಇಡೀ ಪ್ರದೇಶವನ್ನು ಮ್ಯಾಪಿಂಗ್ ಮಾಡಲಾಗಿದೆ. ಸ್ಯಾಟಲೈಟ್ ಆಧರಿತ ಜಿಪಿಎಸ್, ಜಿಐಎಸ್, ರಿಮೋಟ್ ಸೆನ್ಸಿಂಗ್ ವ್ಯವಸ್ಥೆಯನ್ನು ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಒಳಗೊಂಡಿರುತ್ತದೆ. ವೈಮಾನಿಕ ಪ್ರದರ್ಶನದ ವಾಯುನೆಲೆ, ಪ್ರದರ್ಶನ ಕೇಂದ್ರ ಮಾತ್ರವಲ್ಲ, ಅದರ ಸುತ್ತ-ಮುತ್ತಲಿನ 225 ಚದರ ಕಿ.ಮೀ. ವ್ಯಾಪ್ತಿಯನ್ನು ಮೊದಲ ಬಾರಿಗೆ ಭೌಗೋಳಿಕ ತಂತ್ರಜ್ಞಾನದ ಮಾಹಿತಿ ನಕ್ಷೆ (ಜಿಯೋ ಸ್ಪೇಷಿಯಲ್ ತಂತ್ರಜ್ಞಾನ) ಸಿದ್ಧಪಡಿಸಲಾಗಿದೆ.
ಸಿದ್ದರಾಮಯ್ಯ, ರಾಬರ್ಟ್ ವಾದ್ರಾ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು
ವಿಪತ್ತು ನಿರ್ವಹಣಾ ಕೋಶ: ವೈಮಾನಿಕ ಪ್ರದರ್ಶನದ ವ್ಯಾಪ್ತಿಯ ಒಳಾಂಗಣದ ವಿಪತ್ತು ನಿರ್ವಹಣೆಗೆ ಭಾರತೀಯ ವಾಯುಸೇನೆಯ ಹಿರಿಯ ಅಧಿಕಾರಿ ಹಾಗೂ ಹೊರಾಂಗಣ ವಿಪತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯನ್ನು ಕಮಾಂಡಿಂಗ್ ಅಧಿಕಾರಿಯಾಗಿ ನೇಮಿಸಲಾಗಿದೆ. ಜತೆಗೆ ಸಂಚಾರಿ ಪೊಲೀಸ್, ಬಿಬಿಎಂಪಿ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಅಗ್ನಿ ಶಾಮಕ ದಳ, ಪೊಲೀಸ್ ಹಾಗೂ ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಉಪ ಮತ್ತು ಸಹಾಯಕ ಕಮಾಂಡಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಅಲ್ಲದೇ ಜಲಮಂಡಳಿ, ಪಿಡಬ್ಲ್ಯೂಡಿ, ಬೆಸ್ಕಾಂ, ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ವಿಪತ್ತು ನಿರ್ವಹಣಾ ಕೋಶ ರಚನೆ ಮಾಡಲಾಗಿದೆ. ಜತೆಗೆ, ಅನಾಹುತಗಳ ಬಗ್ಗೆ ನಿಗಾ ವಹಿಸುವುದಕ್ಕೆ ಹಾಗೂ ತಕ್ಷಣ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವುದಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಇಂಟಿಗ್ರೇಟೆಡ್ ಕಮಾಂಡಿಂಗ್ ಆ್ಯಂಡ್ ಕಂಟ್ರೋಲ್ ಕೊಠಡಿ ಸಹ ರೂಪಿಸಲಾಗಿದೆ.
ಜಿಯೋಸ್ಪೇಷಿಯಲ್ ಅಂದರೆ ಏನು?: ಉಪಗ್ರಹ ಆಧರಿತ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್), ನಿರ್ದಿಷ್ಟಪ್ರದೇಶದ ಭೌತಿಕ ಚಹರೆಗಳನ್ನು ಗುರುತಿಸಿ ಅದರ ಬಗ್ಗೆ ನಿಗಾ ವಹಿಸುವ ರಿಮೋಟ್ ಸೆನ್ಸಿಂಗ್ ಹಾಗೂ ಭೌಗೋಳಿಕ ಮಾಹಿತಿಯನ್ನು ಸಂಸ್ಕರಿಸಿ ನೀಡುವ ಕಂಪ್ಯೂಟರ್ ಆಧರಿತ ಜಿಯಾಗ್ರಫಿಕ್ ಇನ್ಫರ್ಮೇಷನ್ ಸಿಸ್ಟಮ್‌ಗಳನ್ನು (ಜಿಐಎಸ್) ಒಂದು ಭೂಭಾಗದ ಸಮಗ್ರ ಮತ್ತು ನಿಖರ ಮಾಹಿತಿ ಹೊಂದುವ ತಂತ್ರಜ್ಞಾನವೇ ಜಿಯೋಸ್ಪೇಷಿಯಲ್ ಟೆಕ್ನಾಲಜಿ.
ಹೇಗೆ ಕೆಲಸ ಮಾಡುತ್ತೆ?: ಯಲಹಂಕ ವಾಯುನೆಲೆ ಸುತ್ತಲಿನ 225 ಚ.ಕಿ.ಮೀ ವ್ಯಾಪ್ತಿಯನ್ನು ಗ್ರಿಡ್, ಸಬ್ ಗ್ರಿಡ್ ಹಾಗೂ ಮೈಕ್ರೋ ಗ್ರಿಡ್‌ಗಳಾಗಿ ವಿಂಗಡಿಸಲಾಗಿದೆ. ಒಟ್ಟು 9 ಗ್ರಿಡ್, 25 ಸಬ್ ಗ್ರಿಡ್, 100 ಮೈಕ್ರೋ ಗ್ರಿಡ್‌ಗಳಿರುತ್ತವೆ. ಪ್ರತಿ ಗ್ರಿಡ್ 5 ಚ.ಕಿ.ಮೀ. ವ್ಯಾಪ್ತಿ ಒಳಗೊಂಡಿರುತ್ತದೆ. ನಂತರ ಗ್ರಿಡ್‌ಗಳನ್ನು 1 ಚ.ಕಿ.ಮೀ ಸಬ್ ಗ್ರಿಡ್‌ಗಳಾಗಿ ವಿಭಜಿಸಲಾಗಿದೆ. ಸಬ್ ಗ್ರಿಡ್‌ಗಳನ್ನು ತಲಾ 100 ಚ.ಮೀ. ಮೈಕ್ರೋಗ್ರಿಡ್‌ಗಳಾಗಿ ಬೇರ್ಪಡಿಸಲಾಗಿದೆ. ಪ್ರತಿ ಗ್ರಿಡ್‌ಗಳಿಗೆ 1, 2, 3 ಹೀಗೆ 9ರವರೆಗೆ ಸಂಖ್ಯೆ ನೀಡಲಾಗಿದೆ. ಸಬ್ ಗ್ರಿಡ್‌ಗಳಿಗೆ ಎ, ಬಿ, ಸಿ ಎಂದು, ಮೈಕ್ರೋಗ್ರಿಡ್‌ಗಳಿಗೆ 0, 1, 2, 3 ಹೀಗೆ 100 ರವರೆಗೆ ಸಂಖ್ಯೆ ನೀಡಲಾಗಿದೆ. ಹೀಗೆ, ಪ್ರತಿ ಜಾಗವನ್ನೂ ತಾಂತ್ರಿಕವಾಗಿ ಗುರುತು ಮಾಡಿರಲಾಗುತ್ತದೆ.
ಏನಿದರ ಉಪಯೋಗ?: ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಅಡಿ ನಿರ್ದಿಷ್ಟಪ್ರದೇಶವನ್ನು ನಿಖರವಾಗಿ ಗುರುತಿಸಿರುವುದರಿಂದ ಯಾವುದೇ ಅವಘಡ ಸಂಭವಿಸಿದರೂ ಅಲ್ಲಿಗೆ ತುರ್ತಾಗಿ ತೆರಳಿ ರಕ್ಷಣೆ ಹಾಗೂ ಪರಿಹಾರ ಕಾರಾರಯಚರಣೆ ಕೈಗೊಳ್ಳಬಹುದು. ಇದರಿಂದಾಗಿ ದುರಂತದಿಂದ ಉಂಟಾಗುವ ಹೆಚ್ಚಿನ ಹಾನಿ ತಡೆಗಟ್ಟಬಹುದು.
ವಿಪತ್ತು ನಿರ್ವಹಣೆ ಮಾಡೋರ್ಯಾರು?
- 92 ಮಂದಿಯ 2 ರಾಷ್ಟ್ರೀಯ ವಿಪತ್ತು ಪ್ರತಿ ಸ್ಪಂದನಾ ತಂಡ
- 120 ಮಂದಿಯ 2 ತುರ್ತು ಕಾರ್ಯಾಚರಣೆ ತಂಡ
- 80 ಮಂದಿಯ 2 ಕೇಂದ್ರ ಮತ್ತು ರಾಜ್ಯ ಮೀಸಲು ಪೊಲೀಸ್ ತಂಡ
- ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ
- ಅಗ್ನಿ ಶಾಮಕ ದಳ
- ರಕ್ಷಣಾ ಕಾರ್ಯಾಚರಣೆಗೆ ಕ್ರೈನ್ ಮತ್ತು 30 ಸಿಬ್ಬಂದಿ
ಗೊಂಗಡಿಪುರದಲ್ಲಿ ಚಿರತೆ ಪ್ರತ್ಯಕ್ಷ?: ಹೆಜ್ಜೆ ಗುರುತು, ನಾಯಿಯ ದೇಹ ಪತ್ತೆ
ಏರೋ ಇಂಡಿಯಾ ಯುದ್ಧ ಸಾಮಗ್ರಿ ಪ್ರದರ್ಶಿಸುವ ಬೃಹತ್ ಕಾರ್ಯಕ್ರಮ. ವಿಮಾನಗಳ ಹಾರಾಟ ಕೇವಲ ವಾಯುನೆಲೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸುತ್ತಮುತ್ತಲಿನ ಪ್ರದೇಶದ ಬಗ್ಗೆಯೂ ಜಾಗ್ರತೆ ವಹಿಸಬೇಕಾದ ಅವಶ್ಯಕತೆ ಇದೆ. ಅದಕ್ಕಾಗಿ ‘ಜಿಯೋ ಸ್ಪೇಷಿಯಲ್ ತಂತ್ರಜ್ಞಾನ’ ಆಧರಿಸಿ ತುರ್ತು ವಿಪತ್ತು ನಿರ್ವಹಣೆಗೆ ಕ್ರಿಯಾ ಯೋಜನೆ ರಚಿಸಲಾಗಿದೆ.
- ಮನೋಜ್ ರಾಜನ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ