ನವದೆಹಲಿ(ಅ.22): ಇನ್ನು ಮುಂದೆ ನೀವು ಎಟಿಎಂನಿಂದ 5000 ರು.ಗಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಹೆಚ್ಚುವರಿ ಶುಲ್ಕವನ್ನು ತೆರಬೇಕಾಗಿ ಬರಬಹುದು. ಏಕೆಂದರೆ ಎಟಿಎಂನಿಂದ ಹಣ ತೆಗೆಯಲು ಈಗಿರುವ ನಿಯಮದಲ್ಲಿ 8 ವರ್ಷಗಳ ಬಳಿಕ ಬದಲಾವಣೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಒಂದು ವೇಳೆ ಹೊಸ ನಿಯಮ ಜಾರಿಯಾದರೆ, ತಿಂಗಳಿಗೆ ಐದು ಬಾರಿ ಉಚಿತ ಹಣ ತೆಗೆಯುವ ಆಯ್ಕೆ ರದ್ದಾಗಲಿದೆ. 5000ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರು. ಶುಲ್ಕ ವಿಧಿಸುವ ಸಾಧ್ಯತೆ ಇದೆ. ಸದ್ಯ ಎಟಿಎಂನಿಂದ ತಿಂಗಳಿಗೆ 5 ಬಾರಿ ಉಚಿತವಾಗಿ ಹಣ ತೆಗೆಯುವುದಕ್ಕೆ ಅವಕಾಶ ಇದೆ. ಐದರ ಕೋಟಾ ಮುಗಿದ ಬಳಿಕ ಪ್ರತಿ ಬಾರಿ ಹಣ ತೆಗೆಯಲು 20 ರು. ಶುಲ್ಕ ವಿಧಿಸಲಾಗುತ್ತದೆ.

ಆರ್‌ಬಿಐ ನೇಮಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಎಟಿಎಂನಿಂದ ಹಣ ತೆಗೆಯಲು ಹೊಸ ನಿಯಮಗಳನ್ನು ರೂಪಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ, ಸಮಿತಿಯ ವರದಿ ಇನ್ನೂ ಸಾರ್ವಜನಿಕವಾಗಿ ಪ್ರಕಟಗೊಂಡಿಲ್ಲ. ಮಾಹಿತಿ ಹಕ್ಕಿನ ಅಡಿಯಲ್ಲಿ ಈ ಮಾಹಿತಿಯನ್ನು ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.