Asianet Suvarna News Asianet Suvarna News

ಸಂಸತ್ತಲ್ಲಿ ಅದಾನಿ ಷೇರು ವಿವಾದ ಕೋಲಾಹಲ: ಸುಪ್ರಿಂಕೋರ್ಟ್ ತನಿಖೆಗೆ ವಿಪಕ್ಷಗಳ ಪಟ್ಟು

ಖ್ಯಾತ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹದ ಕಂಪನಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನಲಾದ ವರದಿ ಹಾಗೂ ಅದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಪತನದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸಲು ಪಟ್ಟು ಹಿಡಿದು ವಿಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿವೆ.

Adani share dispute uproar in Parliament, Opposition demands for Supreme Court probe akb
Author
First Published Feb 3, 2023, 7:05 AM IST

 ನವದೆಹಲಿ:  ಖ್ಯಾತ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹದ ಕಂಪನಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ ಎನ್ನಲಾದ ವರದಿ ಹಾಗೂ ಅದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಪತನದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಸಲು ಪಟ್ಟು ಹಿಡಿದು ವಿಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲವೆಬ್ಬಿಸಿವೆ. ವಿವಾದದ ಬಗ್ಗೆ ಗುರುವಾರ ಉಭಯ ಸದನಗಳಲ್ಲಿ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಮಂಡಿಸಲು ಯತ್ನಿಸಿದ ನಿಲುವಳಿ ಸೂಚನೆಗಳನ್ನು ಸ್ಪೀಕರ್‌ ಹಾಗೂ ರಾಜ್ಯಸಭಾಧ್ಯಕ್ಷರು ತಿರಸ್ಕರಿಸಿದ್ದರಿಂದ ಕಾಂಗ್ರೆಸ್‌, ಶಿವಸೇನೆ, ಎಡಪಕ್ಷಗಳು, ಆಮ್‌ ಆದ್ಮಿ ಪಾರ್ಟಿ ಮುಂತಾದ ಪಕ್ಷಗಳ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಪರಿಣಾಮ, ಎರಡೂ ಸದನಗಳನ್ನು ಸಭಾಧ್ಯಕ್ಷರು ಮುಂದೂಡಿದರು. ತನ್ಮೂಲಕ ಇಡೀ ದಿನದ ಕಲಾಪವನ್ನು 'ಅದಾನಿ ವಿವಾದ' ಬಲಿ ತೆಗೆದುಕೊಂಡಿತು.

ನಿಲುವಳಿ ಮಂಡನೆಗೆ ತಿರಸ್ಕಾರ:

ಲೋಕಸಭೆಯಲ್ಲಿ ( Parliament) ಬಹುತೇಕ ಎಲ್ಲ ವಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಅದಾನಿ ಕಂಪನಿಯ ವ್ಯವಹಾರಗಳ ವಿರುದ್ಧ ತನಿಖೆಗೆ ಆಗ್ರಹಿಸಿದರು. ಜೊತೆಗೆ ಈ ಕುರಿತು ಚರ್ಚೆಗೆ ಆಗ್ರಹಿಸಿ ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿದರು. ಅದಕ್ಕೆ ಸ್ಪೀಕರ್‌ ಓಂ ಬಿರ್ಲಾ ಅವಕಾಶ ನಿರಾಕರಿಸಿದರು. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ನೇತೃತ್ವದಲ್ಲಿ ವಿವಿಧ ಪಕ್ಷಗಳು ಅದಾನಿ ಸಮೂಹದ ವಿರುದ್ಧ ತನಿಖೆ ಹಾಗೂ ಚರ್ಚೆಗೆ ಆಗ್ರಹಿಸಿದವು. ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನಖಡ್‌ ನಿಲುವಳಿ ಕ್ರಮಬದ್ಧವಾಗಿಲ್ಲ ಎಂದು ತಿರಸ್ಕರಿಸಿದರು. ಎರಡೂ ಸದನಗಳಲ್ಲಿ ಚರ್ಚೆ ಹಾಗೂ ತನಿಖೆಯ ಮನವಿಗೆ ಸಭಾಧ್ಯಕ್ಷರು ಸೊಪ್ಪು ಹಾಕದಿದ್ದುದರಿಂದ ವಿಪಕ್ಷಗಳ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದರು. ಆಗ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ಜನರ ಹಣ ಸರ್ಕಾರದಿಂದ ದುರ್ಬಳಕೆ:

ಸಂಸತ್ತಿನ ಹೊರಗೆ ಈ ಕುರಿತು ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅದಾನಿ ಸಮೂಹದ ಅವ್ಯವಹಾರಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಅಥವಾ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ತನಿಖೆಯ ವರದಿಯನ್ನು ಪ್ರತಿದಿನ ಪ್ರಕಟಿಸಬೇಕು. ಅವ್ಯವಹಾರದಲ್ಲಿ ಭಾರಿ ಪ್ರಮಾಣದಲ್ಲಿ ಜನರ ಹಣ ದುರ್ಬಳಕೆಯಾಗಿದೆ. ಎಲ್‌ಐಸಿ, ಎಸ್‌ಬಿಐನಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿರುವ ಜನರ ಹಣವನ್ನು ಅದಾನಿ ಒಡೆತನದ ಕಂಪನಿಗಳಲ್ಲಿ ಸರ್ಕಾರ ಬಲವಂತವಾಗಿ ಹೂಡಿಕೆ ಮಾಡಿದ್ದು, ಈಗ ಜನರು ಹಣ ಕಳೆದುಕೊಳ್ಳುವಂತಾಗಿದೆ’ ಎಂದು ಆರೋಪಿಸಿದರು.

ಜಗತ್ತಿನ ಅತ್ಯಂತ ಪ್ರಬಲ ನಾಯಕ ಮೋದಿ, ಬ್ರಿಟನ್ ಸಚಿವನ ಮಾತಿಗೆ ತಲೆದೂಗಿದ ಯುಕೆ ಸಂಸತ್ತು!

ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಅಮೆರಿಕದ ಹಿಂಡನ್‌ಬಗ್‌ರ್‍ ಎಂಬ ಸಂಸ್ಥೆಯು ಇತ್ತೀಚೆಗಷ್ಟೇ ಅದಾನಿ ಸಮೂಹದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಹೂಡಿಕೆಯನ್ನು ಹಿಂಪಡೆದಿತ್ತು. ನಂತರ ಅನೇಕ ಕಂಪನಿಗಳು ಅದಾನಿ ಸಮೂಹದ ಕಂಪನಿಗಳಿಂದ ಹೂಡಿಕೆ ಹಿಂಪಡೆದಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಭಾರಿ ಪತನ ಕಂಡಿವೆ.

Follow Us:
Download App:
  • android
  • ios