ಜಿಂದಾಲ್, ಅಂಬಾನಿ ಸೋಲಿಸಿ ಅದಾನಿ ಗೆಲುವು, 4100 ಕೋಟಿಗೆ ಈ ಕಂಪನಿ ಖರೀದಿ
ಅದಾನಿ ಗ್ರೂಪ್ 4100 ಕೋಟಿ ರೂಪಾಯಿಗಳಿಗೆ ಲ್ಯಾಂಕೋ ಅಮರಕಂಟಕ್ ಪವರ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. NCLT ಯಿಂದ ಅನುಮೋದನೆ ದೊರೆತ ನಂತರ ಈ ಒಪ್ಪಂದ ಅಂತಿಮಗೊಂಡಿದೆ.
ನವದೆಹಲಿ (ಆ.23): ಅದಾನಿ ಗ್ರೂಪ್ ಇದೀಗ ಮತ್ತೊಂದು ವಿದ್ಯುತ್ ಕಂಪನಿ ಲ್ಯಾಂಕೋ ಅಮರಕಂಟಕ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದಕ್ಕಾಗಿ NCLT ಯ ಅನುಮೋದನೆ ದೊರೆತಿದೆ. ಈ ಒಪ್ಪಂದ 4100 ಕೋಟಿ ರೂಪಾಯಿಗಳಿಗೆ ಅಂತಿಮಗೊಂಡಿದೆ. ಕಂಪನಿಯು ಈ ಮಾಹಿತಿಯನ್ನು ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ಶೇರು ಮಾರುಕಟ್ಟೆಗೆ ನೀಡಿದೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಅಂದರೆ NCLT ಯ ಹೈದರಾಬಾದ್ ಪೀಠವು ಲ್ಯಾಂಕೋ ಅಮರಕಂಟಕ್ ಪವರ್ ಲಿಮಿಟೆಡ್ ಅನ್ನು ದಿವಾಳಿತನ ಪರಿಹಾರ ಪ್ರಕ್ರಿಯೆಯಡಿ ಸ್ವಾಧೀನಪಡಿಸಿಕೊಳ್ಳುವ ಯೋಜನೆಗೆ ಅನುಮೋದನೆ ನೀಡಿದೆ ಎಂದು ಕಂಪನಿ ತಿಳಿಸಿದೆ.
ಕೇವಲ 1200 ಕುಟುಂಬಗಳಿರುವ ಭಾರತದ ಈ ಹಳ್ಳಿಯು ಏಷ್ಯಾದ ಶ್ರೀಮಂತ ಗ್ರಾಮವಾಗಿದ್ದು ಹೇಗೆ?
ಮರುಪರಿಶೀಲನೆ ನಂತರ ಒಪ್ಪಂದ ಅಂತಿಮ: ಲ್ಯಾಂಕೋ ಅಮರಕಂಟಕ್ ಮೇಲೆ 15,633 ಕೋಟಿ ರೂಪಾಯಿ ಬಾಕಿ ಇತ್ತು. ಹೀಗಾಗಿ, ಕಂಪನಿಯ ಸ್ವಾಧೀನಕ್ಕಾಗಿ ಅದಾನಿ ಗ್ರೂಪ್ ನವೆಂಬರ್ 2023 ರಲ್ಲಿ 3,650 ಕೋಟಿ ರೂಪಾಯಿಗಳ ಕೊಡುಗೆಯನ್ನು ನೀಡಿತ್ತು. ನಂತರ ಈ ವ್ಯಾಪಾರ ಕೊಡುಗೆಯಲ್ಲಿ ಬದಲಾವಣೆ ಮಾಡಿ ಅಂತಿಮ ಕೊಡುಗೆಯಾಗಿ 4100 ಕೋಟಿ ರೂಪಾಯಿಗಳನ್ನು ನೀಡಿತು. ಅದರ ನಂತರ ಈ ಒಪ್ಪಂದ ಬಹುತೇಕ ಖಚಿತವಾಗಿತ್ತು.
ಅದಾನಿ ಜೊತೆಗೆ ಈ ಕಂಪನಿ ಕೂಡ ಪೈಪೋಟಿಯಲ್ಲಿತ್ತು: ಲ್ಯಾಂಕೋ ಅಮರಕಂಟಕ್ ಪವರ್ ಲಿಮಿಟೆಡ್ ಅನ್ನು ಖರೀದಿಸಲು ನವೀನ್ ಜಿಂದಾಲ್ ಅವರ ಕಂಪನಿ ಜಿಂದಾಲ್ ಪವರ್ ಕೂಡ ಮೊದಲ ಸಾಲಿನಲ್ಲಿತ್ತು. ಜಿಂದಾಲ್ ಪವರ್ ಅದಾನಿಗಿಂತ ಹೆಚ್ಚಿನ ಬೆಲೆಗೆ ಬಿಡ್ ಮಾಡಿತ್ತು. ಆದರೆ ನವೀನ್ ಜಿಂದಾಲ್ ಅವರ ಕಂಪನಿ ಜನವರಿಯಲ್ಲಿ ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದೆ ಸರಿಯಿತು. ಇದರಿಂದಾಗಿ ಅದಾನಿ ಗ್ರೂಪ್‌ಗೆ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮಾರ್ಗ ಸುಲಭವಾಯ್ತು. ಜಿಂದಾಲ್ ಗ್ರೂಪ್ 4200 ಕೋಟಿ ರೂಪಾಯಿಗಳ ಬಿಡ್ ಮಾಡಿತ್ತು ಎಂದು ವರದಿ ತಿಳಿಸಿದೆ.
ಪವಿತ್ರಾ ಸಹವಾಸ ಬಿಟ್ಟರೆ ಮಾತ್ರ ಸಪೋರ್ಟ್ ಎಂದ ಫ್ರೆಂಡ್ಸ್, ಸಂಧಾನಕ್ಕೆ ದರ್ಶನ್ ಒಪ್ಪಿದ್ರಾ?
ಲ್ಯಾಂಕೋ ಅಮರಕಂಟಕ್ ಅತ್ಯಂತ ವಿಶೇಷ: ಲ್ಯಾಂಕೋ ಅಮರಕಂಟಕ್ ಅನ್ನು ಖರೀದಿಸುವ ಸ್ಪರ್ಧೆಯಲ್ಲಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ ಕೂಡ ಒಲವು ತೋರಿಸಿತ್ತು. ಇದೀಗ ಕೊನೆಗೂ ಈ ಕಂಪೆನಿ ಅದಾನಿ ಪಾಲಾಗಿದೆ. ಲ್ಯಾಂಕೋ ಅಮರಕಂಟಕ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಕಂಪೆನಿಯು ಛತ್ತೀಸ್‌ಗಢದಲ್ಲಿ 600 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರವನ್ನು ಹೊಂದಿದೆ. ಈಗ ಅದಾನಿ ಗ್ರೂಪ್‌ನ ಸ್ವಾಧೀನ ಪಡಿಸಿಕೊಂಡ ನಂತರ ಕಂಪನಿಯ ವಿದ್ಯುತ್ ಸಾಮರ್ಥ್ಯ 15,850 ಮೆಗಾವ್ಯಾಟ್‌ಗೆ ಏರಿಕೆಯಾಗಲಿದೆ. ಇದಲ್ಲದೆ, ಲ್ಯಾಂಕೋ ಅಮರಕಂಟಕ್ ಹರಿಯಾಣ ಮತ್ತು ಮಧ್ಯಪ್ರದೇಶದೊಂದಿಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಹೊಂದಿದೆ.