ಅದಾನಿಗೆ ಮತ್ತೆ ಸಂಕಷ್ಟ; ಲಂಚ ಆರೋಪದ ತನಿಖೆಗೆ ಮುಂದಾದ ಅಮೆರಿಕ ಸರ್ಕಾರ; ಕುಸಿದ ಷೇರು, ಬಾಂಡ್ ಮೌಲ್ಯ
ಹಿಂಡೆನ್ ಬರ್ಗ್ ವರದಿ ಆಘಾತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಅದಾನಿ ಗ್ರೂಪ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲಂಚ ಆರೋಪದಲ್ಲಿ ಸಂಸ್ಥೆ ವಿರುದ್ಧ ಅಮೆರಿಕ ಸರ್ಕಾರ ತನಿಖೆಗೆ ಮುಂದಾಗಿದೆ ಎಂದು ವರದಿಯಾಗಿದ್ದು, ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡುಬಂದಿದೆ.
ನವದೆಹಲಿ (ಮಾ.18): ಅದಾನಿ ಗ್ರೂಪ್ ಗೆ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಹಿಂಡೆನ್ ಬರ್ಗ್ ವರದಿಯಿಂದ ಸಾಕಷ್ಟು ಹೊಡೆತ ಅನುಭವಿಸಿ ಈಗಷ್ಟೇ ಚೇತರಿಸಿಕೊಳ್ಳಲು ಪ್ರಾರಂಭಿಸಿರುವ ಸಂಸ್ಥೆಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಲಂಚದ ಆರೋಪದಲ್ಲಿ ಅದಾನಿ ಸಂಸ್ಥೆಗಳ ವಿರುದ್ಧ ಅಮೆರಿಕ ಸರ್ಕಾರದ ತನಿಖಾ ಸಂಸ್ಥೆಗಳು ತನಿಖೆ ಪ್ರಾರಂಭಿಸಿವೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಇದರ ಬೆನ್ನಲ್ಲೇ ಅದಾನಿ ಸಮೂಹದ ಲಿಸ್ಟೆಡ್ ಕಂಪನಿಗಳ ಷೇರುಗಳು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿವೆ. ಇನ್ನು ಈ ಗ್ರೂಪ್ ನ ವಿವಿಧ ಡಾಲರ್ ಬಾಂಡ್ ಗಳು ಸಹ ಮೌಲ್ಯ ಕಳೆದುಕೊಳ್ಳುತ್ತಿವೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಅದಾನಿ ಸಮೂಹದ ಎಲ್ಲ 10 ಕಂಪನಿಗಳ ಷೇರುಗಳು ಸೋಮವಾರ (ಮಾ.18) ಕುಸಿತ ಕಂಡಿವೆ. ಇಂದು ಬೆಳಗ್ಗಿನ ವಹಿವಾಟಿನಲ್ಲಿ ಕಂಪನಿ ಷೇರುಗಳ ಮೌಲ್ಯ ಒಟ್ಟಾರೆ ಶೇ.8ರಷ್ಟು ತಗ್ಗಿದೆ.
ಅದಾನಿ ಟೋಟಲ್ ಗ್ಯಾಸ್ ಷೇರುಗಳು ಮಾರುಕಟ್ಟೆಯಲ್ಲಿ ಅತೀಹೆಚ್ಚು ಕುಸಿತ ಕಂಡಿವೆ. ಇದರ ಷೇರುಗಳು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಶೇ.4ರಷ್ಟು ಕುಸಿತ ದಾಖಲಿಸಿವೆ. ಅದಾನಿ ಟ್ರಾನ್ಸ್ ಮಿಷನ್ , ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್, ಎಸಿಸಿ, ಅದಾನಿ ಗ್ರೀನ್ ಷೇರುಗಳು ಶೇ.2-3ರಷ್ಟು ಕಡಿಮೆ ಮಟ್ಟದಲ್ಲಿ ಟ್ರೇಡಿಂಗ್ ಆಗುತ್ತಿವೆ. ಇನ್ನು ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕಾನಾಮಿಕ್ ಝೋನ್ ಲಿಮಿಟೆಡ್ ಬಾಂಡ್ ಶೇ. 2.4ರಷ್ಟು ಕುಸಿತ ಕಂಡಿದೆ. ಅದಾನಿ ರಿನೀವೇಬಲ್ ಎನರ್ಜಿ ಆರ್ ಜೆ ಲಿಮಿಟೆಡ್ ಷೇರುಗಳು ಶೇ2.3ರಷ್ಟು ಕುಸಿತ ಕಂಡಿವೆ.
ಅಂಬಾನಿ, ಅದಾನಿ, ಟಾಟಾ ಬಿಸಿನೆಸ್‌ಗೆ ತೀವ್ರ ಪೈಪೋಟಿ; ಭಾರತದಲ್ಲಿ ಅತಿ ದೊಡ್ಡ ಬ್ರ್ಯಾಂಡ್‌ನಿಂದ ಡೈಮಂಡ್ ಬಿಸಿನೆಸ್
ಅದಾನಿ ಗ್ರೂಪ್ ವಿರುದ್ಧ ಅಮೆರಿಕ ಸರ್ಕಾರದ ತನಿಖೆ
ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರ ವರ್ತನೆಯ ಬಗ್ಗೆ ಅಮೆರಿಕ ಸರ್ಕಾರ ಪರಿಶೀಲಿಸುತ್ತಿದೆ. ಹೀಗಾಗಿ ಭಾರತದಲ್ಲಿ ಇಂಧನ ಯೋಜನೆ ಗುತ್ತಿಗೆ ಪಡೆಯಲು ಅವರು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿದೆ ಎಂದು ಬ್ಲೂಮ್ ಬರ್ಗ್ ಮಾ.15ರಂದು ವರದಿ ಪ್ರಕಟಿಸಿತ್ತು. ನ್ಯೂಯಾರ್ಕ್ ಈಸ್ಟನ್ ಡಿಸ್ಟ್ರಿಕ್ ಅಟಾರ್ನಿ ಆಫೀಸ್ ಹಾಗೂ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಫ್ರಾಡ್ ಯುನಿಟ್ ಈ ತನಿಖೆ ನಡೆಸುತ್ತಿವೆ ಎಂದು ವರದಿ ಮಾಡಿತ್ತು.ಈ ಬಗ್ಗೆ ಪ್ರತಿಕ್ರಿಯಸಿರುವ ಅದಾನಿ ಗ್ರೂಪ್ ಸಂಸ್ಥೆ ಅಥವಾ ಅದರ ಸ್ಥಾಪಕರ ಬಗ್ಗೆ ತನಿಖೆ ನಡೆಸುತ್ತಿರುವ ಕುರಿತು ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿತ್ತು.
2023ರ ಜನವರಿ 24 ರಂದು, ಅಮೆರಿಕನ್ ಶಾರ್ಟ್-ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ಷೇರುಗಳ ಮೌಲ್ಯವನ್ನು ಮೋಸದಿಂದ ಏರಿಸಿದ ಆರೋಪಗಳನ್ನು ಮಾಡಿತ್ತು. ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು. ಹಿಂಡೆನ್ ಬರ್ಗ್ ಆಪಾದನೆಗಳ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಅದಾನಿ ಸಂಪತ್ತಿನಲ್ಲಿ ಸುಮಾರು ಶೇ.60ರಷ್ಟು ಇಳಿಕೆ ಕಂಡುಬಂದಿತ್ತು. ಒಂದು ಹಂತದಲ್ಲಿ ಅದಾನಿ ಸಂಪತ್ತು 69 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿತ್ತು.
ಏಷ್ಯಾದ ಅತಿದೊಡ್ಡ ಸ್ಲಂ ಧಾರಾವಿ ಅಭಿವೃದ್ಧಿ, ಫೆಬ್ರವರಿಯಿಂದ ಡೇಟಾ ಕಲೆಕ್ಷನ್ ಆರಂಭಿಸಲಿರುವ ಅದಾನಿ!
ಹಿಂಡೆನ್ ಬರ್ಗ್ ವರದಿ ಪ್ರಕಟಗೊಂಡು ಒಂದು ವರ್ಷಗಳು ಕಳೆದ ಮೇಲೆ ಈಗ ಮತ್ತೆ ಅದಾನಿ ಗ್ರೂಪ್ ವಿರುದ್ಧ ಆರೋಪ ಕೇಳಿಬಂದಿದೆ. ಹಿಂಡೆನ್ ಬರ್ಗ್ ವರದಿ ಪ್ರಕಟಗೊಂಡು ಒಂದು ವರ್ಷಗಳು ಕಳೆದಿದ್ದರೂ ಅದರ ಆಘಾತದಿಂದ ಅದಾನಿ ಗ್ರೂಪ್ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ. ಗೌತಮ್ ಅದಾನಿ ಏಷ್ಯಾ ಆಗೂ ಭಾರತದ ನಂ.1 ಸಿರಿವಂತನ ಪಟ್ಟ ಕೂಡ ಕಳೆದುಕೊಂಡಿದ್ದರು.