ಶಿವಾನಂದ ಗೊಂಬಿ

ಹುಬ್ಬಳ್ಳಿ[ಫೆ.14]: ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಮೊದಲ ಹೂಡಿಕೆ ಸಮಾವೇಶ ‘ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ’ ನಗರದಲ್ಲಿ ಶುಕ್ರವಾರ ನಡೆಯಲಿದೆ. ಟೈರ್‌-2 ಸಿಟಿಗಳಿಗೆ ಕೈಗಾರಿಕೆಗಳನ್ನು ತರಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಬೃಹತ್‌ ಮಹತ್ವಾಕಾಂಕ್ಷಿ ಸಮಾವೇಶದಲ್ಲಿ 1000ಕ್ಕೂ ಹೆಚ್ಚು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ 35ಕ್ಕೂ ಹೆಚ್ಚು ಉದ್ಯಮಿಗಳು ಒಡಂಬಡಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಸಂಘಟಕರು ಹೊಂದಿದ್ದಾರೆ.

ರಾಜ್ಯದಲ್ಲಿ ಈವರೆಗೆ ಒಟ್ಟು ಐದು ಹೂಡಿಕೆದಾರರ ಸಮಾವೇಶಗಳು ನಡೆದಿದ್ದು, ರಾಜ್ಯ ರಾಜಧಾನಿ ಬೆಂಗಳೂರಿಂದ ಹೊರಗೆ ನಡೆಯುತ್ತಿರುವುದು ಇದೇ ಮೊದಲು. ಈ ಬಾರಿ ಸುಮಾರು .10 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ ನಿರೀಕ್ಷೆ ಸರ್ಕಾರದ್ದು.

ಬೆಳಗಾವಿ ವಿಭಾಗದ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಕಲ್ಯಾಣ ಕರ್ನಾಟಕ ಯಾದಗಿರಿ, ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಸಮಾವೇಶ ಇದಾಗಿದ್ದು ಬರೋಬ್ಬರಿ 6000 ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ಈ ವರೆಗೆ 750ಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ.

ಉದ್ಯಮಿಗಳ ಉತ್ಸಾಹ:

ಈಗಾಗಲೇ ಬೆಳಗಾವಿ, ಧಾರವಾಡ, ಯಾದಗಿರಿ ಜಿಲ್ಲೆಗಳಿಗೆ ಉದ್ಯಮ ಸ್ಥಾಪಿಸಲು ಕೆಲವು ಕೈಗಾರಿಕೋದ್ಯಮಿಗಳು ಮುಂದೆ ಬಂದಿದ್ದಾರೆ. ಬೆಳಗಾವಿ ಜಿಲ್ಲೆಗೆ ಸಂಬಂಧಪಟ್ಟಂತೆ ಮೂರ್ನಾಲ್ಕು ಒಪ್ಪಂದಗಳು ಸಮಾವೇಶದಲ್ಲಿ ಆಗುವ ಸಾಧ್ಯತೆ ಇದೆ. ಇದರೊಂದಿಗೆ ಯಾದಗಿರಿ ಜಿಲ್ಲೆಯ ಕಡಚೂರು ಕೈಗಾರಿಕೆ ಪ್ರದೇಶದಲ್ಲಿ ಹೈದರಾಬಾದ್‌ ಮೂಲದ ಏಳೆಂಟು ಕೈಗಾರಿಕೋದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಜಿಲ್ಲೆಗೂ ಆದ್ಯತೆ:

ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗೂ ಆದ್ಯತೆ ನೀಡಲಾಗುತ್ತಿದೆ. ಈಗ ಎಲ್ಲೆಡೆ ಮೂಲ ಸೌಕರ್ಯಗಳಿವೆ. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ನೈಋುತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲೇ ಇದೆ. ಹೆದ್ದಾರಿ ವಿಷಯದಲ್ಲೂ ಸಾಕಷ್ಟುಅಭಿವೃದ್ಧಿಯಾಗಿದೆ ಈ ಭಾಗ. ಮುಂಬೈ- ಬೆಂಗಳೂರು, ಹುಬ್ಬಳ್ಳಿ- ವಿಜಯಪುರ- ಸೊಲ್ಲಾಪುರ, ಅಂಕೋಲಾ- ಗುತ್ತಿ ಹೀಗೆ ಮೂರ್ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ರಸ್ತೆ ಸಾರಿಗೆಯಲ್ಲೂ ಸಾಕಷ್ಟುಸೌಲಭ್ಯ ಇದೀಗ ಸಾಧ್ಯವಾಗಿದೆ. ನೀರು, ವಿದ್ಯುತ್‌ ಸೇರಿದಂತೆ ಯಾವೊಂದು ಸಮಸ್ಯೆಯೂ ಈಗಿಲ್ಲ. ಈ ಎಲ್ಲ ಸೌಲಭ್ಯಗಳ ಬಗ್ಗೆ ಸಮಾವೇಶದ ಪ್ರಾರಂಭದಲ್ಲಿ ಮನವರಿಕೆ ಮಾಡಿಕೊಡಲಾಗುವುದು.

ಇದರೊಂದಿಗೆ ಆಯಾ ಜಿಲ್ಲೆಗಳಲ್ಲಿ ಯಾವ ಬಗೆಯ ಸೌಲಭ್ಯಗಳಿವೆ. ಅಲ್ಲಿನ ಭೌಗೋಳಿಕತೆ ಯಾವ ರೀತಿ ಎಂಬ ಬಗ್ಗೆ ಜಿಲ್ಲಾವಾರು ಕೈಪಿಡಿಗಳನ್ನು ಮಾಡಲಾಗಿದೆ. ಬೆಳಗಿನ ಎರಡ್ಮೂರು ಗಂಟೆ ಸೌಲಭ್ಯಗಳ ಬಗ್ಗೆ ವಿವರಣೆ ನೀಡಲಾಗುತ್ತಿದೆ.

ಕೈಗಾರಿಕೆಗೆ ಎಷ್ಟಿದೆ ಜಾಗ?

ಕೈಗಾರಿಕೆ ಸ್ಥಾಪನೆಗೆ ಮುಮ್ಮಿಗಟ್ಟಿಯಲ್ಲಿ 500 ಎಕರೆಗೂ ಹೆಚ್ಚು ಜಾಗ ಇದೆ. ಬೇಲೂರು- ಕೋಟೂರು ಬಳಿ 500 ಎಕರೆ ಸೇರಿ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ 1000 ಎಕರೆಗೂ ಹೆಚ್ಚಿನ ಪ್ರದೇಶ ಕೈಗಾರಿಕೆಗಳಿಗೆ ಮೀಸಲಾಗಿದೆ. ಇದೇ ರೀತಿ ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲೂ ಜಾಗವಿದೆ. ಈ ಎಲ್ಲದರ ಬಗ್ಗೆ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಉದ್ಘಾಟನೆ

ಹುಬ್ಬಳ್ಳಿಯ ಡೆನಿಸನ್‌ ಹೋಟೆಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, 10ರಿಂದ 11.30ರ ವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇರುವ ಅವಕಾಶಗಳ ಕುರಿತು ಸಮಾಲೋಚನೆ ನಡೆಯಲಿದೆ. 12 ಗಂಟೆಗೆ ಸಮಾವೇಶವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಡಿ.ವಿ.ಸದಾನಂದ ಗೌಡ, ಸುರೇಶ ಅಂಗಡಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಚಿವ ಜಗದೀಶ್‌ ಶೆಟ್ಟರ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ನಡೆಯಲಿರುವ ಇನ್ವೆಸ್ಟ್‌ ಕರ್ನಾಟಕ- ಹುಬ್ಬಳ್ಳಿ ಸಮಾವೇಶದಲ್ಲಿ . 10 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೆಲವು ಕೈಗಾರಿಕೋದ್ಯಮಿಗಳೊಂದಿಗೆ ಈ ನಿಟ್ಟಿನಲ್ಲಿ ಮಾತುಕತೆಯೂ ನಡೆದಿದೆ.

- ಜಗದೀಶ ಶೆಟ್ಟರ್‌, ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ\

 

ಎಲ್ಲೆಲ್ಲಿನ ಹೂಡಿಕೆದಾರರು?

ದೇಶ-ವಿದೇಶಗಳಿಂದ ಪ್ರಮುಖ ನಗರಗಳ ಉದ್ಯಮಿಗಳು ಸಮಾವೇಶಕ್ಕೆ ಬರಲಿದ್ದಾರೆ. ಹೈದರಾಬಾದ್‌, ಮುಂಬೈ, ದಾವೋಸ್‌, ಜಾರ್ಖಂಡ್‌, ಗುವಾಹಟಿ ಸೇರಿದಂತೆ ಹಲವು ಕಡೆಗಳಿಂದ ಉದ್ಯಮಿಗಳು ತಮ್ಮ ಹಾಜರಿಯನ್ನು ಖಚಿತಪಡಿಸಿದ್ದಾರೆ.

ಯಾವ್ಯಾವ ಕ್ಷೇತ್ರಗಳು?

ಗ್ರಾಹಕರ ಬೇಡಿಕೆ ಆಧಾರಿತ ವಸ್ತುಗಳ ಉತ್ಪಾದನೆ (ಎಫ್‌ಎಂಸಿಜಿ), ಮೈಕ್ರೋ ವಾಲ್‌್ವ ಕಾಂಪೋನೆಂಟ್‌, ವಿಂಡ್‌ ಮಿಲ್‌, ಜನರಲ್‌ ಎಕ್ವಿಪ್‌ಮೆಂಟ್‌, ಎಲೆಕ್ಟ್ರಿಕ್‌ ಎಂಜಿನಿಯರಿಂಗ್‌, ಅಸೆಂಬಲ್‌ ವಿಭಾಗದಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಆಗಬಹುದು ಎಂಬ ನಿರೀಕ್ಷೆಯಿದೆ.

ಯಾವ್ಯಾವ ಕಂಪನಿಗಳು?

ಹಿಂದುಜಾ ಗ್ರೂಪ್‌, ಅದಾನಿ ಗ್ರೂಪ್‌, ಕಲ್ಯಾಣಿ ಗ್ರೂಫ್ಸ್‌, ಟಾಟಾ, ಜೆಎಸ್‌ಡಬ್ಲು, ಜ್ಯೋತಿ ಲ್ಯಾಬೋರೆಟರೀಸ್‌, ಇಸ್ಫೋಸಿಸ್‌ ಸೇರಿದಂತೆ ಹತ್ತಾರು ಪ್ರಮುಖ ಐಟಿ ಕಂಪನಿಗಳು ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕೆಲವೊಂದಿಷ್ಟುದೊಡ್ಡ ದೊಡ್ಡ ಕೈಗಾರಿಕೆಗಳು ಬರಲಿವೆ ಎಂದು ಹೇಳಲಾಗಿದೆ.