7th Pay Commission:ಈ ರಾಜ್ಯದ ಸರ್ಕಾರಿ ನೌಕರರ ಡಿಎ ಶೇ.3ರಷ್ಟು ಹೆಚ್ಚಳ
ಹಿಮಾಚಲ ಪ್ರದೇಶ ಸರ್ಕಾರ ತನ್ನ ಸರ್ಕಾರಿ ನೌಕರರ ಡಿಎಯಲ್ಲಿ ಶೇ.3ರಷ್ಟು ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ ತುಟ್ಟಿ ಭತ್ಯೆ ಹಾಗೂ ಡಿಯರೆನ್ಸ್ ರಿಲೀಫ್ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿ ನೀಡಿತ್ತು.
ನವದೆಹಲಿ (ಏ.17): ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ ತುಟ್ಟಿ ಭತ್ಯೆ (ಡಿಎ) ಹಾಗೂ ಡಿಯರೆನ್ಸ್ ರಿಲೀಫ್ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿ ನೀಡಿತ್ತು. ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಏರಿಕೆ ಮಾಡುವ ಮೂಲಕ ಶೇ.42ಕ್ಕೆ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಕೆಲವು ರಾಜ್ಯ ಸರ್ಕಾರಗಳು ಕೂಡ ತಮ್ಮ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿವೆ. ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರ ಕೂಡ ಶನಿವಾರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಿದೆ. 76ನೇ ಹಿಮಾಚಲ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಈ ಘೋಷಣೆ ಮಾಡಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರ ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ (ಡಿಎ) ಶೇ.3ರಷ್ಟು ಏರಿಕೆ ಮಾಡಿದೆ. ಇದರಿಂದ ಅವರ ಡಿಎ ಈ ಹಿಂದಿನ ಶೇ.31ರಿಂದ ಶೇ.34ಕ್ಕೆ ಹೆಚ್ಚಳವಾಗಿದೆ. ಇದರಿಂದ ಸುಮಾರು 2.15 ಲಕ್ಷ ಉದ್ಯೋಗಿಗಳು ಹಾಗೂ 1.90 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಇನ್ನು ಈ ಡಿಎ ಹೆಚ್ಚಳದಿಂದ ಹಿಮಾಚಲ ಪ್ರದೇಶದ (Himachala Pradesha) ಸರ್ಕಾರದ ಮೇಲೆ ಸುಮಾರು 500 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ಮಾರ್ಚ್ ನಲ್ಲಿ ಕೇಂದ್ರ ಸರ್ಕಾರಿ (Central Government employees) ನೌಕರರ ತುಟ್ಟಿ ಭತ್ಯೆಯಲ್ಲಿ (DA) ಶೇ.4ರಷ್ಟು ಏರಿಕೆ ಮಾಡಲಾಗಿದ್ದು, ಶೇ.42ಕ್ಕೆ ತಲುಪಿತ್ತು. ಈ ಪರಿಷ್ಕೃತ ಏರಿಕೆ 2023ರ ಜನವರಿ 1ರಿಂದಲೇ ಅನ್ವಯವಾಗಲಿದೆ. ಈ ಏರಿಕೆಯಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ (Pensioners) ಪ್ರಯೋಜನವಾಗಲಿದೆ. ಇದಕ್ಕೂ ಮುನ್ನ 2022ರ ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ಡಿಎ ಪರಿಷ್ಕರಣೆ ಮಾಡಿತ್ತು. ಇದು 2022ರ ಜುಲೈ 1ರಿಂದ ಜಾರಿಗೆ ಬಂದಿತ್ತು. 2022ರ ಜೂನ್ ಗೆ ಅಂತ್ಯವಾಗುವ 12 ತಿಂಗಳ ಅಖಿಲ ಭಾರತ ಗ್ರಾಹಕರ ಬೆಲೆ ಸೂಚ್ಯಂಕದಲ್ಲಿನ ಹೆಚ್ಚಳ ಆಧರಿಸಿ ಡಿಎಯಲ್ಲಿ (DA)ಶೇ.4ರಷ್ಟು ಹೆಚ್ಚಳವಾಗಿ ಶೇ.38ಕ್ಕೆ ಏರಿಕೆಯಾಗಿತ್ತು.
7th Pay Commission:ಈ ವರ್ಷ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.46ಕ್ಕೆ ಹೆಚ್ಚಳ!
ಈ ವರ್ಷ ಎರಡನೇ ಬಾರಿ ಕೂಡ ತುಟ್ಟಿ ಭತ್ಯೆಯಲ್ಲಿ (DA) ಶೇ.4ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.46ಕ್ಕೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ತುಟ್ಟಿ ಭತ್ಯೆಯನ್ನು ಎರಡನೇ ಬಾರಿ ಜುಲೈನಲ್ಲಿ ಏರಿಕೆ ಮಾಡಲಾಗುವುದು.
ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು (ಡಿಆರ್) ವರ್ಷದಲ್ಲಿ ಎರಡು ಬಾರಿ ಅಂದರೆ ಜನವರಿ 1 ಮತ್ತು ಜುಲೈ 1 ರಂದು ಪರಿಷ್ಕರಿಸುತ್ತದೆ. ಆದರೆ, ಈ ನಿರ್ಧಾರವನ್ನು ಮಾತ್ರ ಸರ್ಕಾರ ಮಾರ್ಚ್ ಮತ್ತು ಸೆಪ್ಟೆಂಬರ್ ನಲ್ಲಿ ಪ್ರಕಟಿಸುತ್ತದೆ.
Aadhaar PVC Card: ಕೇವಲ 50ರೂ.ಗೆ ಆನ್ ಲೈನ್ ನಲ್ಲೇ ಆಧಾರ್ ಪಿವಿಸಿ ಕಾರ್ಡ್ ಪಡೆಯಬಹುದು, ಹೇಗೆ?
ಶೇ.17ರಿಂದ ಶೇ.42ಕ್ಕೆ ಡಿಎ ಏರಿಕೆ
ಕೇಂದ್ರ ಸರ್ಕಾರ ದೀರ್ಘ ಕಾಲದ ಬಳಿಕ 2021ರ ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ (DA) ಅನ್ನು ಶೇ.17ರಿಂದ ಶೇ.28ಕ್ಕೆ ಏರಿಕೆ ಮಾಡಿತ್ತು.ಇನ್ನು 2021ರ ಅಕ್ಟೋಬರ್ ನಲ್ಲಿ ಮತ್ತೆ ಶೇ.3ರಷ್ಟು ಏರಿಕೆ ಮಾಡಿ ಶೇ.31ಕ್ಕೆ ಹೆಚ್ಚಿಸಿತ್ತು. 2022ರ ಮಾರ್ಚ್ ನಲ್ಲಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಡಿಎಯಲ್ಲಿ (DA) ಶೇ.3ರಷ್ಟು ಹೆಚ್ಚಳ ಮಾಡಿತ್ತು. ಇದರಿಂದ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿತ್ತು. ಇದಾದ ಬಳಿಕ ಎರಡು ಬಾರಿ ಡಿಎಯಲ್ಲಿ ತಲಾ ಶೇ.4ರಷ್ಟು ಹೆಚ್ಚಳ ಕಂಡುಬಂದಿದೆ.