ನವದೆಹಲಿ(mA.೧೭): ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್‌ಒ), 2020ರ ಏಪ್ರಿಲ್‌-ಡಿಸೆಂಬರ್‌ ನಡುವೆ 71.01 ಲಕ್ಷ ಪಿಎಫ್‌ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ಕೋವಿಡ್‌-19 ಲಾಕ್‌ಡೌನ್‌ ಹೇರಿಕೆಯಿಂದ ಆದ ಉದ್ಯೋಗ ನಷ್ಟದ ಸಂಕೇತ ಎಂದು ವಿಶ್ಲೇಷಿಸಲಾಗಿದೆ.

2019ರ ಇದೇ ಅವಧಿಯಲ್ಲಿ 66.66 ಲಕ್ಷ ಖಾತೆಗಳು ಬಂದ್‌ ಆಗಿದ್ದವು. ಆದರೆ ಅದಕ್ಕಿಂತ ಈ ಸಲ ಹೆಚ್ಚು ಖಾತೆಗಳು ಕ್ಲೋಸ್‌ ಆಗಿವೆ. ಲೋಕಸಭೆಗೆ ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರೇ ಈ ಅಂಕಿ-ಅಂಶಗಳ ಮಾಹಿತಿ ನೀಡಿದ್ದಾರೆ.

ಕೊರೋನಾ ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಮಾರ್ಚ್ 25ರಂದು ಲಾಕ್‌ಡೌನ್‌ ಘೋಷಿಸಿದ್ದರು. ಬಳಿಕ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಈ ಅವಧಿಯಲ್ಲಿ ಉದ್ಯೋಗ ನಷ್ಟ, ವೇತನ ಕಡಿತ, ಉದ್ಯೋಗ ಬದಲಾವಣೆ- ಇತ್ಯಾದಿಗಳು ನಡೆದಿದ್ದು, ಇದೇ ಪಿಎಫ್‌ ಖಾತೆ ಸ್ಥಗಿತ ಹೆಚ್ಚಲು ಕಾರಣ ಎನ್ನಲಾಗಿದೆ.