ನವದೆಹಲಿ(ಫೆ.02): ಪ್ರಸಕ್ತ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 70000 ಕೋಟಿ ರು. ಅನುದಾನ ಘೋಷಿಸಲಾಗಿದೆ. ಇದು ಕಳೆದ ಬಜೆಟ್‌ನಲ್ಲಿ ನೀಡಿದ್ದ ಅನುದಾನಕ್ಕಿಂತ ಕೇವಲ ಶೇ.3ರಷ್ಟು ಮಾತ್ರವೇ ಅಧಿಕ ಎಂಬುದು ಗಮನಾರ್ಹ. ಇನ್ನು 2020-21ನೇ ಸಾಲಿನಲ್ಲಿ ರೈಲ್ವೆಯ ಬಂಡವಾಳ ವೆಚ್ಚ 1.61 ಲಕ್ಷ ಕೋಟಿ ರು. ಆಗಿರಲಿದೆ. ಇದು ಕಳೆದ ಸಾಲಿಗಿಂತ ಶೇ.17.2 ರಷ್ಟು ಹೆಚ್ಚು. 

ರೈಲ್ವೆಯ ಒಟ್ಟು ಆದಾಯವು, ಪ್ರಯಾಣಿಕರು, ಸರಕು, ಇತರೆ ವಿಭಾಗಗಳ ಆದಾಯ ಮತ್ತು ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ಸಂಗ್ರಹವನ್ನು ಒಳಗೊಂಡಿದೆ. ಈ ಆದಾಯ 2019-20ನೇ ಸಾಲಿನ ಪರಿಷ್ಕೃತ ಅಂದಾಜು ಮತ್ತು 2020-21ನೇ ಸಾಲಿನ ಬಜೆಟ್‌ ಅಂದಾಜಿಗಿಂತ ಶೇ.9.5ರಷ್ಟು ಹೆಚ್ಚಿರುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2020-21ನೇ ಸಾಲಿನ ಬಜೆಟ್‌ನಲ್ಲಿ 12000 ಕೋಟಿ ರು.ಗಳನ್ನು ಹೊಸ ಮಾರ್ಗ ನಿರ್ಮಾಣ, 2250 ಕೋಟಿ ರು.ಗಳನ್ನು ಗೇಜ್‌ ಪರಿವರ್ತನೆ, 700 ಕೋಟಿ ರು.ಗಳನ್ನು ಡಬ್ಲಿಂಗ್‌, 5786.97 ಕೋಟಿ ರು.ಗಳನ್ನು ಹೊಸ ಬೋಗಿಗಳಿಗೆ, 1650 ಕೋಟಿ ರು.ಗಳನ್ನು ಸಿಗ್ನಲ್‌ ಮತ್ತು ಟೆಲಿಕಾಂಗೆ ಮೀಸಲಿಡಲಾಗಿದೆ. ಇನ್ನು ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ 2725.63 ಕೋಟಿ ರು. ಮೀಸಲಿಡಲಾಗಿದೆ.

ಆದಾಯದ ಮೂಲ:

ಪ್ರಸಕ್ತ ವರ್ಷ ಪ್ರಯಾಣಿಕರ ಮೂಲಕ 61000 ಕೋಟಿ ರು.,1.47 ಲಕ್ಷ ಕೋಟಿ ರು.ಗಳನ್ನು ಸರಕು ಸಾಗಣೆ ಮೂಲಕ ಸಂಗ್ರಹಿಸುವ ಗುರಿಯನ್ನು ರೈಲ್ವೆ ಹಾಕಿಕೊಂಡಿದೆ. ಈ ಮೂಲಕ ಒಟ್ಟು 2,25,613 ಕೋಟಿ ರು. ಆದಾಯದ ಗುರಿ ಹಾಕಿಕೊಂಡಿದೆ. ಇದು 2019-20ನೇ ಸಾಲಿನ ಪರಿಷ್ಕೃತ ಅಂದಾಜಿಗಿಂತ ಶೇ.9.6ರಷ್ಟುಹೆಚ್ಚು.

ಸೌರ ವಿದ್ಯುತ್‌ ಉತ್ಪಾದನೆ:

ಹಳಿಗಳ ಪಕ್ಕ ರೈಲ್ವೆ ಹೊಂದಿರುವ ಜಮೀನಿನುದ್ದಕ್ಕೂ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಯೋಜನೆಯನ್ನು ಸರ್ಕಾರ ರೂಪಿಸಿದೆ.

150 ಖಾಸಗಿ ರೈಲು:

ಖಾಸಗಿ ಸಹಭಾಗಿತ್ವದಲ್ಲಿ ದೇಶಾದ್ಯಂತ ದೂರ ಪ್ರಯಾಣದ 150 ರೈಲುಗಳನ್ನು ಓಡಿಸಲು ನಿರ್ಧರಿಸಿರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಲ್ಲದೆ ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ರೈಲ್ವೆ ನಿಲ್ದಾಣದ ಅಭಿವೃದ್ಧಿ ಯೋಜನೆಯನ್ನೂ ಸರ್ಕಾರ ರೂಪಿಸಿದೆ.

ಇನ್ನಷ್ಟು ತೇಜಸ್‌:

ಐಆರ್‌ಸಿಟಿಸಿ ನೇತೃತ್ವದಲ್ಲಿ ಪ್ರಸಕ್ತ ದೇಶದಲ್ಲಿ ಎರಡು ಖಾಸಗಿ ತೇಜಸ್‌ ರೈಲುಗಳು ಸಂಚಾರ ನಡೆಸುತ್ತಿದ್ದ, ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ.

ಕೃಷಿ ರೈಲು:

ಬೇಗ ಹಾಳಾಗುವಂಥ ಉತ್ಪನ್ನಗಳ ತ್ವರಿತ ಸಾಗಣೆಗೆ ನೆರವು ನೀಡಲು ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ರೈಲು ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ವೇತನವೇ ಹೊರೆ:

ಭಾರೀ ಆದಾಯದ ಹೊರತಾಗಿಯೂ, ರೈಲ್ವೆ ತನ್ನ ಸಿಬ್ಬಂದಿಗೆ ವೇತನ ನೀಡಲೆಂದೇ ಪ್ರಸಕ್ತ ವರ್ಷ 92993 ಕೋಟಿ ರು. ವಿನಿಯೋಗಿಸಬೇಕಾಗಿ ಬರಲಿದೆ. ಇದು ಕಳೆದ ಸಾಲಿಗಿಂತ 6000 ಕೋಟಿ ರು. ಹೆಚ್ಚು. ಇದು ರೈಲ್ವೆ ಪಾಲಿಗೆ ದೊಡ್ಡ ಹೊರೆಯಾಗಿದೆ.

*ರೈಲ್ವೆಗೆ ಕಳೆದ ಸಾಲಿಗಿಂತ ಕೇವಲ ಶೇ.3ರಷ್ಟು ಮಾತ್ರ ಹೆಚ್ಚುವರಿ ಅನುದಾನ|
*2020-21ನೇ ಸಾಲಿನಲ್ಲಿ ರೈಲ್ವೆಯ ಬಂಡವಾಳ ವೆಚ್ಚ 1.61 ಲಕ್ಷ ಕೋಟಿ ರು.
* ರೈಲ್ವೆ ಸಿಬ್ಬಂದಿಗೆ ವೇತನ ನೀಡಲು ಬೇಕು ವಾರ್ಷಿಕ 92993 ಕೋಟಿ ರು
* 12000 ಕೋಟಿ ರು.: ಹೊಸ ಮಾರ್ಗ ನಿರ್ಮಾಣ
* 2250 ಕೋಟಿ ರು.: ಗೇಜ್‌ ಪರಿವರ್ತನೆ
* 700 ಕೋಟಿ ರು.: ಡಬ್ಲಿಂಗ್‌
* 5786 ಕೋಟಿ ರು.: ಹೊಸ ಬೋಗಿ, ಎಂಜಿನ್‌
* 1650 ಕೋಟಿ ರು.: ಸಿಗ್ನಲ್‌ ಮತ್ತು ಟೆಲಿಕಾಂ
* 2725 ಕೋಟಿ ರು.: ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ