ಕೋವಿಡ್‌ನಿಂದ ಎರಡು ವರ್ಷ ಕಳೆಗುಂದಿದ್ದ ಪಟಾಕಿ ವ್ಯಾಪಾರ ಈ ಬಾರಿ ಪುಟಿದ್ದೆದಿದೆ. 

ಬೆಂಗಳೂರು(ಅ.28):  ನಗರದಲ್ಲಿ ಈ ಬಾರಿ ದೀಪಾವಳಿಯ ಪಟಾಕಿ ಒಟ್ಟಾರೆ ವಹಿವಾಟು ಅಂದಾಜು 55 ಕೋಟಿಗಿಂತ ಹೆಚ್ಚಾಗಿದ್ದು, ಕೋವಿಡ್‌ ಪೂರ್ವ ನಷ್ಟದಿಂದ ವರ್ತಕರು ಚೇತರಿಸಿಕೊಂಡಿದ್ದಾರೆ. ಕೋವಿಡ್‌ನಿಂದ ಎರಡು ವರ್ಷ ಕಳೆಗುಂದಿದ್ದ ಪಟಾಕಿ ವ್ಯಾಪಾರ ಈ ಬಾರಿ ಪುಟಿದ್ದೆದಿದೆ. ಹಬ್ಬದ ಮೊದಲ ದಿನದವರೆಗೆ ವ್ಯಾಪಾರ ಕುಸಿಯುವ ಆತಂಕದಿಂದ ಹೆಚ್ಚುವರಿ ರಿಯಾಯಿತಿ ನೀಡಿದ್ದು ಕೂಡ ವಹಿವಾಟು ಹೆಚ್ಚಲು ಕಾರಣವಾಗಿದೆ.

ನಗರದಲ್ಲಿ ಈ ಬಾರಿ ಎಂಟು ವಲಯಗಳಲ್ಲಿ 200 ಸ್ಥಳಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಬಿಬಿಎಂಪಿ ಅನುಮತಿ ನೀಡಿತ್ತು. ಸುಮಾರು 565 ಮಳಿಗೆಗಳಲ್ಲಿ ಚಿಲ್ಲರೆ ಪಟಾಕಿ ವ್ಯಾಪಾರ ನಡೆದಿದೆ. ಸುಮಾರು 70 ಕೋಟಿ ವ್ಯಾಪಾರ ನಡೆವ ನಿರೀಕ್ಷೆಯಿತ್ತು. ಆದರೆ, 45-55 ಕೋಟಿ ವ್ಯಾಪಾರವಾಗಿದೆ ಎಂದು ಪಟಾಕಿ ವರ್ತಕರು ತಿಳಿಸುತ್ತಾರೆ.

Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ

‘ಸುವರ್ಣ ಕರ್ನಾಟಕ ಕ್ರ್ಯಾಕರ್ಸ್‌ ಅಸೋಸಿಯೇಶನ್‌’ ಖಜಾಂಚಿ ಮಂಜುನಾಥ ರೆಡ್ಡಿ ಅವರು, ಗ್ರಹಣದ ಕಾರಣದಿಂದ ಮೊದಲ ದಿನ ವ್ಯಾಪಾರ ಅಷ್ಟೇನೂ ಆಗಿದ್ದರೂ ಬಳಿಕ ಚೆನ್ನಾಗಿ ವಹಿವಾಟು ನಡೆದ ಕಾರಣ ವ್ಯಾಪಾರಿಗಳು ನಷ್ಟಕ್ಕೆ ಸಿಲುಕಿಲ್ಲ. ಹಬ್ಬದ ಮೊದಲ ದಿನದವರೆಗೆ ವ್ಯಾಪಾರ ಕುಸಿಯುವ ಭೀತಿಯಿತ್ತು. ಆದರೆ, ನಂತರದ ಎರಡು ದಿನಗಳಲ್ಲಿ ಶೇ.70ಕ್ಕಿಂತ ಹೆಚ್ಚು ವ್ಯಾಪಾರ ಆಗಿದೆ. ವ್ಯಾಪಾರಸ್ಥರು ಹೂಡಿದ ಬಂಡವಾಳ ನಷ್ಟವಾದ ಪರಿಸ್ಥಿತಿ ಇಲ್ಲ ಎಂದರು.
‘ಚಕ್ರವರ್ತಿ ಕ್ರ್ಯಾಕರ್ಸ್‌’ ಜೆ.ಮದನ್‌ ಮಾತನಾಡಿ, ಶಿವಕಾಶಿಯಿಂದ ಪಟಾಕಿ ಪೂರೈಕೆಯೆ ಕಡಿಮೆ ಇತ್ತು. ಫ್ಲವರ್‌ ಪಾಟ್‌, ಸುರ್‌ಸುರ್‌ ಬತ್ತಿ ರೀತಿಯ ಪಟಾಕಿಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ಮಾಲೆ ಪಟಾಕಿಗೆ ನಿರ್ಬಂಧವಿತ್ತು. ಆದರೆ, ಗ್ರಾಹಕರಿಂದ ಇವುಗಳಿಗೇ ಹೆಚ್ಚಿನ ಬೇಡಿಕೆ ಇತ್ತು. ಹಾಗೆ ನೋಡಿದರೆ ವ್ಯಾಪಾರ ಉತ್ತಮವಾಗಿಯೆ ಆಗಿದೆ ಎಂದು ತಿಳಿಸಿದರು.

‘ಓಂ ಸಾಯಿ ಕ್ರ್ಯಾಕರ್ಸ್‌’ ಮಾಲಿಕರಾದ ಹರಿ ಎಚ್‌ಕೆಡಿ ಮಾತನಾಡಿ, ಕೋವಿಡ್‌ಗೆ ಸಂದರ್ಭಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಚೇತರಿಸಿಕೊಂಡಿದೆ. ವ್ಯಾಪಾರಸ್ಥರಿಗೆ ಸರ್ಕಾರ ಹೆಚ್ಚಿನ ಭದ್ರತೆ, ಪ್ರೋತ್ಸಾಹ ನೀಡಬೇಕು ಎಂದರು.
ಹಬ್ಬದ ಮೊದಲ ದಿನ ವ್ಯಾಪಾರ ಡಲ್‌ ಇತ್ತು. ಆದರೆ ಬಳಿಕ ಉತ್ತಮ ವ್ಯಾಪಾರವಾದ ಕಾರಣ ಕೋವಿಡ್‌ ನಷ್ಟದಿಂದ ವ್ಯಾಪಾರಸ್ಥರು ಸಂಪೂರ್ಣ ಚೇತರಿಸಿಕೊಳ್ಳುವಂತಾಗಿದೆ. ಸರ್ಕಾರ ವರ್ತಕರಿಗೆ ರಿಯಾಯಿತಿ, ಪ್ರೋತ್ಸಾಹ ನೀಡಬೇಕು ಅಂತ ಸುವರ್ಣ ಕರ್ನಾಟಕ ಕ್ರ್ಯಾಕರ್ಸ್‌ ಅಸೋಸಿಯೇಶನ್‌ ಖಜಾಂಚಿ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.