ಈ 5 ಸಿದ್ಧತೆ ಮಾಡಿಕೊಂಡ್ರೆ ಸಾಕು, ನಿಮ್ಮ ITR ನೀವೇ ಸುಲಭವಾಗಿ ಸಲ್ಲಿಕೆ ಮಾಡಬಹುದು!
2023-24ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ವರ್ಷ ನೀವೇ ಸ್ವತಃ ಐಟಿಆರ್ ಫೈಲ್ ಮಾಡೋದಾದ್ರೆ ಈ 5 ಸಿದ್ಧತೆಗಳನ್ನು ಮೊದಲೇ ಮಾಡಿಟ್ಟುಕೊಳ್ಳಿ. ಇದ್ರಿಂದ ಐಟಿಆರ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲವಿರೋದಿಲ್ಲ, ಸುಲಭವಾಗಿ ಮಾಡಬಹುದು.
Business Desk: ತೆರಿಗೆ ಪಾವತಿಸೋರು ಆದಾಯ ತೆರಿಗೆ ಇಲಾಖೆಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಸಲ್ಲಿಕೆ ಮಾಡೋದು ಕಡ್ಡಾಯ. ಐಟಿಆರ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡೋದು ಅಗತ್ಯ. ಇಲ್ಲವಾದ್ರೆ ದಂಡ ಬೀಳುತ್ತದೆ. ಕೆಲವರು ಐಟಿಆರ್ ಸಲ್ಲಿಕೆಯನ್ನು ತೆರಿಗೆ ತಜ್ಞರ ಸಹಾಯ ಪಡೆದು ಮಾಡುತ್ತಾರೆ. ಆದರೆ, ಐಟಿಆರ್ ಅನ್ನು ನೀವೇ ಸಲ್ಲಿಕೆ ಮಾಡೋದು ಅದೂ ಮೊದಲ ಬಾರಿಗೆ ಕ್ಲಿಷ್ಟಕರವಾಗಿ ಕಾಣಿಸಬಹುದು. ಆದರೆ, ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯಾವುದೇ ತೆರಿಗೆ ತಜ್ಞರ ಅಗತ್ಯವಿಲ್ಲದೆ ಈಗ ಐಟಿಆರ್ ಸಲ್ಲಿಕೆ ಮಾಡಬಹುದು. ಐಟಿಆರ್ ಸಲ್ಲಿಕೆಯ ಸಂಪೂರ್ಣ ಪ್ರಕ್ರಿಯೆ ಈಗ ಸರಳವಾಗಿದೆ, ಅದರಲ್ಲೂ ಇತರ ಯಾವುದೇ ಆದಾಯದ ಮೂಲ ಹೊಂದಿರದ ವೇತನ ಪಡೆಯುವ ಉದ್ಯೋಗಿಗಳಿಗೆ ಇದು ತುಂಬಾ ಸುಲಭ. 2023-24ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ವರ್ಷ ನೀವೇ ಸ್ವತಃ ಐಟಿಆರ್ ಫೈಲ್ ಮಾಡೋದಾದ್ರೆ ಈ 5 ಸಂಗತಿಗಳನ್ನು ಫಾಲೋ ಮಾಡೋದು ಅಗತ್ಯ.
ಎಲ್ಲ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಮೊದಲು ಎಲ್ಲ ದಾಖಲೆಗಳು ನಿಮ್ಮ ಬಳಿ ಇವೆಯಾ ಎಂಬುದನ್ನು ಪರಿಶೀಲಿಸಿ.ಮುಖ್ಯವಾಗಿ ಫಾರ್ಮ್ 16, 26AS,ಎಐಎಸ್/ಐಟಿಎಸ್ , ಬ್ಯಾಂಕ್ ಸ್ಟೇಟ್ಮೆಂಟ್, ಹೂಡಿಕೆ ದಾಖಲೆಗಳು, ಬಾಡಿಗೆ ಸ್ವೀಕೃತಿಗಳು ಇತ್ಯಾದಿ ದಾಖಲೆಗಳನ್ನು ನಿಮ್ಮ ಬಳಿ ಮೊದಲೇ ಸಿದ್ಧಪಡಿಸಿಟ್ಟುಕೊಂಡಿರಿ. ಆ ಬಳಿಕವೇ ಐಟಿಆರ್ ಫೈಲ್ ಮಾಡಿ.
ಮೊಬೈಲ್ ನಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ನಿಮ್ಮ ಆದಾಯ ಮೂಲಗಳ ಬಗ್ಗೆ ತಿಳಿದುಕೊಳ್ಳಿ
ನೀವು ಐಟಿಆರ್ ಫೈಲ್ ಮಾಡುವ ಮೊದಲು ನಿಮ್ಮ ಆದಾಯ ಮೂಲಗಳ ಬಗ್ಗೆ ತಿಳಿದುಕೊಳ್ಳಿ.ಅಂದರೆ ನಿಮಗೆ ಯಾವೆಲ್ಲ ಮೂಲಗಳಿಂದ ಆದಾಯ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ವೇತನ, ನಿಮ್ಮ ಆದಾಯದ ಮೂಲಗಳು, ಮನೆ ಆಸ್ತಿಯ ಆದಾಯ, ಉದ್ಯಮದ ಆದಾಯ, ಬಂಡವಾಳ ಗಳಿಕೆ ಆದಾಯ ಹಾಗೂ ಇತರ ಆದಾಯ ಮೂಲಗಳ ಬಗ್ಗೆ ತಿಳಿದುಕೊಂಡಿರೋದು ಅಗತ್ಯ. ಇದು ನಿಮಗೆ ಸಮರ್ಪಕ ಐಟಿಆರ್ ಅರ್ಜಿ ಭರ್ತಿ ಮಾಡಲು ಹಾಗೂ ಎಲ್ಲ ಕಡಿತಗಳನ್ನು ಕ್ಲೇಮ್ ಮಾಡಲು ನೆರವು ನೀಡುತ್ತದೆ.
ಸಮರ್ಪಕ ಐಟಿಆರ್ ಫಾರ್ಮ್ ಆಯ್ಕೆ ಮಾಡಿ
ವಿವಿಧ ವಿಧದ ಆದಾಯ ಹಾಗೂ ತೆರಿಗೆದಾರರಿಗೆ ವಿವಿಧ ನಮೂನೆಯ ಐಟಿಆರ್ ಅರ್ಜಿಗಳಿವೆ. ಹೀಗಾಗಿ ನಿಮ್ಮ ಆದಾಯ ಮೂಲಗಳು ಹಾಗೂ ತೆರಿಗೆದಾರರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬ ಆಧಾರದಲ್ಲಿ ಸಮರ್ಪಕವಾದ ಐಟಿಆರ್ ಅರ್ಜಿ ಆಯ್ಕೆ ಮಾಡಿ.ನೀವು ತಪ್ಪಾದ ಐಟಿಆರ್ ಅರ್ಜಿ ಭರ್ತಿ ಮಾಡಿದರೆ ನಿಮ್ಮ ಐಟಿಆರ್ ಫೈಲಿಂಗ್ ತಪ್ಪಾಗಲಿದೆ. ವೇತನ ಪಡೆಯುವ ವರ್ಗಕ್ಕೆ ಐಟಿಆರ್ ಫಾರ್ಮ್ 1 ನಿಗದಿಪಡಿಸಲಾಗಿದೆ. ಹೂಡಿಕೆಯಿಂದ ಲಾಭ ಪಡೆಯುವ ವೇತನ ಪಡೆಯುವ ವರ್ಗ ಐಟಿಆರ್ ಫಾರ್ಮ್ 2 ಸಲ್ಲಿಕೆ ಮಾಡಬೇಕು. ಯಾರು ಸ್ವ ಉದ್ಯೋಗ ಮಾಡುವವರು ಹಾಗೂ ಬ್ಯುಸಿನೆಸ್ ಉದ್ಯಮದಿಂದ ಗಳಿಸಿದ ಲಾಭದ ಆದಾಯಕ್ಕೆ ಐಟಿಆರ್ ಫಾರ್ಮ್ 3 ಫೈಲ್ ಮಾಡಬೇಕು.
ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸೋರಿಗೆ TDS ಕುರಿತ ಈ ಮಾಹಿತಿ ತಿಳಿದಿರೋದು ಅಗತ್ಯ
ಆದಾಯ ಲೆಕ್ಕ ಹಾಕಿ
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಮುನ್ನ ತೆರಿಗೆಗೊಳಪಡುವ ಆದಾಯ ಲೆಕ್ಕ ಹಾಕಿ. ನಮ್ಮ ಒಟ್ಟು ಆದಾಯ ಎಷ್ಟು, ಅದಕ್ಕೆ ಪಾವತಿಸುವ ತೆರಿಗೆ ಎಷ್ಟು ಎಂಬ ಬಗ್ಗೆ ಲೆಕ್ಕ ಹಾಕಬೇಕು. ಒಂದು ವೇಳೆ ಫೈಲಿಂಗ್ ಸಂದರ್ಭದಲ್ಲಿ ಆದಾಯವನ್ನು ನಮೂದಿಸದಿದ್ದರೆ ಆಗ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ಹೀಗಾಗಿ ಮೊದಲೇ ಎಲ್ಲ ಆದಾಯವನ್ನು ಲೆಕ್ಕ ಹಾಕೋದು ಅಗತ್ಯ.
ವಿನಾಯಿತಿ ಕ್ಲೈಮ್ ಮಾಡೋದು ಅಗತ್ಯ
ಇನ್ನು ಐಟಿಆರ್ ಫೈಲ್ ಮಾಡುವಾಗ ವಿನಾಯಿತಿ ಕ್ಲೈಮ್ ಮಾಡೋದು ಕೂಡ ಅಗತ್ಯ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಹಾಗೂ 80D ಅಡಿಯಲ್ಲಿ ಆದಾಯ ತೆರಿಗೆ ಕಡಿತ ಅಥವಾ ವಿನಾಯಿತಿ ಕ್ಲೈಮ್ ಮಾಡಿಕೊಳ್ಳಬಹುದು.