ಚಿನ್ನದ ಗಣಿಯಲ್ಲಿ 5 ಮಿಲಿಯನ್ ಟನ್ ಮಣ್ಣಿನಲ್ಲಿ 25 ಟನ್ ಚಿನ್ನವಿರುವ ಬಗ್ಗೆ ಅಂದಾಜಿಸಲಾಗಿದೆ. ಗಣಿಗಾರಿಕೆ ಪುನರಾರಂಭದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಪರಿಸರ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ.
ಬೆಂಗಳೂರು: 24 ವರ್ಷಗಳ ಹಿಂದೆ 1ನೇ ಮಾರ್ಚ್ 2001ರಂದು ನಷ್ಟದ ನೆಪ ಹೇಳಿ ಕರ್ನಾಟಕದ ಕೋಲಾರದಲ್ಲಿರುವ ಚಿನ್ನದ ಗಣಿಯನ್ನು ಮುಚ್ಚಿತು. ಕೆಜಿಎಫ್ ಚಿನ್ನದ ಗಣಿ ಮುಚ್ಚಲ್ಪಟ್ಟದ್ದರಿಂದ ಶ್ರಮಿಕ ವರ್ಗದ ವೇತನ ಸುಮಾರು 58 ಕೋಟಿಯಷ್ಟು ಬಾಕಿ ಉಳಿದುಕೊಂಡಿತ್ತು. ಬಾಕಿ ವೇತನಕ್ಕಾಗಿ ಆಗ್ರಹಿಸಿ ಕಾರ್ಮಿಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ 7ನೇ ಜುಲೈ 2006ರಂದು ಕೆಜಿಎಫ್ ಚಿನ್ನದ ಗಣಿ ಪುನಾರಂಭಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಜಾಗತಿಕಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರೋದನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಚಿನ್ನದ ಗಣಿಯ ಪುನರಾರಂಭಕ್ಕೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದ್ರೆ ಕೇಂದ್ರ ಸರ್ಕಾರ, ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು.
2013ರಲ್ಲಿ ಜಾಗತಿಕ ಟೆಂಡರ್ ಕರೆದು ಚಿನ್ನದ ಗಣಿಯನ್ನು ಆರಂಭಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, ಜಾಗತಿಕ ಟೆಂಡರ್ ಮೂಲಕ ಚಿನ್ನದ ಗಣಿ ಹರಾಜು ಪ್ರಕ್ರಿಯೆ ಅಷ್ಟು ಸುಲಭದ ಮಾತಲ್ಲ ಎಂದು ಹೇಳಿತ್ತು. ಆದ್ರೆ ಇತ್ತೀಚಿನ ವರದಿಗಳ ಪ್ರಕಾರ, ಚಿನ್ನದ ಗಣಿಗಾರಿಕೆ ಸಮಯದಲ್ಲಿ ಬೇರ್ಪಟ್ಟ ಮಣ್ಣಿನಲ್ಲಿ ಚಿನ್ನದಂಶವಿದೆ. ಈ ಮಣ್ಣಿನಿಂದ ಚಿನ್ನ ತೆಗೆಯಬಹುದು ಎಂದು ಸಂಶೋಧನೆಗಳು ಹೇಳುತ್ತಿವೆ.
ಕೆಜಿಎಫ್ ನಗರದ ಸುತ್ತಮುತ್ತ 13 ಸೈನೆಡ್ ಬೆಟ್ಟಗಳಿವೆ. ಈ ಬೆಟ್ಟಗಳಲ್ಲಿ ಸುಮಾರು 5 ಮಿಲಿಯನ್ ಟನ್ ಮಣ್ಣು ಶೇಖರಗೊಂಡಿದೆ. ಈ ಮಣ್ಣಿನಲ್ಲಿ ಸುಮಾರು 25 ಟನ್ ಚಿನ್ನವಿದೆ ಎಂದು ಅಂದಾಜಿಸಲಾಗಿದೆ. ಕೆಜಿಎಫ್‌ನ 12 ಸೈನೆಡ್ ಬೆಟ್ಟಗಳಲ್ಲಿನ ಚಿನ್ನದ ಶೋಧಕ್ಕೆ ಅನುಮತಿ ನೀಡಲಾಗಿತ್ತು. ಸಂಶೋಧನೆಯ ಪ್ರಕಾರ, ಒಂದು ಟನ್ ಮಣ್ಣಿನಲ್ಲಿ 1 ಗ್ರಾಂ ಚಿನ್ನ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಅಂದ್ರೆ ಇಡೀ ಈ ಮಣ್ಣು ಶೋಧನೆ ಮಾಡಿದಾಗ ಬರೋಬ್ಬರಿ 25 ಟನ್ ಸಿಗುವ ನಿರೀಕ್ಷೆಗಳಿವೆ. ಇದೀಗ ಈ ಮಣ್ಣಿನಿಂದ ಚಿನ್ನ ಹುಡುಕುವ ಕಾರ್ಯ ಶುರುವಾಗಿತ್ತು. ಆದ್ರೆ ಮತ್ತೊಮ್ಮೆ ಶೋಧಕಾರ್ಯ ಟೆಂಡರ್‌ಗೆ ತಡೆ ನೀಡಲಾಗಿದೆ.
ಇದನ್ನೂ ಓದಿ: 300 ವರ್ಷಗಳಿಂದ ಔರಂಗಜೇಬ್ ಸಮಾಧಿ ನಿರ್ವಹಿಸುತ್ತಿರೋ ಕುಟುಂಬಕ್ಕೆ ಸಿಗ್ತಿರೋ ಸಂಬಳ ಎಷ್ಟು?
ಕೇಂದ್ರ ಸರ್ಕಾರದ ಸಚಿವ ಸಂಪುಟದ ಪ್ರಸ್ತಾವನೆ ಮತ್ತು 2016ರ ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಚಿನ್ನದ ಗಣಿಯ ಕಾರ್ಮಿಕರಿಗೆ 52 ಕೋಟಿ ರೂ.ಗಳಿಂದ ಪರಿಹಾರ ಸಿಗಬೇಕಿದೆ. ಒಂದು ವೇಳೆ ಮತ್ತೆ ಮಣ್ಣಿನಲ್ಲಿ ಚಿನ್ನದ ಶೋಧ ಕಾರ್ಯ ಆರಂಭವಾದ್ರೆ ಕೆಜಿಎಫ್ ನಗರದ ಸುತ್ತಮುತ್ತ ಧೂಳಿನ ಸಮಸ್ಯೆಯುಂಟಾಗಲಿದೆ ಎಂಬ ಆತಂಕವಿದೆ. ಸೈನೈಡ್ ಮಿಶ್ರಿತ ಮಣ್ಣಿನಿಂದ ನಗರದಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸಮಸ್ಯೆ ಮತ್ತು ಧೂಳಿನ ಸಮಸ್ಯೆ ಉಂಟಾಗಬಹುದು ಎಂದು ಪರಿಸರ ತಜ್ಞರು ಹೇಳುತ್ತಾರೆ.
ಅತ್ಯಾಧುನಿ ತಂತ್ರಜ್ಞಾನ ಬಳಸಿಕೊಂಡು ಮಣ್ಣಿನಲ್ಲಿರುವ ಚಿನ್ನವನ್ನು ಹೊರ ತೆಗೆಯಬಹುದು ಎಂದು ಸಂಶೋಧಕರು ಹೇಳುತ್ತಾರೆ. ಚಿನ್ನದ ಗಣಿಗಾರಿಕೆ ಆರಂಭಿಸಿದ್ರೆ ಲಾಭದಾಯಕವಾಗಲಿ ದೆ ಎಂದು ಹಲವರು ಹೇಳುತ್ತಾರೆ. ಕೆಜಿಎಫ್‌ನಲ್ಲಿ ಇನ್ನು ಅಪಾರ ಚಿನ್ನವಿದೆ. ಬ್ರಿಟಿಷರ ಕಾಲದಲ್ಲಿ ಕೆಜಿಎಫ್ ನಲ್ಲಿ ಸುಮಾರು 27 ಚಿನ್ನದ ನಿಕ್ಷೇಪಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಕೇವಲ ಎರಡ್ಮೂರು ಕಡೆ ಮಾತ್ರ ಚಿನ್ನದ ಗಣಿಗಾರಿಕೆ ನಡೆದಿತ್ತು. ಇನ್ನುಳಿದ 24 ಭಾಗದಲ್ಲಿ ಚಿನ್ನದ ಹುಡುಕಾಟವೇ ನಡೆದಿಲ್ಲ.
ಇದನ್ನೂ ಓದಿ: ಬೆಲೆ ಕುಸಿತದಿಂದ ನಲುಗಿದ್ದ ಕೆಂಪು ಮೆಣಸು ಬೆಳೆಗಾರರ ಕೈ ಹಿಡಿದ ಕೇಂದ್ರ, ಆಂಧ್ರ ಸರ್ಕಾರ
