Bengaluru Tech Summit: ಬಿಟಿಎಸ್‌ನಲ್ಲಿ 20 ನೂತನ ಸ್ಟಾರ್ಟಪ್ ಉತ್ಪನ್ನ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ
ನೂತನ ಉತ್ಪನ್ನಗಳನ್ನು ಸಿದ್ಧಪಡಿಸಿರುವ 20 ನವೋದ್ಯಮಗಳ ಪೈಕಿ ಮೂರು ಕಂಪನಿಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಶ್ಲಾಘನೀಯ ಸಂಗತಿ: ಸಚಿವ ಅಶ್ವತ್ಥನಾರಾಯಣ
ಬೆಂಗಳೂರು(ನ.17): ಬಿಟಿಎಸ್ ಸಮಾವೇಶದ ಎರಡನೆಯ ದಿನವಾದ ಇಂದು(ಗುರುವಾರ) ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಅಗ್ರಿಟೆಕ್, ಮೆಡ್‌ಟೆಕ್, ಎಡುಟೆಕ್ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಟಾರ್ಟಪ್‌ಗಳು ಅಭಿವೃದ್ಧಿಪಡಿಸಿರುವ 20 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಅವರು, "2025ರ ಒಳಗೆ ಬೆಂಗಳೂರಿನಲ್ಲಿ 20 ಸಾವಿರ ನವೋದ್ಯಮಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಈಗಾಗಲೇ ನಮ್ಮಲ್ಲಿ 22 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ಬೆಂಗಳೂರಿನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯ ಪರಿಸರವೇ ಇದಕ್ಕೆ ಕಾರಣವಾಗಿದೆ. ವೆಂಚರ್ ಕ್ಯಾಪಿಟಲ್ ಕ್ಷೇತ್ರದಲ್ಲಿ ನಮ್ಮ ನಗರವು ಇಡೀ ಜಗತ್ತಿನಲ್ಲೇ 5ನೇ ಸ್ಥಾನದಲ್ಲಿದೆ" ಎಂದರು.
ವಿದ್ಯುನ್ಮಾನ ವಲಯದಲ್ಲಿ 36000 ಕೋಟಿ ಹೂಡಿಕೆ: ಸಚಿವ ಅಶ್ವತ್ಥ್ ನಾರಾಯಣ
ನೂತನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವ ಸ್ಟಾರ್ಟಪ್‌ಗಳಲ್ಲಿ ಹೆಚ್ಚಿನವು ಸರಕಾರದ ನಾನಾ ಇನ್‌ಕ್ಯುಬೇಷನ್ ಕೇಂದ್ರಗಳ ಮಾರ್ಗದರ್ಶನ ಮತ್ತು ನೆರವು ಪಡೆದುಕೊಂಡಿದ್ದವು. ಈ ನಿಟ್ಟಿನಲ್ಲಿ ನಮ್ಮ ಕೆ-ಟೆಕ್ ನಾವೀನ್ಯತಾ ಹಬ್‌ಗಳು, ಉತ್ಕೃಷ್ಟತಾ ಕೇಂದ್ರಗಳು, ಟೆಕ್ನಾಲಜಿ ಬಿಜಿನೆಸ್ ಪರಿಪೋಷಣಾ ಕೇಂದ್ರಗಳು, ಸಿ-ಕ್ಯಾಂಪ್, ಭಾರತೀಯ ವಿಜ್ಞಾನ ಸಂಸ್ಥೆ, ನಾಸ್ಕಾಂ ಮತ್ತು ಐಎಎಂಎಐ ತರಹದ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಇನ್ನು ಕೆಲವು ಕಂಪನಿಗಳಿಗೆ ಸರಕಾರದ ಐಡಿಯಾ2 ಪಿಓಸಿ ಮತ್ತು ಎಲಿವೇಟ್ ಉಪಕ್ರಮಗಳ ಮೂಲಕ ಬೀಜನಿಧಿಯನ್ನೂ ಕೊಡಲಾಗಿತ್ತು. ಇಂದು ನೂತನ ಉತ್ಪನ್ನಗಳನ್ನು ಸಿದ್ಧಪಡಿಸಿರುವ 20 ನವೋದ್ಯಮಗಳ ಪೈಕಿ ಮೂರು ಕಂಪನಿಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಬಿಡುಗಡೆಯಾಗಿರುವ ಉತ್ಪನ್ನಗಳಲ್ಲಿ ಕ್ಲೀನ್‌ಟೆಕ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಐಓಟಿ, ಬ್ಲಾಕ್‌ಚೈನ್, ಸೈಬರ್ ಸೆಕ್ಯುರಿಟಿ, ವಿದ್ಯುತ್ ಚಾಲಿತ ವಾಹನ ಮತ್ತು ಇಎಸ್‌ಡಿಎಂ ವಲಯಗಳಿಗೆ ಸೇರಿದ ಉತ್ಪನ್ನಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.