business idea : ಓದುವ ವಯಸ್ಸಲ್ಲೇ ಮಕ್ಕಳು ಬ್ಯುಸಿನೆಸ್‌ ಮಾಡಲು ಆಸಕ್ತಿ ತೋರ್ತಿದ್ದಾರೆ. ಹೊಸ ಹೊಸ ಐಡಿಯಾ ಮೂಲಕ ಹಣ ಸಂಪಾದನೆ ಮಾಡ್ತಿದ್ದಾರೆ. ಈಗ 17 ವರ್ಷದ ಯುವಕ ಮಾಡಿದ ಪ್ಲಾನ್ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನವರಾತ್ರಿ ಸಂದರ್ಭದಲ್ಲಿ ದಾಂಡಿಯಾ ಸಂಭ್ರಮ ಮನೆ ಮಾಡಿರುತ್ತೆ. ಒಂಭತ್ತು ದಿನಗಳ ಕಾಲ ಸುಂದರವಾಗಿ ರೆಡಿಯಾಗಿ ಬರುವ ಜನರು, ಹಾಡಿಗೆ ಹೆಜ್ಜೆ ಹಾಕ್ತಾ ಸಂಭ್ರಮಿಸ್ತಾರೆ. ಎಲ್ಲರೂ ದಾಂಡಿಯಾ ನೈಟ್‌ ಹೇಗೆ ಎಂಜಾಯ್‌ ಮಾಡೋದು ಅಂತ ಯೋಚನೆ ಮಾಡ್ತಿದ್ರೆ ಈಗ ಹುಡುಗ ಹಣ ಮಾಡೋದು ಹೇಗೆ ಅಂತ ಪ್ಲಾನ್‌ ಮಾಡಿದ್ದಾನೆ. ಕೊನೆಯಲ್ಲಿ ಅವನ ಐಡಿಯಾ ವರ್ಕ್‌ ಆಗಿದೆ. ದಿನಕ್ಕೆ 50 ಸಾವಿರ ಸಂಪಾದನೆ ಕೂಡ ಮಾಡಿದ್ದಾನೆ.

ಸಣ್ಣ ಐಡಿಯಾ ನೀಡ್ತು ದೊಡ್ಡ ಆದಾಯ

ಗುಜರಾತ್ನ ಜನಪ್ರಿಯ ಗರ್ಬಾ ಕಾರ್ಯಕ್ರಮದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಸಾವಿರಾರು ಜನ ಸೇರುವ ಇಂತಹ ಜಾಗದಲ್ಲಿ ಕುಡಿಯುವ ನೀರಿಗೆ ಬೇಡಿಕೆಯೂ ಹೆಚ್ಚಿರುತ್ತೆ. ಇದೇ ಅವಕಾಶವನ್ನು ಗುರುತಿಸಿದ ಈ ಹುಡುಗ, ವಾಟರ್ ಬಾಟಲ್ ಮಾರಾಟ ಮಾಡುವ ಬಿಸಿನೆಸ್ ಶುರು ಮಾಡಿದ್ದಾನೆ.

ಈತ ದಿನಕ್ಕೆ ಸುಮಾರು 100 ಕಾರ್ಟನ್ ನೀರಿನ ಬಾಟಲ್ಗಳನ್ನು ಮಾರಾಟ ಮಾಡಿದ್ದಾನೆ. ಒಂದು ಕಾರ್ಟನ್ನಲ್ಲಿ 24 ಬಾಟಲ್ಗಳಿರುತ್ತವೆ. ಪ್ರತಿ ಬಾಟಲ್ನ ಬೆಲೆ 20 ರೂಪಾಯಿ. ಅಂದರೆ, 100 ಕಾರ್ಟನ್ಗಳಲ್ಲಿ ಒಟ್ಟು 2,400 ಬಾಟಲ್ಗಳಾಗುತ್ತವೆ. ಪ್ರತಿ ಬಾಟಲ್ಗೆ 20 ರೂಪಾಯಿಯಂತೆ ಲೆಕ್ಕ ಹಾಕಿದರೆ, ದಿನದ ಒಟ್ಟು ಮಾರಾಟದ ಮೊತ್ತ ಬರೋಬ್ಬರಿ 48 ಸಾವಿರ ರೂಪಾಯಿ.

ಬಂದ 48 ಸಾವಿರವೂ ಆತನಿಗೆ ಲಾಭವಲ್ಲ. ಈ ಸ್ಟಾಲ್ ಹಾಕಲು ಆತ ದಿನಕ್ಕೆ ಸುಮಾರು 20 ಸಾವಿರ ರೂಪಾಯಿ ಬಾಡಿಗೆ ನೀಡಿದ್ದಾನೆ ಎನ್ನಲಾಗಿದೆ. ಇದರ ಜೊತೆಗೆ ನೀರಿನ ಬಾಟಲ್ಗಳನ್ನು ಖರೀದಿಸುವ ವೆಚ್ಚ ಮತ್ತು ಇತರ ಖರ್ಚುಗಳು ಸೇರುತ್ವೆ. ಆದ್ರೆ ಒಂಭತ್ತು ದಿನಗಳಲ್ಲಿ ಆತ 50 ರಿಂದ 60 ಸಾವಿರ ಲಾಭ ಮಾಡಿರುವ ಸಾಧ್ಯತೆ ಇದೆ.

ಆದಾಯ ಎಷ್ಟೇ ಬಂದಿರಲಿ, ಈ ಹುಡುಗನ ಬಿಸಿನೆಸ್ ಐಡಿಯಾದಲ್ಲಿ ಕಲಿಯಬೇಕಾದ ಒಂದು ಮುಖ್ಯವಾದ ಪಾಠವಿದೆ. ಜನರು ಎಲ್ಲಿ ಹೆಚ್ಚು ಸೇರುತ್ತಾರೆ, ಅವರಿಗೆ ಯಾವ ವಸ್ತುವಿನ ಅಗತ್ಯವಿದೆ, ಆ ಅಗತ್ಯವನ್ನು ಹೇಗೆ ಬಿಸಿನೆಸ್ ಆಗಿ ಪರಿವರ್ತಿಸಬಹುದು ಅನ್ನೋದನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ಇರಬೇಕು. ಬಿಸಿನೆಸ್ ಮಾಡಬೇಕು ಅಂದ್ರೆ ದೊಡ್ಡ ಅಂಗಡಿ ಬೇಕು, ಲಕ್ಷಾಂತರ ರೂಪಾಯಿ ಬಂಡವಾಳ ಬೇಕು ಅಂತೇನಿಲ್ಲ. ಕೆಲವೊಮ್ಮೆ ಸಣ್ಣ ಐಡಿಯಾ ಕೂಡ ದೊಡ್ಡ ಅವಕಾಶವಾಗಿ ಬದಲಾಗಬಹುದು.