ಕರ್ನಾಟಕದಲ್ಲಿ 11,513 ಕೋಟಿ ರು. ಬಂಡವಾಳ ಹೂಡಿಕೆಗೆ ಅಸ್ತು: 47 ಸಾವಿರ ಉದ್ಯೋಗ ಸೃಷ್ಟಿ
* ಸಿಎಂ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆ ಸಮ್ಮತಿ
* ಕೈಗಾರಿಕೆಗೆ ಬಳಕೆಯಾಗದ ಭೂಮಿ ಬಗ್ಗೆ ವರದಿ ಕೇಳಿದ ಸಿಎಂ
* ರಾಜ್ಯದಲ್ಲಿ ವಿವಿಧ ಕಂಪನಿಗಳಿಂದ ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ
ಬೆಂಗಳೂರು(ಏ.19): ರಾಜ್ಯದಲ್ಲಿ(Karnataka) ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಗಾಗಿ ರಾಜ್ಯ ಸರ್ಕಾರ ಸುಮಾರು 11,513 ಕೋಟಿ ರು. ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಈ ಮಹತ್ವದ ತೀರ್ಮಾನದಿಂದ ಸುಮಾರು 47 ಸಾವಿರ ಉದ್ಯೋಗ(Job) ಸೃಷ್ಟಿಯನ್ನು ಅಂದಾಜಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ 58ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ ವಿವಿಧ ಕಂಪನಿಗಳಿಂದ ರಾಜ್ಯದಲ್ಲಿ ಬೃಹತ್ ಬಂಡವಾಳ ಹೂಡಿಕೆ ಯೋಜನೆಗಳ ಅನುಮೋದನೆಗೆ ಒಪ್ಪಿಗೆ ಸೂಚಿಸಲಾಗಿದೆ. ನವೆಂಬರ್ 2 ಮತ್ತು 3ರಂದು ರಾಜ್ಯದಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ಆಹ್ವಾನ ನೀಡಿದ ನಿರಾಣಿ
ಪ್ರಮುಖವಾಗಿ ಲೀಥಿಯಂ-ಐಯಾನ್ ಸೆಲ್ ಉತ್ಪಾದನೆ ಮಾಡುವ ಎಕ್ಸೈಡ್ ಇಂಡಸ್ಟ್ರೀಸ್ ಕಂಪನಿಯು ರಾಜ್ಯದಲ್ಲಿ 6,000 ಕೋಟಿ ರು. ಹೂಡಿಕೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2ನೇ ಹಂತದ ಹೈಟೆಕ್ ರಕ್ಷಣೆ ಹಾಗೂ ವೈಮಾನಿಕ ಪಾರ್ಕ್ ನಿರ್ಮಿಸಲಿದ್ದು, ಇದರಿಂದಾಗಿ ಅಂದಾಜು 1,400 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಇದೇ ರೀತಿ ಎನ್‌ಸೂರ್ ರಿಲಯೆಬಲ್ ಪವರ್ ಸೊಲ್ಯೂಷಸ್ ಕಂಪನಿಯು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ರಾಂಪುರದಲ್ಲಿ 2050 ಕೋಟಿ ರು. ವೆಚ್ಚದಲ್ಲಿ ಲೀಥಿಯಂ ಐಯನ್ ಸೆಲ್ ಘಟಕ ಪ್ರಾರಂಭಿಸಲು ಮುಂದೆ ಬಂದಿದ್ದು, ಸುಮಾರು 450 ಉದ್ಯೋಗ ಸೃಷ್ಟಿಯ ಅಂದಾಜಿಸಲಾಗಿದೆ. ಮುಂಬೈ ಮೂಲದ ಜೆಎಸ್‌ಡಬ್ಲೂ ಎನರ್ಜಿ ಕಂಪನಿಯು ಬಳ್ಳಾರಿ ಜಿಲ್ಲೆಯ ವಿದ್ಯಾನಗರ ಪ್ರದೇಶದಲ್ಲಿ 679.51 ಕೋಟಿ ರು. ವೆಚ್ಚದಲ್ಲಿ ಅಂದಾಜು 130 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಆರಂಭಿಸಲಿದೆ. ಇದರಿಂದ ನೂರಾರು ಉದ್ಯೋಗಗಳು ಸೃಜನೆಯಾಗಲಿವೆ.
ಮಹಾರಾಷ್ಟ್ರದ ವೆಬ್ ವರ್ಕ್ ಇಂಡಿಯಾ ಪ್ರೈ.ಲಿ ಕಂಪನಿಯು ಬೆಂಗಳೂರಿನ ಕೆ.ಆರ್.ಪುರದ ಪಟ್ಟಂದೂರು ಆಗ್ರಹಾರದಲ್ಲಿ ಡಾಟಾ ಸರ್ವೀಸ್ ಸೆಂಟರ್ ಆರಂಭಿಸಿದೆ. ಇದಕ್ಕಾಗಿ 530 ಕೋಟಿ ರು. ಬಂಡವಾಳ(Investment) ಹೂಡಿಕೆ ಮಾಡಲಿದ್ದು, 69 ಉದ್ಯೋಗಗಳು ಸೃಷ್ಡಿಯಾಗಲಿವೆ ಎಂದು ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದರು.
ಇಷ್ಟೇ ಅಲ್ಲದೆ, ಮಿ. ಟೆಟ್ರಾಚ್‌ರ್ ಡೆವಲಪರ್ಸ್‌ನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ವಿವಿಧೋದ್ದೇಶ ಕೈಗಾರಿಕಾ ಪಾರ್ಕ್, ವೈಮಾನಿಕ, ರಕ್ಷಣೆ, ಡಾಟಾ ಸೆಂಟರ್, ಎಲೆಕ್ಟ್ರಾನಿಸ, ಲಾಜಿಸ್ಟಿಸ , ವಸತಿ ಮತ್ತು ಇತರೆ ಸಾಮಾಜಿಕ ಮೂಲಭೂತ ಸೌಕರ್ಯಗಳ ಚಟುವಟಿಕೆಗಾಗಿ 2,231 ಕೋಟಿ ರು. ಬಂಡವಾಳ ಹೂಡಲಿದೆ. ಇದರಿಂದ ಸುಮಾರು 45,000 ಉದ್ಯೋಗಗಳು ದೊರೆಯುವ ಅಂದಾಜು ಮಾಡಲಾಗಿದೆ. ಎಸಿಸಿ ಲಿ. ಕಲಬುರಗಿ ಕಂಪನಿಯು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಇಂಗಳಗಿ, ಹಳಕಟ್ಡ ಮತ್ತು ಬಸವೇಶ್ವರ ನಗರದಲ್ಲಿ 471 ಕೋಟಿ ರು. ಬಂಡವಾಳ ಹೂಡಿ ಲೈಮ್ ಸ್ಟೋನ್ ಮೈನಿಂಗ್ ನಡೆಸಲಿದೆ. ಗೋದ್ರೇಜ್ ಏರೋಸ್ಪೇಸ್ ಸರ್ವಿಸ್ ಪ್ರೆ.ಲಿ. ನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯದ ಮೂಲಕ ರಕ್ಷಣೆ, ವೈಮಾನಿಕ ಪಾರ್ಕ್ ವಿಮಾನಗಳ ಸೀಟು ಉತ್ಪಾದನೆಗೆ 280 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಬಾಗಲಕೋಟೆ ಜೆ.ಕೆ. ಸಿಮೆಂಟ್ಸ್ ವರ್ಕ್ಸ್ ಬಾಗಲಕೋಟೆ ಮುಧೋಳ ತಾಲ್ಲೂಕಿನ ಹಲ್ಕಿ ಹಾಗೂ ಇತರೆ ಗ್ರಾಮಗಳಲ್ಲಿ 3ನೇ ಎಂಟಿಪಿಎ 25/30 ಮೆಗಾ ವ್ಯಾಟ್ ಸಾಮಾರ್ಥ್ಯದ ಕಲ್ಲಿದ್ದಲು ಹಾಗೂ ಉಷ್ಣ ವಿದ್ಯುತ್ ಘಟಕ ಆರಂಭಿಸಲು ಸುಮಾರು 242.89 ಕೋಟಿ ರು. ಹೂಡಿಕೆ ಮಾಡಲಿದೆ ಎಂದು ಸಚಿವರು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಒಟ್ಟು ಸುಮಾರು 10 ಕಂಪನಿಗಳ 11,513 ಕೋಟಿ ರು. ಹೂಡಿಕೆಗೆ ಒಪ್ಪಿಗೆ ದೊರೆತಿದೆ.
ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಅಭಿವೃದ್ಧಿ ಆಯುಕ್ತೆ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐ.ಟಿ, ಬಿ.ಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Budget 2022: ಭಾರತದಲ್ಲಿ ಖಾಸಗಿ, ವಿದೇಶಿ ಹೂಡಿಕೆ ಹೆಚ್ಚಳಕ್ಕೆ ಪೂರಕ ವಾತಾವರಣ ಸೃಷ್ಟಿಸಿದ ಬಜೆಟ್!
ಕೈಗಾರಿಕೆಗೆ ಬಳಕೆಯಾಗದ ಭೂಮಿ ಬಗ್ಗೆ ವರದಿ ಕೇಳಿದ ಸಿಎಂ
ಕೈಗಾರಿಕೆ ಸ್ಥಾಪನೆಗಾಗಿ ಮಂಜೂರಾಗಿರುವ ಭೂಮಿ ಹತ್ತಾರು ವರ್ಷಗಳಾದರೂ ಎಲ್ಲೆಲ್ಲಿ ಬಳಕೆಯಾಗದೆ ಉಳಿದಿದೆ ಎಂದು ವರದಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭೂ ಮಂಜೂರಾತಿ ನೀಡಿ ಹತ್ತಿಪ್ಪತ್ತು ವರ್ಷಗಳಾದರೂ ಕೈಗಾರಿಕೆಗಳು(Industries) ಯೋಜನೆ ಆರಂಭಿಸದೆ ಉಳಿಸಿಕೊಂಡಿವೆ. ಇದನ್ನು ಬೇರೆಯವರಿಗೆ ಕೊಡಲೂ ಸಾಧ್ಯವಿಲ್ಲದ ಸ್ಥಿತಿ ಇದೆ. ಈ ಕೂಡಲೇ ಅಂತಹ ಭೂಮಿಯನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(Karnataka Industrial Area Development Board) ಪರಿಶೀಲನೆಗಾಗಿ ಪ್ರತ್ಯೇಕವಾಗಿ ಸಭೆ ಕರೆಯಲಾಗುವುದು. ಈ ವೇಳೆಗೆ ವರದಿ ನೀಡಲು ಸಿಎಂ ಸೂಚಿಸಿದರು ಎಂದು ತಿಳಿದು ಬಂದಿದೆ.
ಬಂಡವಾಳ ಹೂಡಲು ಮುಂದೆ ಬರುವ ಕಂಪನಿಗಳಿಗೆ ಭೂಮಿ, ನೀರು, ವಿದ್ಯುತ್, ಮೂಲಭೂತ ಸೌಕರ್ಯ ಸೇರಿದಂತೆ ಹೊಸ ಕೈಗಾರಿಕಾ ನೀತಿ 2025 ರಡಿಯಲ್ಲಿ ಯಾವ ರೀತಿ ಸೌಲಭ್ಯಗಳನ್ನು ನೀಡಬಹುದು ಎಂಬುದನ್ನು ತಿಳಿಸಬೇಕೆಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಂಪನಿ ಎಲ್ಲಿ ಹೂಡಿಕೆ ಎಷ್ಟು ಉದ್ಯೋಗ
ಎಕ್ಸೈಡ್ ಬೆಂ.ಗ್ರಾ., 6000 ಕೋಟಿ 1400
ಎನ್‌ಶೂರ್ ಪವರ್ ಸಲ್ಯೂಶನ್ ಮಾಲೂರು, 2050 ಕೋಟಿ 450
ಜೆಎಸ್‌ಡಬ್ಲ್ಯು ಬಳ್ಳಾರಿ, 679 ಕೋಟಿ 100
ವೆಬ್‌ವರ್ಕ್ಸ್ ಕೆ.ಆರ್.ಪುರ, 530 ಕೋಟಿ 69
ಟೆಟ್ರಾಚ್‌ರ್ ಡೆವಲಪರ್ಸ್ ದೇವನಹಳ್ಳಿ, 2231 ಕೋಟಿ 45000
ಎಸಿಸಿ ಲಿ. ಚಿತ್ತಾಪುರ, 471 ಕೋಟಿ
ಗೋದ್ರೇಜ್ ಏರೋಸ್ಪೇಸ್ ಬೆಂ.ಗ್ರಾ., 280 ಕೋಟಿ
ಜೆ.ಕೆ.ಸಿಮೆಂಟ್ಸ್ ಮುಧೋಳ, 242 ಕೋಟಿ