ನವೆಂಬರ್ ತಿಂಗಳಲ್ಲಿ ಬರೋಬ್ಬರಿ 11 ದಿನ ಬ್ಯಾಂಕ್ ರಜೆ! ನವೆಂಬರ್‌ನಲ್ಲಿ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು! ವಿವಿಧ ರಾಜ್ಯಗಳಲ್ಲಿ ನಿರ್ದಿಷ್ಟ ದಿನಗಳಂದು ಬ್ಯಾಂಕ್‌ಗಳಿಗೆ ರಜೆ! ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳುವುದು ಕಷ್ಟವಾಗಲಿದೆಯೇ?! ಸೂಕ್ತ ಹಣದ ವ್ಯವಸ್ಥೆ ಮಾಡಲು ಬ್ಯಾಂಕ್‌ಗಳು ನಡೆಸಿವೆ ಸಿದ್ಧತೆ

ನವದೆಹಲಿ(ಅ.27): ಮುಂದಿನ ತಿಂಗಳು ನವೆಂಬರ್ ನಲ್ಲಿ ಸಾಲು ಸಾಲು ಹಬ್ಬಗಳು ನಮ್ಮನ್ನು ಎದುರುಗೊಳ್ಳಲಿವೆ. ದೀಪಾವಳಿ ಜೊತೆಗೆ ಇನ್ನೂ ಅನೇಕ ಹಬ್ಬಗಳು ಸಾಲು ಸಾಲಾಗಿ ಬರಲಿವೆ. 

ಹಬ್ಬಗಳು ಅಂದ್ಮೇಲೆ ಸಾಲು ಸಾಲು ರಜಾ ಕೂಡ ಪಕ್ಕಾ ಅಲ್ವಾ?. ಅದರಂತೆ ಬ್ಯಾಂಕ್‌ಗಳು ಕೂಡ ರಜೆ ಕಾರಣ ಬಾಗಿಲು ಬಂದ್ ಮಾಡುವುದು ನಿಶ್ಚಿತ. ಇದೇ ಕಾರಣಕ್ಕೆ ನವೆಂಬರ್ ತಿಂಗಳಲ್ಲಿ ಅನೇಕ ರಾಜ್ಯಗಳಲ್ಲಿ 11 ದಿನಗಳ ಕಾಲ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ. ಹಬ್ಬದ ಸಂದರ್ಭದಲ್ಲಿ ಎಟಿಎಂ ಮುಂದೆ ಹೆಣಗಾಡುವ ಬದಲು ಮೊದಲೇ ಹಣ ಡ್ರಾ ಮಾಡಿಕೊಳ್ಳುವುದು ಉತ್ತಮ.

ನವೆಂಬರ್ 5ರಿಂದಲೇ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಲಿದೆ. ನವೆಂಬರ್ 5 ರಿಂದ ನವೆಂಬರ್ 9 ರವರೆಗೆ ದೀಪಾವಳಿ ಸಂಭ್ರಮ ಮನೆ ಮಾಡಿರಲಿದೆ. ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆಯಿರಲಿದೆ. 

ನವೆಂಬರ್ 10 ಮತ್ತು 11 ಶನಿವಾರ, ಭಾನುವಾರವಾದ ಕಾರಣ ಮತ್ತೆರಡು ದಿನ ರಜೆ ಸಿಗಲಿದೆ. ಈ ವೇಳೆಯಲ್ಲೂ ಬ್ಯಾಂಕ್‌ಗಳಿಗೆ ರಜೆ ಕಡ್ಡಾಯ.

ಇನ್ನು ನವೆಂಬರ್ 13, 14 ರಂದು ಬಿಹಾರ, ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮ ಮನೆ ಮಾಡಲಿದೆ. ಛತ್ ಪೂಜೆ ಹಿನ್ನೆಲೆಯಲ್ಲಿ ಆ ರಾಜ್ಯಗಳ ಬ್ಯಾಂಕ್‌ಗಳು ಬಾಗಿಲು ಮುಚ್ಚಲಿವೆ. 

ನವೆಂಬರ್ 21 ರಂದು ಈದ್ -ಎ-ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ ಇರುವುದರಿಂದ ಬ್ಯಾಂಕ್‌ಗಳಿಗೆ ರಜೆಯಿರಲಿದೆ. ಒಟ್ಟಿಗೆ ಅನೇಕ ದಿನಗಳ ಕಾಲ ಬ್ಯಾಂಕ್ ಬಂದ್ ಆಗುವ ಕಾರಣ ಎಟಿಎಂನಲ್ಲಿ ಹಣ ಸಮಸ್ಯೆ ಕಾಡಬಹುದು. 

ಆದರೆ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಟಿಎಂನಲ್ಲಿ ಹಣದ ವ್ಯವಸ್ಥೆ ಮಾಡಲು ಬ್ಯಾಂಕ್‌ಗಳು ನಿರ್ಧರಿಸಿವೆ ಎಂದು ಮೂಲಗಳು ಖಚಿತಪಡಿಸಿವೆ.