Asianet Suvarna News Asianet Suvarna News

Economic Survey 2022: 2021ರಲ್ಲಿ ಅತ್ಯಧಿಕ ಸ್ಟಾರ್ಟ್ಅಪ್ ಗಳಿರೋ ನಗರ ಬೆಂಗಳೂರಲ್ಲ, ನವದೆಹಲಿ!

*2021ರ ಡಿಸೆಂಬರ್ ತನಕ ದೆಹಲಿಯಲ್ಲಿ 5,000ಕ್ಕೂ ಅಧಿಕ ಅಂಗೀಕೃತ  ಸ್ಟಾರ್ಟ್‌ಅಪ್ ಗಳ ಸೇರ್ಪಡೆ
*ಬೆಂಗಳೂರಿನಲ್ಲಿ 4,514  ಸ್ಟಾರ್ಟ್‌ಅಪ್ ಗಳು ಪ್ರಾರಂಭ
*ಮಹಾರಾಷ್ಟ್ರ ಅತ್ಯಧಿಕ ಸ್ಟಾರ್ಟ್‌ಅಪ್ ಗಳನ್ನು ಹೊಂದಿರೋ ರಾಜ್ಯ

New Delhi added more startups than Bengaluru in 2021 says Economic Survey 2022
Author
Bengaluru, First Published Jan 31, 2022, 5:54 PM IST

Business Desk:ಕಳೆದ ಕೆಲವು ವರ್ಷಗಳಲ್ಲಿ ಭಾರತವು  ಸ್ಟಾರ್ಟ್‌ಅಪ್  ( Startup) ವಲಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಭಾರತದಲ್ಲಿ ಸಾಕಷ್ಟು ಸ್ಟಾರ್ಟ್‌ಅಪ್ ಗಳು ತಲೆ ಎತ್ತಿವೆ.  ಅತ್ಯಧಿಕ ಸ್ಟಾರ್ಟ್‌ಅಪ್ ಗಳನ್ನು ಹೊಂದಿರೋ ಮೂಲಕ ಬೆಂಗಳೂರು (Bengaluru) ಸ್ಟಾರ್ಟ್ಅಪ್ ಸಿಟಿ ಎಂಬ ಹೆಗ್ಗಳಿಕೆ ಗಳಿಸಿತ್ತು. ಆದ್ರೆ 2021ರಲ್ಲಿ ರಾಷ್ಟ್ರ ರಾಜ್ಯಧಾನಿ ನವದೆಹಲಿ (New Delhi) ಬೆಂಗಳೂರನ್ನು ಹಿಂದಿಕ್ಕಿ ಅತ್ಯಧಿಕ ಸ್ಟಾರ್ಟ್ ಅಪ್ ಗಳನ್ನು ಹೊಂದಿರೋ ನಗರಗವಾಗಿ ಹೊರಹೊಮ್ಮಿದೆ ಎಂದು ಆರ್ಥಿಕ ಸಮೀಕ್ಷೆ(Economic Survey) ತಿಳಿಸಿದೆ.

2019ರ ಏಪ್ರಿಲ್ ಹಾಗೂ 2021ರ ಡಿಸೆಂಬರ್ ನಡುವೆ ದೆಹಲಿಯಲ್ಲಿ 5,000ಕ್ಕೂ ಅಧಿಕ ಅಂಗೀಕೃತ  ಸ್ಟಾರ್ಟ್‌ಅಪ್ ಗಳು ಸೇರ್ಪಡೆಗೊಂಡಿದ್ರೆ, ಬೆಂಗಳೂರಿನಲ್ಲಿ ಇದೇ ಅವಧಿಯಲ್ಲಿ 4,514  ಸ್ಟಾರ್ಟ್‌ಅಪ್ ಗಳು (startups) ಪ್ರಾರಂಭವಾಗಿವೆ. ಇನ್ನು ರಾಜ್ಯಗಳ ವಿಚಾರಕ್ಕೆ ಬಂದ್ರೆ ಮಹಾರಾಷ್ಟ್ರ ಅತ್ಯಧಿಕ ಸ್ಟಾರ್ಟ್‌ಅಪ್ ಗಳನ್ನು ಹೊಂದಿರೋ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 11,308 ಅಂಗೀಕೃತ  ಸ್ಟಾರ್ಟ್‌ಅಪ್ ಗಳು ಕಾರ್ಯನಿರ್ವಹಿಸುತ್ತಿವೆ. 

Economic Survey 2022: 1.2 ಲಕ್ಷ ಬ್ಯಾಂಕ್ ಠೇವಣಿದಾರರಿಗೆ 1, 500 ಕೋಟಿ ರೂ. ಪಾವತಿಸಿದ DICGC

2021ರಲ್ಲಿ ಭಾರತ ಸರ್ಕಾರ 14,000 ಹೊಸ  ಸ್ಟಾರ್ಟ್‌ಅಪ್ ಗಳಿಗೆ ಅಂಗೀಕಾರ ನೀಡಿತ್ತು. ಅದೇ 2016-17ರಲ್ಲಿ ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಹೊಸ  ಸ್ಟಾರ್ಟ್‌ಅಪ್ ಗಳ ಸಂಖ್ಯೆ ಸುಮಾರು 733 ಆಗಿತ್ತು. 2022ರ ಜನವರಿ 10ರ ತನಕ ಭಾರತದಲ್ಲಿ ಮಾನ್ಯತೆ ಪಡೆದ 61,400ಕ್ಕೂ ಅಧಿಕ ಸ್ಟಾರ್ಟ್‌ಅಪ್ ಗಳು ಕಾರ್ಯನಿರ್ವಹಿಸುತ್ತಿವೆ. 2021ರಲ್ಲಿ 555 ಜಿಲ್ಲೆಗಳು ಕನಿಷ್ಠ ಒಂದು ಹೊಸ  ಸ್ಟಾರ್ಟ್‌ಅಪ್ ಹೊಂದಿವೆ. ಅದೇ 2016-17ರಲ್ಲಿ 121 ಜಿಲ್ಲೆಗಳಲ್ಲಿ ಕನಿಷ್ಠ ಒಂದು  ಸ್ಟಾರ್ಟ್‌ಅಪ್ ಇತ್ತು. ಅಂದ್ರೆ 2021ನೇ ಸಾಲಿನಲ್ಲಿ ಭಾರತದಲ್ಲಿ ಸ್ಟಾರ್ಟ್‌ಅಪ್ ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. 

2021ರಲ್ಲಿ ಭಾರತ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಅತ್ಯಧಿಕ ಯೂನಿಕಾರ್ನ್ ಗಳನ್ನು ಹೊಂದಿರೋ ಜಗತ್ತಿನ ಮೂರನೇ ರಾಷ್ಟ್ರವಾಗಿ ಹೊರಹೊಮ್ಮಿದೆ. 2021ರಲ್ಲಿ ಭಾರತದಲ್ಲಿ 44 ಯುನಿಕಾರ್ನ್ ಗಳು ಸೇಪರ್ಡೆಗೊಂಡಿವೆ. ಅದೇ ಈ ಅವಧಿಯಲ್ಲಿ ಅಮೆರಿಕದಲ್ಲಿ  487 ಹಾಗೂ ಚೀನಾದಲ್ಲಿ 301 ಯುನಿಕಾರ್ನ್ ಗಳು ಸೇರ್ಪಡೆಗೊಂಡಿವೆ. 2022 ಜನವರಿ 14ಕ್ಕೆ ಅನ್ವಯವಾಗುವಂತೆ ಭಾರತದಲ್ಲಿ  83 ಯುನಿಕಾರ್ನ್ ಗಳಿದ್ದು, ಒಟ್ಟು 277.77 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿವೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

Economic Survey 2022: 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಚೇತರಿಕೆ; ಮಾಸಿಕ 1ಲಕ್ಷ ಕೋಟಿ ರೂ. GST ಸಂಗ್ರಹ

ಪ್ರಧಾನಿ ನರೇಂದ್ರ ಮೋದಿ (Narendra Modi) ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನ (National Startup Day) ಎಂದು ಇತ್ತೀಚೆಗೆ ಘೋಷಿಸಿದ್ದರು. ಸ್ಟಾರ್ಟ್‌ಅಪ್‌ಗಳನ್ನು ನವ ಭಾರತದ ಬೆನ್ನೆಲುಬು ಎಂದು ಪ್ರಧಾನಿ ಕರೆದಿದ್ದರು.  “ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ಟಾರ್ಟ್‌ಅಪ್‌ಗಳನ್ನು, ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್‌ಅಪ್‌ಗಳ ಈ ಸಂಸ್ಕೃತಿಯು ದೇಶದ ದೂರದ ಭಾಗಗಳನ್ನು ತಲುಪಲು, ಜನವರಿ 16 ಅನ್ನು ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ, ”ಎಂದು  ವಿವಿಧ ವಲಯಗಳ 150 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳೊಂದಿಗಿನ ಸಂವಾದದಲ್ಲಿ ಮೋದಿ ಘೋಷಿಸಿದ್ದರು. 

ಕರ್ನಾಟಕದಲ್ಲಿ ಸ್ಟಾರ್ಟ್ ಅಪ್‌ಗೆ ಪ್ರೋತ್ಸಾಹ
75 ನವೋದ್ಯಮಗಳಿಗೆ ಸೇರಿದಂತೆ ಈ ವರ್ಷ ರಾಜ್ಯದಲ್ಲಿ ಒಟ್ಟು 200 ನವೋದ್ಯಮಗಳಿಗೆ (New Innovators) ಗರಿಷ್ಠ ತಲಾ 50 ಲಕ್ಷ ರೂ.ಗಳವರೆಗೆ ಮೂಲನಿಧಿ (seed fund) ಕೊಡಲಾಗುವುದು ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ಇತ್ತೀಚೆಗೆ ನಡೆದ ರಾಷ್ಟ್ರೀಯ ನವೋದ್ಯಮ ದಿನದಲ್ಲಿ ತಿಳಿಸಿದ್ದರು.  ರಾಜ್ಯದಲ್ಲಿ ಇದುವರೆಗೆ ಸರಿಸುಮಾರು 500 ಸ್ಟಾರ್ಟ್ ಅಪ್ ಗಳಿಗೆ ಅನುದಾನ ಕೊಡಲಾಗಿದ್ದು, ಮೂಲನಿಧಿ ಕೊಡುವ ಉಪಕ್ರಮ ಬೇರಾವ ರಾಜ್ಯದಲ್ಲೂ ಇಲ್ಲ ಎಂದು ಅವರು ತಿಳಿಸಿದ್ದರು. 

Follow Us:
Download App:
  • android
  • ios