Economic Survey 2022: ಹಲವು ವಲಯಗಳ ಚೇತರಿಕೆಗೆ ಇಂಬು: ಆರ್ಥಿಕತೆಗೆ ಟಾನಿಕ್ ನಿರೀಕ್ಷೆ!
ಸೋಮವಾರ ಆರ್ಥಿಕ ಸಮೀಕ್ಷೆ ಮಂಡಿಸಲಾಗಿದೆ. ಇದರಲ್ಲಿ ಕೊರೋನಾ ಹೊಡೆತದ ನಡುವೆಯೂ ದೇಶದ ಆರ್ಥಿಕತೆ ಪುಟಿದೇಳಲಿದೆ. ಹಲವು ವಲಯಗಳು ಆರ್ಥಿಕ ಚೇತರಿಕೆಗೆ ಇಂಬು ನೀಡಲಿವೆ ಎಂದು ಸಮೀಕ್ಷೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನವದೆಹಲಿ (ಫೆ. 1): ಸೋಮವಾರ ಆರ್ಥಿಕ ಸಮೀಕ್ಷೆ (Economic Survey) ಮಂಡಿಸಲಾಗಿದೆ. ಇದರಲ್ಲಿ ಕೊರೋನಾ ಹೊಡೆತದ ನಡುವೆಯೂ ದೇಶದ ಆರ್ಥಿಕತೆ ಪುಟಿದೇಳಲಿದೆ. ಹಲವು ವಲಯಗಳು ಆರ್ಥಿಕ ಚೇತರಿಕೆಗೆ ಇಂಬು ನೀಡಲಿವೆ ಎಂದು ಸಮೀಕ್ಷೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ.
"
ವಿಮಾನಯಾನ ವಲಯದಲ್ಲಿ ಚೇತರಿಕೆ: ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಭಾರತೀಯ ವಿಮಾನಯಾನ ವಲಯವು ಕೇಂದ್ರ ಸರ್ಕಾರದ ಲಸಿಕೆ ಅಭಿಯಾನ ಮತ್ತು ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳ ಸಡಿಲಿಕೆಯಿಂದಾಗಿ ಚೇತರಿಕೆಯತ್ತ ಸಾಗುತ್ತಿದೆ. 2013-14ರಲ್ಲಿ 6.1 ಕೋಟಿಯಷ್ಟಿದ್ದ ವಿಮಾನಗಳ ಸಂಚಾರ ದಟ್ಟಣೆ 2019-20ರಲ್ಲಿ 13.7 ಕೋಟಿಗೆ ಜಿಗಿದಿದೆ. ತನ್ಮೂಲಕ ವಿಮಾನಯಾನ ವಲಯ ವಾರ್ಷಿಕ ಶೇ.14ರಷ್ಟುಅಭಿವೃದ್ಧಿ ದಾಖಲಿಸಿವೆ.
ಪೂರೈಕೆ ನಿರ್ವಹಣೆಯಿಂದ ವಸ್ತುಗಳ ಬೆಲೆ ನಿಯಂತ್ರಣ: ಉತ್ತಮ ಪೂರೈಕೆ ನಿರ್ವಹಣೆಯ ಪರಿಣಾಮ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆಹಾರ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಗಳು ಗಗನಕ್ಕೇರದಂತೆ ನಿಯಂತ್ರಿಸಲಾಗಿದೆ. ಅಲ್ಲದೆ ಇಂಧನ ಬೆಲೆಗಳ ಮೇಲಿನ ತೆರಿಗೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದಾಗ್ಯೂ, ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಅಡುಗೆ ಎಣ್ಣೆ ಮತ್ತು ಧಾನ್ಯಗಳ ದರಗಳು ಏರಿಕೆಯಾಗಿದ್ದವು. ಬಳಿಕ ಹಲವು ಕ್ರಮಗಳನ್ನು ಕೈಗೊಂಡು ಅವುಗಳ ಬೆಲೆಯನ್ನು ಸಹ ನಿಯಂತ್ರಿಸಲಾಯಿತು.
ಇದನ್ನೂ ಓದಿ: Budget 2022 LIVE: ಮೋದಿ ಸರಕಾರದ ಲೆಕ್ಕ, ನಿರ್ಮಲಾ ಮಂಡಿಸ್ತಾರೆ ಪಕ್ಕಾ
ರಸಗೊಬ್ಬರ ಸಬ್ಸಿಡಿ 85,300 ಕೋಟಿಗೆ ಹೆಚ್ಚಳ: ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಸಗೊಬ್ಬರಗಳಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣ ಮೊದಲ 9 ತಿಂಗಳ ಅವಧಿಯಲ್ಲಿ 85,300 ಕೋಟಿ ರು.ಗೆ ತಲುಪಿದೆ. ಈ ಪೈಕಿ 49,800 ಕೋಟಿ ರು. ಯೂರಿಯಾಕ್ಕೆ, ಫಾಸ್ಫೇಟಿಕ್ ಮತ್ತು ಪೊಟ್ಯಾಷಿಯಂಗೆ 35,500 ಕೋಟಿ ರು. ನೀಡಲಾಗಿದೆ.
ಕುಸಿದಿದ್ದ ಉದ್ಯೋಗಗಳ ಸಂಖ್ಯೆ ಪುಟಿತ: 2020ರ ಏಪ್ರಿಲ್-ಜೂನ್‌ನಲ್ಲಿ ಕೊರೋನಾ ನಿಯಂತ್ರಣಕ್ಕೆ ಹೇರಲಾದ ಲಾಕ್‌ಡೌನ್ ಸೇರಿದಂತೆ ಇನ್ನಿತರ ನಿರ್ಬಂಧ ಕ್ರಮಗಳಿಂದಾಗಿ ಭಾರೀ ಪ್ರಮಾಣದಲ್ಲಿ ಕುಸಿದಿದ್ದ ಉದ್ಯೋಗಗಳ ಸಂಖ್ಯೆ ಇದೀಗ ಚೇತರಿಕೆಯತ್ತ ದಾಪುಗಾಲು ಹಾಕಿದೆ. ಸರ್ಕಾರದ ಕ್ರಮಗಳಿಂದ ಹಲವು ವಲಯಗಳಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ,
ರೈತರಿಗೆ 7.36 ಲಕ್ಷ ಕೋಟಿ ರು. ಸಾಲ ವಿತರಣೆ: ಕೃಷಿ ವಲಯದ ಉತ್ತೇಜನಕ್ಕಾಗಿ 2021-22ರ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ ರೈತರಿಗೆ 7.36 ಕೋಟಿ ರು. ಸಾಲ ವಿತರಣೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ರೈತರಿಗೆ 16.50 ಲಕ್ಷ ಕೋಟಿ ರು. ಸಾಲ ವಿತರಿಸುವುದು ಸರ್ಕಾರದ ಗುರಿಯಾಗಿದೆ. 2020-21ನೇ ಸಾಲಿನಲ್ಲಿ ಕೃಷಿ ವಲಯಕ್ಕೆ ಬ್ಯಾಂಕ್‌ಗಳ ಮುಖಾಂತರ 15,75,398 ಕೋಟಿ ರು. ಸಾಲ ನೀಡಲಾಗಿತ್ತು.
ಇದನ್ನೂ ಓದಿ: Union Budget : ರಾಜ್ಯ ಪ್ರತಿನಿಧಿಸುವ ನಿರ್ಮಲಾರಿಂದ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಏನೆಲ್ಲ ಸಿಗಲಿದೆ?...
ಬೆಂಗಳೂರು ಸೇರಿ ಹಲವೆಡೆ ರಿಯಲ್ ಎಸ್ಟೇಟ್ ಚೇತರಿಕೆ: ಕೊರೋನಾದ ಮೊದಲ ಅಲೆ ಮತ್ತು 2ನೇ ಅಲೆಯ ವೇಳೆ ನಗರ ಪ್ರದೇಶಗಳಲ್ಲಿ ಮನೆ ಮಾರಾಟದಲ್ಲಿ ಕುಸಿತವಾಗಿವೆ. ಆದರೆ ಮನೆ ಮತ್ತು ಆಸ್ತಿಗಳ ಮಾರಾಟದ ದರಗಳಲ್ಲಿ ಯಾವುದೇ ಕುಸಿತವಾಗಿಲ್ಲ. ಇದರ ಬದಲಿಗೆ ಬೆಂಗಳೂರು ಸೇರಿ ಕೆಲ ನಗರಗಳಲ್ಲಿ ಆಸ್ತಿ ಮಾರಾಟದ ದರವು ಮತ್ತಷ್ಟುದುಬಾರಿಯಾಗಿದೆ.
ಭಾರತಕ್ಕೆ 4 ಲಕ್ಷ ಕೋಟಿ ರು. ವಿದೇಶಿ ಬಂಡವಾಳ: ನಿಧಾನಗತಿಯ ಈಕ್ವಿಟಿ ಹೂಡಿಕೆ ಪರಿಣಾಮ 2021ರ ಏಪ್ರಿಲ್-ನವೆಂಬರ್‌ನಲ್ಲಿ 4 ಲಕ್ಷ ಕೋಟಿ ರಯ. ವಿದೇಶಿ ನೇರ ಬಂಡವಾಳ ಹರಿದುಬಂದಿದೆ. ಇದರಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಅತಿಹೆಚ್ಚು 52,200 ಕೋಟಿ ರು. ನೇರ ಬಂಡವಾಳವನ್ನು ಸೆಳೆದಿದೆ.
ಸೆಮಿಕಂಡಕ್ಟರ್ ಹಬ್ ಮಾಡಲು ಯೋಜನೆ: ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ಅತ್ಯಗತ್ಯವಾಗಿರುವ ಸೆಮಿಕಂಡಕ್ಟರ್ ಚಿಪ್‌ಗಳ ಪೂರೈಕೆ ಕೊರತೆಯು ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಆದರೆ ದೇಶೀಯವಾಗಿ ಸೆಮಿಕಂಡಕ್ಟರ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಆರಂಭಿಸಿದ 75000 ಕೋಟಿ ರು ಮೊತ್ತದ ಉತ್ಪಾದನೆÜ ಆಧರಿತ ಪ್ರೋತ್ಸಾಹಕ ಯೋಜನೆಯು ಮುಂದಿನ ದಿನಗಳಲ್ಲಿ ದೇಶವನ್ನು ಸೆಮಿಕಂಡಕ್ಟರ್ ಹಬ್ ಆಗಿ ಮಾಡಲಿದೆ.
ಇದನ್ನೂ ಓದಿ: Economic Survey 2022: ಕೋವಿಡ್ ನಡುವೆಯೂ ದೇಶದ ಆರ್ಥಿಕಾಭಿವೃದ್ಧಿ ದರ ದಾಖಲೆ ಬೆಳವಣಿಗೆ!
5 ಲಕ್ಷ ಕೋಟಿ ಡಾಲರ್ ಆರ್ಥಿಕತೆ: 2025ರ ವೇಳೆಗೆ ಭಾರತವು 5 ಲಕ್ಷ ಕೋಟಿ ಡಾಲರ್‌ನ ಆರ್ಥಿಕತೆಯಾಗಿ ಹೊರಹೊಮ್ಮಲು ಸರ್ಕಾರ ಮುಂದಿನ 3 ವರ್ಷಗಳಲ್ಲಿ ಮೂಲಸೌಕರ್ಯ ವಲಯದಲ್ಲಿ ಒಟ್ಟಾರೆ 105 ಲಕ್ಷ ಕೋಟಿ ರು. ಹೂಡಿಕೆ ಮಾಡಬೇಕು. 2017-18ರಲ್ಲಿ ಭಾರತ ಮೂಲಸೌಕರ್ಯ ವಲಯಕ್ಕೆ 1.1 ಲಕ್ಷ ಕೋಟಿ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಇದನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕಾದ ಅಗತ್ಯವಿದೆ.
ಬೆಳೆ ವೈವಿಧ್ಯ, ಸಂಬಂಧಿತ ವಲಯ, ಪರ್ಯಾಯ ರಸಗೊಬ್ಬರ: ಕೋವಿಡ್‌ನಿಂದ ಹೆಚ್ಚಿನ ಹಾನಿಗೊಳಗಾದ ಕ್ಷೇತ್ರಗಳ ಪೈಕಿ ಕೃಷಿ ವಲಯ ಕೂಡಾ ಒಂದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ವಲಯ ಶೇ.3.9ರಷ್ಟುಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಬೆಳೆ ವೈವಿಧ್ಯ ಪದ್ಧತಿ ಜಾರಿ, ಕೃಷಿ ಸಂಬಂಧಿತ ವಲಯಗಳಿಗೆ ನೆರವು, ಪರ್ಯಾಯ ರಸಗೊಬ್ಬರವಾದ ನ್ಯಾನೋ ಯೂರಿಯಾ ಬಳಕೆಗೆ ಉತ್ತೇಜನ ನೀಡಬೇಕು. ಕೃಷಿ ವಲಯದಲ್ಲಿ ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಾವಯವ ಕೃಷಿ, ಡ್ರೋನ್ ಬಳಕೆಗೆ ಒತ್ತು ನೀಡಬೇಕು.
ಇನ್ನಷ್ಟುಖಾಸಗೀಕರಣಕ್ಕೆ ಸಮೀಕ್ಷೆ ಸಲಹೆ: ಇತ್ತೀಚಿನ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಬಂಡವಾಳ ಹಿಂಪಡೆತ ಪ್ರಕ್ರಿಯೆಯಲ್ಲಿ ದೊಡ್ಡ ಯಶಸ್ಸು ಎಂದಿರುವ ವರದಿ, ಇದು ಇತರೆ ಉದ್ಯಮಗಳ ಖಾಸಗೀಕರಣಕ್ಕೆ ಸರ್ಕಾರಕ್ಕೆ ನೈತಿಕ ಬೆಂಬಲ ನೀಡಲಿದೆ. ಎಲ್ಲಾ ವಲಯಗಳಲ್ಲೂ ಖಾಸಗಿ ಬಂಡವಾಳ ಹೆಚ್ಚಿಸುವ ನಿಟ್ಟಿನಲ್ಲಿ ಉದ್ಯಮ ವಲಯದಲ್ಲಿ ಸರ್ಕಾರಿ ಕ್ಷೇತ್ರದ ಸಂಸ್ಥೆಗಳ ಪಾತ್ರಗಳ ಬಗ್ಗೆ ಕೇಂದ್ರ ಸರ್ಕಾರ ತನ್ನ ನೀತಿಯನ್ನು ಮರು ಪರಿಶೀಲಿಸಬೇಕಾದ ಅಗತ್ಯವಿದೆ.
ಟೆಲಿಕಾಂ ವಲಯ ಇನ್ನಷ್ಟು ಬೆಳವಣಿಗೆ: ಟೆಲಿಕಾಂ ವಲಯದಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು 4ಜಿ ಸೇವೆಯನ್ನು ಇನ್ನಷ್ಟುವಿಸ್ತರಿಸಲು ನೆರವು ನೀಡಲಿದೆ, ಹೊಸ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ ಮತ್ತು ದೇಶದಲ್ಲಿ 5ಜಿ ಸೇವೆ ಆರಂಭಿಸಲು ಅಗತ್ಯವಾದ ಪರಿಸರವನ್ನು ನಿರ್ಮಿಸಲಿದೆ. ಟೆಲಿಕಾಂ ವಲಯದ ಸೇವೆಗಳನ್ನು ಎಲ್ಲರೂ ಬಳಸುವ ದರಕ್ಕೆ ಲಭ್ಯವಾಗುವಂತೆ ಮಾಡಿದೆ.