ಕಂಡಿರಾ, ಭಾರತೀಯ ಸೈನಿಕರ ಅಚ್ಚುಮೆಚ್ಚಿನ ರಾಯಲ್ ಎನ್‌ಫೀಲ್ಡ್ ಮ್ಯೂಸಿಯಂ!?

35 ವರ್ಷಗಳಿಂದ ಕಂಪನಿಯ ಜೊತೆ ನಂಟಿರುವ ಬ್ರಿಟನ್ನಿಗ ಗಾರ್ಡನ್ ಮೇ ಸಾಹಸವಿದು. ಎಲ್ಲರ ಅಚ್ಚುಮೆಚ್ಚಿನ ಬೈಕಿನ ಇತಿಹಾಸ ಹೇಳುವ ಮ್ಯೂಸಿಯಂ ಇಲ್ಲಿದೆ. 

trust worty bike of indian army royal enfield museum in chennai tamilnadu

- ಆರ್‌ಕೆಬಿ

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಗಡಿ ಕಾಯುವ ಯೋಧರಿಗಾಗಿ ಎಂಥ ಪ್ರದೇಶದಲ್ಲೂ ಲೀಲಾಜಾಲವಾಗಿ ಓಡಾಡಬಲ್ಲ ದ್ವಿಚಕ್ರವಾಹನಕ್ಕಾಗಿ ಭಾರತ ಸರ್ಕಾರ ಹುಡುಕಾಟ ನಡೆಸಿತು. ಆಗ ಸಿಕ್ಕಿದ್ದೇ ರಾಯಲ್ ಎನ್‌ಫೀಲ್ಡ್ ಬೈಕು. 1954ರಲ್ಲಿ ಭಾರತ ಸರ್ಕಾರ 350 ಸಿಸಿ ಬೈಕುಗಳನ್ನು ಒದಗಿಸುವಂತೆ ರಾಯಲ್ ಎನ್‌ಫೀಲ್ಡ್ ಗೆ ಕೋರಿಕೆ ಸಲ್ಲಿಸಿತು. ಮರುವರ್ಷವೇ ಕಂಪನಿಯ ಘಟಕ ಚೆನ್ನೈನಲ್ಲಿ (ಆಗಿನ ಮದ್ರಾಸು) ತಲೆ ಎತ್ತಿತು. ಹಾಗೆ ಬ್ರಿಟನ್ ಸಂಜಾತ ರಾಯಲ್ ಎನ್‌ಫೀಲ್ಡ್ ಭಾರತಕ್ಕೆ ಕಾಲಿಟ್ಟೇ ಈಗ ಹತ್ತಿರ ಹತ್ತಿರ 70 ವರ್ಷ. ರಾಯಲ್ ಎನ್‌ಫೀಲ್ಡ್ ನ ಬುಲೆಟ್ 350, ಕ್ಲಾಸಿಕ್ 350 ಈಗಲೂ ಗುಡು ಗುಡು ಪ್ರಿಯರ ನೆಚ್ಚಿನ ಮಾದರಿಗಳು. ಕಳೆದ 7 ದಶಕಗಳಲ್ಲಿ ಕಂಪನಿ ಭಾರತದಲ್ಲಿ ಬೆಳೆದ ಹಾಗೂ ಅದಕ್ಕೂ ಮುನ್ನ 2 ದಶಕಗಳ ಕಾಲ ಬ್ರಿಟನ್ನಿನಲ್ಲಿ ಹುಟ್ಟಿ ಬೆಳೆದ ಇತಿಹಾಸವನ್ನು ರಾಯಲ್ ಎನ್‌ಫೀಲ್ಡ್ ಜತನದಿಂದ ಕಾಪಿಟ್ಟುಕೊಂಡಿದೆ. ಚೆನ್ನೈನ ತನ್ನ ಘಟಕವೊಂದರಲ್ಲಿ ವಿಶಿಷ್ಟ ವಸ್ತು ಸಂಗ್ರಹಾಲಯವನ್ನೇ ಸ್ಥಾಪಿಸಿದೆ.

ಚೆನ್ನೈನಲ್ಲೇ ಇವೆ 3 ಘಟಕಗಳು
ದಿಲ್ಲಿ ಬಳಿಯ ಗುರುಗ್ರಾಮದಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯ ಕಾರ್ಖಾನೆ ಇರುವುದು ತಮಿಳುನಾಡಿನಲ್ಲಿ. ಚೆನ್ನೈನ ಉತ್ತರಕ್ಕೆ 15 ಕಿ.ಮೀ. ದೂರದ ತಿರುವೊಟ್ಟಿಯೂರಿನಲ್ಲಿ 1955ರಲ್ಲಿ ಕಂಪನಿ ತನ್ನ ಮೊದಲ ಘಟಕ ಆರಂಭಿಸಿತು. ಬಿಡಿ ಭಾಗಗಳನ್ನು ಇಂಗ್ಲೆಂಡಿನಿಂದ ತರಿಸಿ ಇಲ್ಲಿ ಜೋಡಣೆ ನಡೆಯುತ್ತಿತ್ತು. ವರ್ಷಕ್ಕೆ 700-800 ಬೈಕುಗಳನ್ನು ಸಿದ್ಧಪಡಿಸುವ ಸಂಪೂರ್ಣ ಮಾನವಾಧರಿತ ಘಟಕವಾಗಿತ್ತು ಅದು. ಬಳಿಕ 2013ರಲ್ಲಿ ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 70 ಕಿ.ಮೀ. ದೂರದ ವರಗಡಮ್ ಎಂಬಲ್ಲಿನ ಕೈಗಾರಿಕಾ ಪ್ರದೇಶದ 50 ಎಕರೆ ಜಾಗದಲ್ಲಿ ತನ್ನ 2ನೇ ಘಟಕ ಆರಂಭಿಸಿತು. 2017ರಲ್ಲಿ ಚೆನ್ನೈನಿಂದ 50 ಕಿ.ಮೀ. ಪಶ್ಚಿಮಕ್ಕೆ ವಲ್ಲಂ ವಡಗಲ್ ಎಂಬಲ್ಲಿ 65 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ 3ನೇ ಘಟಕ ಆರಂಭಿಸಿತು. ಇದೀಗ ಕಾಂಚೀಪುರಂ ಬಳಿಕ ಚೆಯ್ಯಾರ್ ಎಂಬಲ್ಲಿ 60 ಎಕರೆ ಪ್ರದೇಶದಲ್ಲಿ 4ನೇ ಘಟಕ ತಲೆ ಎತ್ತುತ್ತಿದ್ದು, ಇಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ.

ಬುಲೆಟ್ ಟ್ಯಾಂಕಿಗೆ ಕೈಯಲ್ಲೇ ಪೇಂಟಿಂಗ್!

ಬೆರಗು ಮೂಡಿಸುವ ಮ್ಯೂಸಿಯಂ
ಭಾರತದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿ ವಲ್ಲಂ ವಡಗಲ್ ಘಟಕದಲ್ಲಿ ವಿಶಿಷ್ಟ ವಸ್ತು ಸಂಗ್ರಹಾಲಯವನ್ನೇ ತೆರೆದಿದೆ. ರಾಯಲ್ ಎನ್‌ಫೀಲ್ಡ್ ಬೈಕುಗಳ ಬಗ್ಗೆ ತೀರದ ಮೋಹ ಹೊಂದಿರುವ, ಸ್ವತಃ ಬೈಕ್ ರೈಡರ್ ಆಗಿರುವ ಬ್ರಿಟನ್ ಮೂಲದ ಗಾರ್ಡನ್ ಮೇ ಕನಸಿನ ಕೂಸು ಇದು. ಸುಮಾರು 35 ವರ್ಷಗಳಿಂದ ಕಂಪನಿ ಜೊತೆಗೆ ಬಾಂಧವ್ಯ ಹೊಂದಿರುವ ಗಾರ್ಡನ್ ಮೇ, ರಾಯಲ್ ಎನ್‌ಫೀಲ್ಡ್ ಬೈಕುಗಳ ಬಗ್ಗೆ ಅನೇಕ ಪುಸ್ತಕಗಳನ್ನೇ ಬರೆದಿದ್ದಾರೆ. www.royalenfieldbooks.com ಎಂಬ ವೆಬ್ ಸೈಟನ್ನೂ ಅವರ ನೇತೃತ್ವದಲ್ಲಿ ರಚಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಇತಿಹಾಸದ ಬಗ್ಗೆ ಇಂಚಿಂಚೂ ಮಾಹಿತಿ ಹೊಂದಿರುವ ಅವರು, ಅತೀವ ಕಾಳಜಿಯಿಂದ ಈ ವಸ್ತು ಸಂಗ್ರಹಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮೇಡ್ ಇನ್ ಇಂಡಿಯಾ, ಬೈ ಮೈಲ್ಸ್ ದ ಬೆಸ್ಟ್, ರಾಯಲ್ ಎನ್‌ಫೀಲ್ಡ್ - ದ ಲೆಜೆಂಡ್ ರೈಡ್ಸ್ ಆನ್ ಮತ್ತಿತರೆ ಕೃತಿಗಳನ್ನು ರಚಿಸಿರುವ ಇವರು 2008ರಲ್ಲಿ ತಮ್ಮ 1953 ಮಾಡೆಲ್ ನ 500 ಸಿಸಿ ಬುಲೆಟ್ ನಲ್ಲಿ ಬ್ರಿಟನ್ನಿನ ಮ್ಯಾಂಚೆಸ್ಟರ್ ನಿಂದ ಚೆನ್ನೈವರೆಗೆ ಸುಮಾರು 13500 ಕಿ.ಮೀ. ದೂರ ಕ್ರಮಿಸಿದ ದಾಖಲೆ ಹೊಂದಿದ್ದಾರೆ.

ಇತಿಹಾಸಕಾರ, ಇತಿಹಾಸ ಚಿತ್ರಣ
ವಲ್ಲಂ ವಡಗಲ್ ಘಟಕಕ್ಕೆ ಭೇಟಿ ನೀಡುವ ಆಹ್ವಾನಿತರಿಗೆ ತಮ್ಮದೇ ಧಾಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಇತಿಹಾಸವನ್ನು ಗಾರ್ಡನ್ ವರ್ಣಿಸುವುದನ್ನು ನೋಡುವುದೇ ಚೆಂದ. ಲಭ್ಯವಿರುವ ತಂತ್ರಜ್ಞಾನವನ್ನೂ ಇದಕ್ಕಾಗಿ ಸಮರ್ಪಕವಾಗಿ ಬಳಸುವ ಅವರು ಸ್ಲೈಡ್ ಶೋ ಮೂಲಕ ನೋಡುಗರನ್ನು ಮಂತ್ರಮುಗ್ಧರಾಗಿಸುತ್ತಾರೆ. ಅಲ್ಲದೆ, ಪಕ್ಕದಲ್ಲೇ ಇರುವ 90 ವರ್ಷಗಳ ವಿವಿಧ ರಾಯಲ್ ಎನ್‌ಫೀಲ್ಡ್ ಬೈಕುಗಳ ಸಂಗ್ರಹವನ್ನು ಒಂದೊಂದಾಗಿ ವಿವರಿಸುತ್ತಾರೆ. 1930ರ ದಶಕದ ಆರಂಭಿಕ ವಿನ್ಯಾಸದಿಂದ ಹಿಡಿದು 2010ರವರೆಗಿನ ಹೊಸ ವಿನ್ಯಾಸದ ಬೈಕುಗಳ ವರೆಗೆ ಒಂದೊಂದರ ಇತಿಹಾಸವನ್ನೂ ವಿವರವಾಗಿ ನೀಡುತ್ತಾರೆ ಗಾರ್ಡನ್. ಸದ್ಯಕ್ಕೆ ಕೆಲ ಆಹ್ವಾನಿತರು, ಆಯ್ದ ಗ್ರಾಹಕರಿಗೆ ಮಾತ್ರ ಈ ವಸ್ತು ಸಂಗ್ರಹಾಲಯ ವೀಕ್ಷಣೆಗೆ ಲಭ್ಯವಿದೆ. ಮುಂದೆ ರಾಯಲ್ ಎನ್‌ಫೀಲ್ಡ್ ಆಸಕ್ತರಿಗೂ ಇದನ್ನು ತೆರೆಯುವ ಇಂಗಿತವನ್ನು ಕಂಪನಿ ವ್ಯಕ್ತಪಡಿಸಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ನೆಲೆ ನಿಂತ ಕಥೆ

ವಿವಿಧ ಎಂಜಿನುಗಳದ್ದೇ ಮ್ಯೂಸಿಯಂ
ಬೈಕುಗಳ ಸಂಗ್ರಹದ ಪಕ್ಕದಲ್ಲೇ ಎಂಜಿನುಗಳದ್ದೇ ಸಂಗ್ರಹಾಲಯವನ್ನೂ ತೆರೆಯಲಾಗಿದೆ. ಕಾಸ್ಟ್ ಐರನ್ (ಸಿಐ), ಅಲ್ಯೂಮಿನಿಯಂ (ಯುಸಿಇ) ಎಂಜಿನುಗಳಿಂದ ಹಿಡಿದು, ಇತ್ತೀಚಿನ ಸುಧಾರಿತ ಜೆ-ಶ್ರೇಣಿಯ ಎಂಜಿನುಗಳ ವರೆಗೆ ಎಲ್ಲವನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪ್ರತಿಯೊಂದಕ್ಕೂ ವಿವರಣೆ ಲಭ್ಯ. ಅಲ್ಲದೆ, ಎಂಜಿನುಗಳ ಸಕ್ರಿಯ ಕಾರ್ಯನಿರ್ವಹಣಾ ಮಾದರಿಗಳೂ ಇಲ್ಲಿವೆ. ಗುಂಡಿ ಅದುಮಿದರೆ ಎಂಜಿನ್ ಚಾಲೂ ಆಗುತ್ತದೆ. ಬೈಕಿಗೆ ಅಳವಡಿಸಿದ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರತ್ಯಕ್ಷ ಅನುಭವವನ್ನು ಇಲ್ಲಿ ಪಡೆಯಬಹುದಾಗಿದೆ. 

 

trust worty bike of indian army royal enfield museum in chennai tamilnadu

ತೇಗದ ಮರದ ಬುಲೆಟ್ ನೋಡಿ
ಇದಲ್ಲದೆ, ಕೇರಳದ ರಾಯಲ್ ಎನ್‌ಫೀಲ್ಡ್ ಪ್ರೇಮಿಯೊಬ್ಬ ತೇಗದ ಮರ ಬಳಸಿ ತಯಾರಿಸಿರುವ ಬುಲೆಟ್ 350 ಬೈಕಿನ ಕುಸುರಿ ಕೆತ್ತನೆಯ ಮಾದರಿಯನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಸ್ಕ್ರೂ ಸಮೇತ ಈ ಮಾದರಿಯ ಪ್ರತಿಯೊಂದೂ ಭಾಗ ತೇಗದ ಮರದಿಂದ ತಯಾರಿಸಲಾದದ್ದು ಎಂಬುದು ವಿಶೇಷ. ಜೊತೆಗೆ, ಸೇನೆಗೆ ನೀಡಲಾಗಿದ್ದ ಹಳೇ ಕಾಲದ ಬುಲೆಟ್ 350, ಸೇನಾ ಸಿಬ್ಬಂದಿ ಸಾಹಸ ಪ್ರದರ್ಶನಕ್ಕೆಂದು ಬಳಸುವ ಟಾರ್ಪೆಡೋ ಬೈಕುಗಳು, ಸರ್ಕಸ್ ನಲ್ಲಿ ಬಳಸುವಂಥ ಬುಲೆಟ್ ಗಳು, ಬುಲೆಟ್ ಪ್ರೇಮಿಗಳು ತಮ್ಮ ಅಭಿರುಚಿಗೆ ತಕ್ಕಂತೆ ಮರುವಿನ್ಯಾಸ ಮಾಡಿದ ಬೈಕುಗಳ ಮಾದರಿಗಳು... ಹೀಗೆ ಹತ್ತು ಹಲವು ವಿಶಿಷ್ಟತೆ ಈ ವಸ್ತು ಸಂಗ್ರಹಾಲಯದ್ದು.

ಹೊಸ ಅವತಾರದಲ್ಲಿ ಹಳೇ ಗುಡು ಗುಡು! ನವ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಬುಲೆಟ್ 350

ಅಂದು ಎಂಜಿನಿಯರ್, ಇಂದು ಸಿಇಒ
ಗಾರ್ಡನ್ ಮೇ ಸಂಗ್ರಹದಲ್ಲಿ ಇನ್ನೊಂದು ವಿಶಿಷ್ಟ ಚಿತ್ರವಿದೆ. ಅದು 1994ರದ್ದು. ಚಿತ್ರದ ಮುನ್ನೆಲೆಯಲ್ಲಿ ಮಾರುಕಟ್ಟೆಗೆ ತೆರಳಲು ಸಿದ್ಧವಾಗಿರುವ ಬುಲೆಟ್ 350 ಬೈಕು ಕಾಣಿಸುತ್ತದೆ. ಹಿನ್ನೆಲೆಯಲ್ಲಿ ಒಬ್ಬ ಕಾರ್ಮಿಕ ಕೈಗಾಡಿಯಲ್ಲಿ ಎಂಜಿನ್ ಒಂದನ್ನು ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಸಾಗಿಸುತ್ತಿರುತ್ತಾನೆ. ಆ ಕಾಲದಲ್ಲಿ ಸ್ವಯಂಚಾಲಿತ ಯಂತ್ರಗಳ ಸಹಾಯವಿಲ್ಲದೆ ಪ್ರತಿಯೊಂದನ್ನೂ ಕಾರ್ಮಿಕರ ನೆರವಿನಿಂದಲೇ ಮಾಡಬೇಕಾಗಿತ್ತು ಎಂಬುದನ್ನು ಸಾರುವ ಚಿತ್ರವದು. ಆದರೆ, ಆ ಚಿತ್ರದ ವೈಶಿಷ್ಟ್ಯ ಅಲ್ಲಿಗೆ ನಿಲ್ಲುವುದಿಲ್ಲ. ಆ ಚಿತ್ರದಲ್ಲೊಬ್ಬ ಯುವ ಎಂಜಿನಿಯರ್ ನಡೆದುಕೊಂಡು ಬರುತ್ತಿರುವ ದೃಶ್ಯವಿದೆ. ಆತ ಯಾರು ಗೊತ್ತೆ? ರಾಯಲ್ ಎನ್‌ಫೀಲ್ಡ್ ಕಂಪನಿಯ ಈಗಿನ ಸಿಇಒ ಬಿ.ಗೋವಿಂದರಾಜನ್!

ಒಂದು ಎಂಜಿನ್, 256 ಬಿಡಿಭಾಗ!
ಇತ್ತೀಚೆಗೆ ಬಿಡುಗಡೆಯಾದ ಜೆ-ಶ್ರೇಣಿಯ 350 ಸಿಸಿ ಎಂಜಿನ್ ಗಳಲ್ಲಿ ಒಟ್ಟು 256 ಬಿಡಿಭಾಗಗಳಿವೆಯಂತೆ. ಈ ಬಿಡಿಭಾಗಗಳನ್ನೇ ಬಳಸಿ, ಒಂದೊಂದಾಗಿ ಜೋಡಿಸಿ ಮಾನವಾಕೃತಿಯನ್ನು ರಚಿಸಿದ್ದಾರೆ ಅಲ್ಲಿನ ಕಲಾಪ್ರೇಮಿ ಸಿಬ್ಬಂದಿಯೋರ್ವರು. ಇದಂತೂ ವಲ್ಲಂ ವಡಗಲ್ ಘಟಕಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಬೈಕ್ ಕುತೂಹಲಿಯ ಗಮನ ಸೆಳೆಯದೆ ಇರುವುದಿಲ್ಲ.

ಕೈಗೆಟುಕುವ ದರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಲಾಂಚ್, ಇಲ್ಲಿದೆ ಅತ್ಯಾಕರ್ಷಕ್ ಬೈಕ್ ವಿವರ!

Latest Videos
Follow Us:
Download App:
  • android
  • ios