ಹೊಸ ಅವತಾರದಲ್ಲಿ ಹಳೇ ಗುಡು ಗುಡು! ನವ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಬುಲೆಟ್ 350
ರಾಯಲ್ ಎನ್‌ಫೀಲ್ಡ್ ಎಂದರೆ ಕೆಲವರಿಗೆ ರೋಮಾಂಚನವಾಗುತ್ತೆ. ಈ ಬೈಕು, ಆ ಸೌಂಡು, ಅದರ ಗತ್ತು ಗಮ್ಮತ್ತೇ ಬೇರೆ. ಹಲವು ವಿನ್ಯಾಸಗಳಲ್ಲಿ ಬಂದರೂ ಇದರ ಹಳೇ ಲುಕ್‌ಗೆ ಚ್ಯುತಿ ಬಾರದಂತೆ ನೋಡಿಕೊಳ್ಳಲಾಗುತ್ತದೆ. ಇದೀಗ ಹೊಸ ವಿನ್ಯಾಸ ಹೇಗಿದೆ?
- ಆರ್‌ಕೆಬಿ
ಬ್ರಿಟಿಷ್ ನೆಲದಲ್ಲಿ ಹುಟ್ಟಿ ಇದೀಗ ಭಾರತದ ಸೊತ್ತಾಗಿರುವ ವಿಶ್ವಖ್ಯಾತ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಬೈಕುಗಳು ಇದೀಗ ದೇಶಾದ್ಯಂತ ಜನಪ್ರಿಯ. ಇಂಗ್ಲೆಂಡ್‌ನ ರೆಡಿಚ್ ಎಂಬಲ್ಲಿ 1901ರಲ್ಲಿ ಆರಂಭವಾದ ಸಂಸ್ಥೆ ಕಾಲನ ಹೊಡೆತಕ್ಕೆ ತತ್ತರಿಸಿ 1971ರಲ್ಲಿ ಮುಚ್ಚಿ ಹೋದರೆ, ಭಾರತೀಯ ಸೇನೆಯ ಬೇಡಿಕೆ ಮೇರೆಗೆ 1955ರಲ್ಲಿ ಭಾರತಕ್ಕೆ ಕಾಲಿಟ್ಟ ಸಂಸ್ಥೆ 68 ವರ್ಷ ಕಳೆದರೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ತನ್ನ ಸಾಂಪ್ರದಾಯಿಕ 350 ಸಿಸಿ ಎಂಜಿನ್ ಜೊತೆಗೆ 650 ಸಿಸಿ ವರೆಗೂ ವಿವಿಧ ಸಾಮರ್ಥ್ಯದ ಎಂಜಿನ್‌ಗಳು, ವಿವಿಧ ಮಾದರಿಗಳು, ವಿವಿಧ ವಿನ್ಯಾಸಗಳೊಂದಿಗೆ ಹರೆಯದ ಯುವಕರಿಂದ ಹಿಡಿದು ವಯೋವೃದ್ಧರವರೆಗೆ ಮೆಚ್ಚುಗೆಗೆ ಪಾತ್ರವಾಗಿದೆ. ಇಂಗ್ಲೆಂಡ್ ಹಾಗೂ ಭಾರತದಲ್ಲಿನ ಒಟ್ಟು 122 ವರ್ಷಗಳ ಕಾರ್ಯನಿರ್ವಹಣಾ ಅವಧಿ ಪರಿಗಣಿಸಿದರೆ, ವಿಶ್ವದಲ್ಲೇ ಅತ್ಯಂತ ಸುದೀರ್ಘ ಕಾಲದಿಂದ ನಿರಂತರವಾಗಿ ಬೈಕು ಉತ್ಪಾದಿಸುತ್ತಿರುವ ಅಗ್ರಗಣ್ಯ ಸಂಸ್ಥೆ ಎಂಬ ಅಗ್ಗಳಿಕೆ ರಾಯಲ್ ಎನ್‌ಫೀಲ್ಡ್ ನದ್ದು.
ಇಂತಿಪ್ಪ ರಾಯಲ್ ಎನ್‌ಫೀಲ್ಡ್, ತನ್ನ ಅತ್ಯಂತ ಹಳೆಯ ಬೈಕ್ ಮಾದರಿಯಾದ ಬುಲೆಟ್ 350 ಅನ್ನು ಹೊಸ ಅವತಾರದಲ್ಲಿ ಪರಿಚಯಿಸಿದೆ. 9 ದಶಕ ಕಳೆದು ಶತಮಾನೋತ್ಸವದತ್ತ ಮುನ್ನುಗ್ಗುತ್ತಾ ವಿಶ್ವದಲ್ಲೇ ಅತ್ಯಂತ ಸುದೀರ್ಘ ಕಾಲದಿಂದ ಉತ್ಪಾದಿಸಲಾಗುತ್ತಿರುವ ಬೈಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬುಲೆಟ್ 350 ಇತ್ತೀಚೆಗೆ ಚೆನ್ನೈನ ರಾಯಲ್ ಎನ್‌ಫೀಲ್ಡ್ ಘಟಕದಲ್ಲಿ ಅನಾವರಣಗೊಂಡಿದೆ.
1932ರಲ್ಲಿ ಇಂಗ್ಲೆಂಡಿನಲ್ಲಿ ಜನ್ಮ ತಾಳಿ, 1955ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಉತ್ಪಾದನೆಗೊಂಡ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಇದೀಗ ಭಾರತದಲ್ಲಿ ಮಾತ್ರ ಉತ್ಪಾದನೆಗೊಳ್ಳುತ್ತಿದೆ. ಕ್ಲಾಸಿಕ್, ಮೀಟಿಯರ್, ಹಂಟರ್, ಹಿಮಾಲಯನ್, ಥಂಡರ್ ಬರ್ಡ್, ಕಾಂಟಿನೆಂಟಲ್, ಇಂಟರ್‌ಸೆಪ್ಟರ್... ಹೀಗೆ ರಾಯಲ್ ಎನ್‌ಫೀಲ್ಡ್ ಬೈಕುಗಳು ನಾನಾ ಅವತಾರಗಳನ್ನು ತಾಳಿದ್ದರೂ, ಬುಲೆಟ್ 350 ಮಾತ್ರ ಸಂಸ್ಥೆಯ ಹೆಗ್ಗುರುತಾಗಿಯೇ ಉಳಿದಿದೆ. ಈ ಐತಿಹಾಸಿಕ ಬೈಕಿನ ಮೂಲ ಛಾಯೆಗೆ ಚ್ಯುತಿ ಬಾರದಂತೆ ಹೊಸ ಮಾದರಿಯನ್ನು ಪರಿಚಯಿಸಲಾಗಿದೆ.
ಕೈಗೆಟುಕುವ ದರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಲಾಂಚ್, ಇಲ್ಲಿದೆ ಅತ್ಯಾಕರ್ಷಕ್ ಬೈಕ್ ವಿವರ!
ಹೊಸತೇನಿದೆ?
2023ರ ಬುಲೆಟ್ 350ರಲ್ಲಿ ಅತ್ಯಂತ ಪ್ರಮುಖ ಬದಲಾವಣೆ ಅಂದರೆ ಕಿಕ್‌ಸ್ಟಾರ್ಟ್‌ಗೆ ಕೊಕ್ ನೀಡಲಾಗಿರುವುದು. ಈಗಾಗಲೇ ಕ್ಲಾಸಿಕ್, ಹಿಮಾಲಯನ್ ಮತ್ತಿತರೆ ಮಾದರಿಗಳಲ್ಲಿ ಕಿಕ್ಕರ್‌ಗೆ ಕೊಕ್ ನೀಡಿ ಕೇವಲ ಬಟನ್ ಸ್ಟಾರ್ಟ್ ನೀಡಲಾಗಿದೆ. ಇದೀಗ ಬುಲೆಟ್ 350 ಮಾದರಿಗೂ ಬಟನ್ ಸ್ಟಾರ್ಟ್ ಮಾತ್ರ ನೀಡಲಾಗಿದೆ. ಕಿಕ್ ಸ್ಟಾರ್ಟ್ ಪ್ರಿಯರಿಗೆ ಇದು ನಿರಾಸೆಯ ವಿಷಯವಾದರೂ, ಕಾಲಕ್ಕೆ ತಕ್ಕಂತೆ ಬೈಕನ್ನು ರೂಪಿಸಿದ್ದೇವೆ ಎಂಬುದು ಸಂಸ್ಥೆಯ ಸಮಜಾಯಿಷಿ.
ಇನ್ನೊಂದು ಪ್ರಮುಖ ಬದಲಾವಣೆ ಎಂಜಿನ್. ಹಳೆಯ ಯುಸಿಇ ಎಂಜಿನ್‌ಗೆ ಗುಡ್ ಬೈ ಹೇಳಿ ಅತ್ಯಾಧುನಿಕ ಜೆ-ಶ್ರೇಣಿಯ ಎಂಜಿನ್ ಪರಿಚಯಿಸಲಾಗಿದೆ. ಇದರಿಂದ ಬೈಕು ವೇಗದಲ್ಲಿದ್ದರೂ ಅದುರುವುದಿಲ್ಲ ಎಂಬುದು ಕಂಪನಿಯ ಭರವಸೆ. ಇದಲ್ಲದೆ, ವಿನ್ಯಾಸದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಎಲ್‌ಸಿಡಿ ಡಿಸ್‌ಪ್ಲೇ, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್‌ನಂಥ ಸಮಕಾಲೀನ ವ್ಯವಸ್ಥೆಗಳು ಬಂದಿವೆ. ಆದರೆ, ಆಕರ್ಷಕ ಹುಲಿ-ಕಣ್ಣು ನೋಟ ಮಾತ್ರ ಹಾಗೆಯೇ ಇದೆ.
ಮೂರು ಮಾದರಿ
ಹೊಸ ಬುಲೆಟ್ 350 ಮೂರು ಮಾದರಿ ಹಾಗೂ ಐದು ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಮಿಲಿಟರಿ ರೆಡ್, ಮಿಲಿಟರಿ ಬ್ಲ್ಯಾಕ್‌ಗೆ ಎಕ್ಸ್ ಶೋರೂಮ್ ದರ 1.74 ಲಕ್ಷ ರು. ಇದ್ದರೆ, ಬುಲೆಟ್ ಸ್ಟ್ಯಾಂಡರ್ಡ್ ಬ್ಲ್ಯಾಕ್, ಮರೂನ್‌ಗೆ 1.97 ಲಕ್ಷ ರು. ಹಾಗೂ ಬುಲೆಟ್ ಬ್ಲ್ಯಾಕ್ ಗೋಲ್ಡ್ ಮಾದರಿಗೆ 2.16 ಲಕ್ಷ ರು. ದರವಿದೆ. ಸೆಪ್ಟೆಂಬರ್ 1ರಿಂದಲೇ ಕರ್ನಾಟಕ ಸೇರಿ ದೇಶಾದ್ಯಂತ ಬುಕಿಂಗ್ ಆರಂಭಗೊಂಡಿದೆ. ಆದರೆ, ಗ್ರಾಹಕರಿಗೆ ವಿತರಣೆ ಇನ್ನಷ್ಟೇ ಶುರುವಾಗಬೇಕಿದೆ.
ರ‍್ಯಾಪಿಡೋ ಬುಕ್ ಮಾಡಿದ್ರೆ ಬಂತು ರಾಯಲ್ ಎನ್‌ಫೀಲ್ಡ್, ರೈಡರ್ ಜಾಬ್ ಬಗ್ಗೆ ತಿಳಿದು ವ್ಯಕ್ತಿ ಶಾಕ್!
2025ರಲ್ಲಿ ಮೊದಲ ಎಲೆಕ್ಟ್ರಿಕ್ ಬೈಕ್
‘ನಮ್ಮ ಬಹುನಿರೀಕ್ಷಿತ ಎಲೆಕ್ಟ್ರಿಕ್ ಬೈಕ್ 2025ರಲ್ಲಿ ಅನಾವರಣಗೊಳ್ಳಲಿದೆ. ರಾಯಲ್ ಎನ್‌ಫೀಲ್ಡ್ ಗ್ರಾಹಕರಿಗೆ ನಿರಾಸೆಯಾಗದಂತೆ ಎಲೆಕ್ಟ್ರಿಕ್ ಬೈಕ್ ರೂಪಿಸುವ ಹೊಣೆ ನಮ್ಮ ಮೇಲಿದೆ. ತೂಕ, ಸಮತೋಲನ ಹಾಗೂ ಬಹುಮುಖ್ಯವಾಗಿ ಬೈಕಿನ ಸುಖಾನುಭವಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವ ಸವಾಲು ನಮ್ಮೆದುರಿಗಿದೆ’ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಸಂಸ್ಥೆಯ ಸಿಇಒ ಬಿ.ಗೋವಿಂದರಾಜನ್.