Asianet Suvarna News Asianet Suvarna News

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ನೆಲೆ ನಿಂತ ಕಥೆ

ರಾಯಲ್ ಎನ್‌ಫೀಲ್ಡ್ ಹೆಸರು ಕೇಳಿದರೆ ಸಾಕು ಕೆಲವರಿಗಂತೂ ರೋಮಾಂಚನ ಎನ್ನುವಂಥ ಫೀಲ್ ಆಗುತ್ತೆ. ಬ್ರಿಟನ್ ಮೂಲದ ಈ ಕಂಪನಿ ಭಾರತಕ್ಕೆ ಬಂದಿದ್ದೇ ಒಂದು ರೋಮಾಂಚನ ಕಥೆ. ಇದರ ಹಿನ್ನೆಲೆ ಇಲ್ಲಿದೆ. 

History and Significance of Establishing the Royal Enfield Factory in India for Military Requirements
Author
First Published Sep 13, 2023, 12:14 PM IST

- ಆರ್‌ಕೆಬಿ
ರಾಯಲ್ ಎನ್‌ಫೀಲ್ಡ್. ಹೆಸರೇ ರೋಮಾಂಚಕ. ಯುವಕರು, ಗೃಹಸ್ಥರು, ಮಧ್ಯವಯಸ್ಕರು, ವಯೋವೃದ್ಧರು, 'ಸಿಟಿ'ಜನ್ ಗಳು, ಹಳ್ಳಿಜನತೆ, ಸುದೀರ್ಘಯಾನಿಗಳು, ಸಾಹಸಯಾತ್ರಿಕರು... ಹೀಗೆ ನಾನಾ ವಿಧದ ಸವಾರರಿಗೆ ಗುಡು ಗುಡು ಬೈಕೆಂದರೆ ಅಚ್ಚುಮೆಚ್ಚು. 80, 90ರ ದಶಕದಲ್ಲಿ ಭಾರತದಲ್ಲಿ ಮನೆಮಾತಾಗಿದ್ದ ರಾಯಲ್ ಎನ್‌ಫೀಲ್ಡ್, 20ನೇ ಶತಮಾನದ ಕೊನೆಯ ಹಾಗೂ 21ನೇ ಶತಮಾನದ ಆರಂಭಿಕ ದಶಕಗಳಲ್ಲಿ ತುಸು ಮಂಕಾಗಿತ್ತು. ಅದರಿಂದೀಚೆಗೆ ಮೈಕೊಡವಿ ಎದ್ದ ಐತಿಹಾಸಿಕ ಕಂಪನಿ ಹಿಂದಿರುಗಿ ನೋಡಿದ್ದೇ ಇಲ್ಲ. ಹಳೆಯ ಹೆಗ್ಗುರುತು, ಹೊಸ ಕಾಲದ ಮೈಮಾಟ, ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹತ್ತು ಹಲವು ಮಾದರಿಗಳಲ್ಲಿ ಬಿಡುಗಡೆಗೊಂಡು ಮತ್ತೆ ಉಚ್ಛ್ರಾಯ ಸ್ಥಿತಿಗೆ ಬಂತು. ಎಷ್ಟರಮಟ್ಟಿಗೆ ಎಂದರೆ 2005ರ ಸುಮಾರಿಗೆ ದೇಶದ ಮೋಟಾರು ಬೈಕು ಮಾರುಕಟ್ಟೆಯಲ್ಲಿ (Indian Motorbike Market) ಶೇ.0.1ರಷ್ಟೂ ಇರದ ರಾಯಲ್ ಎನ್‌ಫೀಲ್ಡ್, ಇದೀಗ ಶೇ.7ರಿಂದ ಶೇ.8ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಅಂದರೆ, ಪ್ರತಿ 100 ಬೈಕುಗಳಲ್ಲಿ 7 ಅಥವಾ 8 ರಾಯಲ್ ಎನ್‌ಫೀಲ್ಡ್! ಹೀಗೆ ಭಾರತದಲ್ಲಿ ಏಳು-ಬೀಳು-ಏಳುಗಳೆಲ್ಲವನ್ನೂ ಕಂಡಿರುವ ಈ ದ್ವಿಚಕ್ರ ವಾಹನ ಸಂಸ್ಥೆಯ ಪಯಣವೇ ಕೌತುಕಮಯ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ...

ಒಂದೂ ಕಾಲು ಶತಮಾನದ ಪಯಣ
ರಾಯಲ್ ಎನ್‌ಫೀಲ್ಡ್ ಸಂಸ್ಥೆ ಜನ್ಮ ತಾಳಿದ್ದು ಬ್ರಿಟನ್ನಿನಲ್ಲಿ. 1901ರಲ್ಲಿ ರೆಡಿಚ್ ನಗರದಲ್ಲಿ ಮೊತ್ತಮೊದಲ ಬೈಕ್ ಉತ್ಪಾದಿಸಿದ ಕಂಪನಿ ತನ್ನ ಅತ್ಯಂತ ಜನಪ್ರಿಯ ಬುಲೆಟ್ ಮಾದರಿಯನ್ನು ಪರಿಚಯಿಸಿದ್ದು 1932ರಲ್ಲಿ. 250, 350, 500 ಸಿಸಿ ಮಾದರಿಗಳಲ್ಲಿ ಲಭ್ಯವಿದ್ದ ಬೈಕು, ಕ್ರಮೇಣ ಮೀಟಿಯರ್, ಕಾನ್ಸ್ಟಲೇಷನ್, ಇಂಟರ್ ಸೆಪ್ಟರ್ ಮಾದರಿಗಳಲ್ಲಿ ಬಂತು. ಬುಲೆಟ್ ಬೈಕುಗಳು ಹೆಚ್ಚಾಗಿ ಮಿಲಿಟರಿ ಪಡೆಗಳಲ್ಲಿ ಬಳಕೆಯಾಗುತ್ತಿದ್ದವು. ಬ್ರಿಟನ್ ಸೇರಿದಂತೆ ಐರೋಪ್ಯ ಮಾರುಕಟ್ಟೆಯಲ್ಲದೆ, ಭಾರತ, ರಷ್ಯಾ, ಅಮೆರಿಕಕ್ಕೂ ರಾಯಲ್ ಎನ್‌ಫೀಲ್ಡ್ ಬೈಕುಗಳು ರಫ್ತಾಗುತ್ತಿದ್ದವು. ಕಾಲಕ್ರಮೇಣ ಜಪಾನ್ ಮೋಟಾರ್ ಬೈಕ್‌ಗಳ ಹೊಡೆತಕ್ಕೆ ಸಿಲುಕಿ ಕಂಪನಿ ಬಾಗಿಲೆಳೆಯಬೇಕಾಯಿತು.

ಹೊಸ ಅವತಾರದಲ್ಲಿ ಹಳೇ ಗುಡು ಗುಡು! ನವ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಬುಲೆಟ್ 350

ಸೇನೆಗಾಗಿ ಬರುತ್ತಿತ್ತು ಬುಲೆಟ್‌
ವಿಶ್ವದ ಇತರೆಡೆಯಂತೆ ಭಾರತೀಯ ಸೇನೆಯೂ (Indian Army) ಬುಲೆಟ್ 350 ಬೈಕುಗಳನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಳ್ಳುತ್ತಿತ್ತು. ಹಿಮಾಲಯದಿಂದ ಮರುಭೂಮಿಯವರೆಗೆ ಎಂತಹುದೇ ಪ್ರದೇಶದಲ್ಲಿ ಸದೃಢವಾಗಿ ಸಾಗಬಲ್ಲದು ಎಂಬ ಕಾರಣಕ್ಕೆ ಬುಲೆಟ್ ಬೈಕುಗಳನ್ನು ಸೇನೆ ಅತೀವವಾಗಿ ನೆಚ್ಚಿಕೊಂಡಿತ್ತು. ಆದರೆ, ಇಂಗ್ಲೆಂಡಿನಿಂದ ಹಡಗಿನಲ್ಲಿ ಭಾರತಕ್ಕೆ ಬರಲು ಹಲವು ತಿಂಗಳುಗಳೇ ಬೇಕಾಗುತ್ತಿತ್ತು. ಸೇನೆಯ ಬೇಡಿಕೆ ಪೂರೈಸಲೆಂದೇ ಭಾರತದಲ್ಲಿ ಮದ್ರಾಸ್ ಮೋಟರ್ಸ್ ಸಹಯೋಗದೊಂದಿಗೆ 1955ರಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಜೋಡಣಾ ಘಟಕ ಆರಂಭವಾಯಿತು. ನಂತರ ಆರೇಳು ವರ್ಷಗಳಲ್ಲಿ ಬಿಡಿಭಾಗವನ್ನೂ ಭಾರತದಲ್ಲೇ ಉತ್ಪಾದಿಸಿ ರಾಯಲ್ ಎನ್‌ಫೀಲ್ಡ್ ಪೂರ್ಣ ಪ್ರಮಾಣದಲ್ಲಿ 'ದೇಸೀ' ಬೈಕ್ ಆಯಿತು. ಸೇನೆಯ ಜತೆಗೆ ಸಾಮಾನ್ಯ ನಾಗರಿಕರೂ ಬುಲೆಟ್ ಖರೀದಿಸಿ ಗುಡು ಗುಡು ಎನ್ನಿಸಿ ಬೀಗಿದರು. ಈಗ 2023. ಕಳೆದ 68 ವರ್ಷಗಳಿಂದ ಭಾರತದಲ್ಲಿ ನಿರಂತರವಾಗಿ ರಾಯಲ್ ಎನ್‌ಫೀಲ್ಡ್ ರಥ ಸಾಗಿದೆ. ಬ್ರಿಟನ್ನಿನಲ್ಲಿ ಅದರ ಆಯುಷ್ಯವನ್ನೂ ಸೇರಿಸಿದರೆ ಬರೋಬ್ಬರಿ 122 ವರ್ಷಗಳ ಪಯಣ ರಾಯಲ್ ಎನ್‌ಫೀಲ್ಡ್ ನದ್ದು.

 

History and Significance of Establishing the Royal Enfield Factory in India for Military Requirements

ಸೀಸನ್ ಮಾಡಿಸಲು ಹಳ್ಳಿ ಸುತ್ತಾಟ!
ಭಾರತೀಯ ಸೇನೆಗೆ ಬುಲೆಟ್ 350 ಬೈಕುಗಳನ್ನು ಪೂರೈಸುವಾಗ ರಾಯಲ್ ಎನ್‌ಫೀಲ್ಡ್ ಕಂಪನಿಗೆ ದೊಡ್ಡ ಸಮಸ್ಯೆಯೊಂದು ಎದುರಾಯಿತಂತೆ. ಸೇನೆಗೆ ಖರೀದಿಸಿದ ತಕ್ಷಣ ಎಷ್ಟು ವೇಗದಲ್ಲಾದರೂ ಅಥವಾ ಹೇಗೆ ಬೇಕಾದರೂ ಬಳಸುವಂಥ ಬೈಕ್ ಬೇಕಿತ್ತಂತೆ. ಆದರೆ, ಬುಲೆಟ್ ಬೈಕುಗಳು ನಿರ್ದಿಷ್ಟ ಕಿಲೋಮೀಟರ್ ಓಡಿ ಸೂಕ್ತ ಸರ್ವಿಸ್ ಗಳು ಆಗುವವರೆಗೆ ಮಿತಿಮೀರಿ ಓಡಿಸುವಂತಿಲ್ಲ. ಅದರಿಂದ ಎಂಜಿನ್ ದುರಸ್ತಿಗೆ ಬರುವ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಎದುರಾಗುವ ಸಾಧ್ಯತೆ ಇತ್ತಂತೆ. ಹಾಗೆ 'ಸೀಸನ್' ಮಾಡುವ ಪುರುಸೊತ್ತು ಸೇನೆಗಾದರೂ ಎಲ್ಲಿತ್ತು? ಈ ಸಮಸ್ಯೆ ನೀಗಿ ಸೇನಾಪಡೆಗೆ 'ರೆಡಿಮೇಡ್' ಬೈಕ್ ಒದಗಿಸುವ ಸಲುವಾಗಿಯೇ ಚೆನ್ನೈ ಫ್ಯಾಕ್ಟರಿಯಲ್ಲಿ ತಯಾರಾದ ಬೈಕುಗಳನ್ನು ಅಲ್ಲಿನ ನೌಕರರಿಗೇ ಕೊಟ್ಟು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಓಡಾಡಿಸಿ 'ಸೀಸನ್' ಮಾಡಿಸಲಾಗುತ್ತಿತ್ತು. ಇದಕ್ಕಾಗಿ ಆ ಸಿಬ್ಬಂದಿಗೆ ಓವರ್ ಟೈಮ್ ಸಂಭಾವನೆಯನ್ನೂ ನೀಡಲಾಗುತ್ತಿತ್ತು ಎನ್ನುತ್ತಾರೆ ರಾಯಲ್ ಎನ್‌ಫೀಲ್ಡ್ ಇತಿಹಾಸಕಾರ ಗಾರ್ಡನ್ ಮೇ!

ಕೈಗೆಟುಕುವ ದರದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಲಾಂಚ್, ಇಲ್ಲಿದೆ ಅತ್ಯಾಕರ್ಷಕ್ ಬೈಕ್ ವಿವರ!

ಸೇನೆಯ ವಿಶ್ವದಾಖಲೆ ಸಾಹಸ!
ಭಾರತೀಯ ಸೇನಾಪಡೆ ಬುಲೆಟ್ ಬೈಕುಗಳನ್ನು ಗಡಿ ಕಾಯಲಷ್ಟೇ ಅಲ್ಲ, ಸಾಹಸ ಪ್ರದರ್ಶನಗಳಿಗೂ ಯಥೇಚ್ಛವಾಗಿ ಬಳಸಿಕೊಂಡಿತು. ಸೇನಾಪಡೆಯ ವಿವಿಧ ಸಾಹಸಿಗಳು ಒಂದಲ್ಲ, ಎರಡಲ್ಲ ಬರೋಬ್ಬರಿ 30ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ಬುಲೆಟ್ ಮೇಲೇರಿ ಬರೆದಿದ್ದಾರೆ. ಬೆಂಗಳೂರಿನಲ್ಲಿರುವ ಸೇನಾಪಡೆಯ ಟಾರ್ನೆಡೋಸ್ ತಂಡವಂತೂ ಬುಲೆಟ್ 500 ಮಾದರಿಯ ಬೈಕೊಂದರಲ್ಲಿ 58 ಜನರನ್ನು ನಿಲ್ಲಿಸಿಕೊಂಡು ಸರಿಸುಮಾರು 1.2 ಕಿ.ಮೀ. ಕ್ರಮಿಸಿ ವಿಶ್ವದಾಖಲೆ ಬರೆದಿದೆ. ಬೈಕೊಂದರಲ್ಲಿ ಗರಿಷ್ಠ ಜನ ಸಾಗಿದ ದಾಖಲೆ ಇಂದಿಗೂ ಟಾರ್ನೆಡೋಸ್ ತಂಡದ ಹೆಸರಿನಲ್ಲೇ ಇದೆ ಎಂಬುದು ಕನ್ನಡಿಗರಿಗೊಂದು ಹೆಗ್ಗಳಿಕೆ.
 

Follow Us:
Download App:
  • android
  • ios