ಟೆಸ್ಲಾ ಕಾರು, ಟೆಸ್ಲಾ ಸೈಬರ್ ಟ್ರಕ್ ಸೇರಿದಂತೆ ಟೆಸ್ಲಾ ಉತ್ಪನ್ನಗಳ ಬೆಲೆ ಲಕ್ಷ ಲಕ್ಷ ರೂಪಾಯಿ. ಇದೀಗ ಮೊದಲ ಬಾರಿಗೆ ಅತೀ ಕಡಿಮೆ ಬೆಲೆಯ ಉತ್ಪನ್ನ ಬಿಡುಗಡೆ ಮಾಡಿದೆ. ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಬಿಡುಗಡೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಬುಕಿಂಗ್ ತೆರೆಯಲಾಗಿದೆ.
ನ್ಯೂಯಾರ್ಕ್ (ಜು.21) ಟೆಸ್ಲಾ ವಿಶ್ವದ ಅತೀ ದೊಡ್ಡ ಹಾಗೂ ನಂಬರ್ 1 ಎಲೆಕ್ಟ್ರಿಕ್ ವಾಹನ ಕಂಪನಿ. ಟೆಸ್ಲಾ ಕಾರುಗಳು ಭಾರತದಲ್ಲೂ ಲಭ್ಯವಿದೆ. ಇತ್ತೀಚೆಗಷ್ಟೇ ಟೆಸ್ಲಾ ಭಾರತದಲ್ಲಿ ಮಾರಾಟ ಆರಂಭಿಸಿದೆ. ಇದೀಗ ಟೆಸ್ಲಾ ತನ್ನ ಕಂಪನಿಯ ಅತ್ಯಂತ ಕಡಿಮೆಯ ಬೆಲೆಯ ಪ್ರಾಡಕ್ಟ್ ಬಿಡುಗಡೆ ಮಾಡಿದೆ. ಹೌದು, ಟೆಸ್ಲಾ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಬಿಡುಗಡೆ ಮಾಡಿದೆ. ಸೈಕಲ್ ರೂಪದಲ್ಲಿ ಇದ್ದರೂ ಹೊಸ ವಿನ್ಯಾಸ, ಹೊಸ ಶೈಲಿಯಲ್ಲಿ ನೂತನ ಪೆಡಲ್ ಫ್ರೀ ಬೈಕ್ ಲಾಂಚ್ ಮಾಡಲಾಗಿದೆ. ಬಜೆಟ್ ಫ್ರೆಂಡ್ಲಿ ಬೈಕ್ ಇದಾಗಿದೆ. ಆನ್‌ಲೈನ್ ಮೂಲಕ, ಟೆಸ್ಲಾ ಸ್ಟೋರ್ ಮೂಲಕ ಈ ಬೈಕ್ ಖರೀದಿಸಬಹುದು. ಟೆಸ್ಲಾ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಬೆಲೆ ಕೇವಲ 21,000 ರೂಪಾಯಿ ಮಾತ್ರ.
ಏನಿದು ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್
ಟೆಸ್ಲಾ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಒಟ್ಟು ಬೆಲೆ ಕೇವಲ 21 ಸಾವಿರ ರೂಪಾಯಿ. ಇದು ಪೆಡಲ್ ಇಲ್ಲದ ಬ್ಯಾಲೆನ್ಸ್ ಬೈಕ್. ಈ ಬೈಕ್‌ನಲ್ಲಿ ಯಾವುದೇ ಪೆಡಲ್ ಇರುವುದಿಲ್ಲ, ಮೋಟಾರ್ ಇರುವುದಿಲ್ಲ. ಚೈನ್ ಇರುವುದಿಲ್ಲ. ವಿಶೇಷವಾಗಿ ಈ ಬ್ಯಾಲೆನ್ಸ್ ಪೈಕ್ ಮಕ್ಕಳಿಗಾಗಿ ತಯಾರಿಸಲಾಗಿದೆ. ಮಕ್ಕಳು ಪೆಡಲ್ ಬೈಕ್ ಹತ್ತುವ ಮುನ್ನ ಬ್ಯಾಲೆನ್ಸ್ ಮಾಡಲು ಈ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಮಾರುಕಟ್ಟೆಗೆ ತರಲಾಗಿದೆ. ಮಕ್ಕಳು ತಮ್ಮ ಕಾಲುಗಳ ಸಹಾಯದಿಂದ ಈ ಬೈಕ್ ಮೂಲಕ ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ. ಇದರಿಂದ ಮಕ್ಕಳು ಬೇಗನೆ ಟು ವ್ಹೀಲ್ ಬ್ಯಾಲೆನ್ಸ್ ಕಲಿಯುತ್ತಾರೆ. ಇಷ್ಟೇ ಅಲ್ಲ ಅಷ್ಟೇ ಸುಲಭವಾಗಿ ಪೆಡಲ್ ಬೈಕ್ ಸವಾರಿ ಮಾಡಲು ಸಾಧ್ಯಾವಾಗಲಿದೆ. ಹೀಗಾಗಿ ಮಕ್ಕಳಿಗಾಗಿ ಟೆಸ್ಲಾ ಹೊಸ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಲಾಂಚ್ ಮಾಡಿದೆ.
2 ರಿಂದ 5 ವರ್ಷದೊಳಗಿನ ಮಕ್ಕಳಿಗಾಗಿ ಈ ಇದನ್ನು ತಯಾರಿಸಲಾಗಿದೆ. ಬೈಕ್ ಫ್ರೇಮ್‌ಗಳು ಮ್ಯಾಗ್ನಿಶಿಯಂ ಅಲೋಯ್‌ನಿಂದ ತಯಾರಿಸಲಾಗಿದೆ. ಹೀಗಾಗಿ ಮಕ್ಕಳಿಗೆ ಈ ಬೈಕ್ ಬ್ಯಾಲೆನ್ಸ್ ಮಾಡಲು ಸುಲಭವಾಗಲಿದೆ. ಅಂದರೆ ಬೈಕ್ ಹೆಚ್ಚು ತೂಕವಿರುವುದಿಲ್ಲ. ಹೀಗಾಗಿ ಬೈಕ್ ಎತ್ತಲು, ತಿರುಗಿಸಲು ಮಕ್ಕಳಿಗೆ ಸಾಧ್ಯವಾಗಲಿದೆ. ಸೀಟುಗಳನ್ನು ಎತ್ತರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲು ಸಾಧ್ಯವಿದೆ. ರೈಡರ್ ಗರಿಷ್ಠ ತೂಕ 35 ಕೆಜಿ ಸಾಮರ್ಥ್ಯ ಹೊಂದಿದೆ. ಫ್ರೇಮ್‌ನಲ್ಲಿ ಟೆಸ್ಲಾ ಲೋಗೋ ಬ್ರ್ಯಾಂಡ್ ನೀಡಲಾಗಿದೆ.

ಟೆಸ್ಲಾದಿಂದ ಬರುತ್ತಿದೆಯಾ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್
ಟೆಸ್ಲಾ ಮಕ್ಕಳಿಗಾಗಿ ಪೆಡಲ್ ಫ್ರೀ ಬೈಕ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುವ ಸಾಧ್ಯತೆಗಳ ಕುರಿತು ಚರ್ಚೆಯಾಗುತ್ತಿದೆ. ಸದ್ಯ ಟೆಸ್ಲಾದ ಕಾರು ಹಾಗೂ ಟೆಸ್ಲಾ ಸೈಬರ್ ಟ್ರಕ್ ಲಭ್ಯವಿದೆ. ಈ ಪೈಕಿ ಭಾರತದಲ್ಲಿ ಟೆಸ್ಲಾದ ವೈ ಮಾಡೆಲ್ ಕಾರುಗಳು ಮಾತ್ರ ಲಭ್ಯವಿದೆ. ಇದು ಟೆಸ್ಲಾದ ಎಂಟ್ರಿ ಲೆವಲ್ ಕಾರಾಗಿದೆ. ಇದೀಗ ಪೆಡಲ್ ಫ್ರೀ ಬ್ಯಾಲೆನ್ಸ್ ಬೈಕ್ ಬಿಡುಗಡೆ ಮಾಡಿದ ಬೆನ್ನಲ್ಲೇ ಟೆಸ್ಲಾ ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಬೈಕ್ ಲಾಂಚ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರ ಪೂರ್ವಭಾವಿಯಾಗಿ ಮಕ್ಕಳಿಗೆ ಪೆಡಲ್ ಫ್ರೀ ಬೈಕ್ ಲಾಂಚ್ ಮಾಡಿದೆ ಎಂದು ಚರ್ಚೆಯಾಗುತ್ತಿದೆ. ಟೆಸ್ಲಾ ಇದುವರೆಗೆ ಬೈಕ್ ಅಥವಾ ಸ್ಕೂಟರ್ ಲಾಂಚ್ ಕುರಿತು ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಸದ್ಯ ಪೆಡಲ್ ಫ್ರೀ ಬೈಕ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.


