ರಾಯಲ್ ಎನ್‌ಫೀಲ್ಡ್ ಆಯೋಜಿಸಿದ್ದ 'ವನ್ ರೈಡ್ 2026' ಜಾಗತಿಕ ರೈಡಿಂಗ್ ಈವೆಂಟ್‌ನಲ್ಲಿ 60 ದೇಶಗಳ 1.5 ಲಕ್ಷಕ್ಕೂ ಹೆಚ್ಚು ಬೈಕರ್‌ಗಳು ಪಾಲ್ಗೊಂಡಿದ್ದಾರೆ. ಈ ಬಾರಿಯ ರೈಡ್ ಹಿಮ ಚಿರತೆಗಳ ಸಂರಕ್ಷಣೆ ಮತ್ತು ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಉಳಿಸುವ ಮುಖ್ಯ ಗುರಿಯನ್ನು ಹೊಂದಿದೆ. ಅಕ್ಟೋಬರ್ 23ರಂದು ಈ ಅಭಿಯಾನದ ಮುಂದಿನ ಹಂತ ಮತ್ತು ದೇಣಿಗೆ ಮೊತ್ತವನ್ನು ಕಂಪನಿ ಘೋಷಿಸಲಿದೆ.
ಐಕಾನಿಕ್ ಟೂ-ವೀಲರ್ ಬ್ರ್ಯಾಂಡ್ ರಾಯಲ್ ಎನ್‌ಫೀಲ್ಡ್ ಆಯೋಜಿಸಿದ್ದ 'ವನ್ ರೈಡ್ 2026' (One Ride 2026) ಗ್ಲೋಬಲ್ ರೈಡಿಂಗ್ ಇವೆಂಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. 60 ದೇಶಗಳಿಂದ ಬರೋಬ್ಬರಿ 1.5 ಲಕ್ಷಕ್ಕೂ ಹೆಚ್ಚು ಬೈಕರ್ಸ್ ಈ ಬಾರಿಯ ರೈಡ್‌ನಲ್ಲಿ ಪಾಲ್ಗೊಂಡಿದ್ದಾರೆ. 2011ರಲ್ಲಿ ಶುರುವಾದ ಈ 'ವನ್ ರೈಡ್' ಇತಿಹಾಸದಲ್ಲೇ 2026ರ ಆವೃತ್ತಿ ಅತಿ ದೊಡ್ಡದು ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ. ಸೆಪ್ಟೆಂಬರ್ 20ರಂದು ಈ ವನ್ ರೈಡ್ 2026 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರ ಭಾಗವಾಗಿ ವಿವಿಧ ದೇಶಗಳು ಹಾಗೂ ಪ್ರದೇಶಗಳಲ್ಲಿ 1,600ಕ್ಕೂ ಹೆಚ್ಚು ರೈಡ್‌ಗಳು ನಡೆದಿವೆ. ರಾಯಲ್ ಎನ್‌ಫೀಲ್ಡ್ ತನ್ನ 125ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಬಾರಿಯ ವನ್ ರೈಡ್ ನಡೆದಿರುವುದು ವಿಶೇಷ.
ಹಿಮ ಚಿರತೆಗಳ ರಕ್ಷಣೆಯೇ ಮುಖ್ಯ ಗುರಿ
"ಒಬ್ಬ ರೈಡರ್. ಒಂದು ರಸ್ತೆ. ಒಂದೇ ಗುರಿ" (One rider. One road. One mission) ಅನ್ನೋದು ಈ ವರ್ಷದ ವನ್ ರೈಡ್‌ನ ಮುಖ್ಯ ಥೀಮ್ ಆಗಿತ್ತು. ಹಿಮ ಚಿರತೆಗಳ ಸಂರಕ್ಷಣೆ ಹಾಗೂ ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಉಳಿಸುವುದರ ಕಡೆಗೆ ಈ ಬಾರಿ ಹೆಚ್ಚು ಒತ್ತು ನೀಡಲಾಗಿದೆ. ವನ್ ರೈಡ್ 2026ರಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ರೈಡರ್ ಹೆಸರಿನಲ್ಲೂ ಹಿಮ ಚಿರತೆಗಳ ರಕ್ಷಣಾ ಕಾರ್ಯಗಳಿಗೆ ದೇಣಿಗೆ ನೀಡುವುದಾಗಿ ರಾಯಲ್ ಎನ್‌ಫೀಲ್ಡ್ ಘೋಷಿಸಿದೆ. ಹಿಮಾಲಯ ಭಾಗದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಂಪನಿಯು ಈಗಾಗಲೇ ಹಲವು ಯೋಜನೆಗಳನ್ನು ನಡೆಸುತ್ತಿದೆ.
10,500 ಚದರ ಕಿ.ಮೀ. ಆವಾಸಸ್ಥಾನ
ಹಿಮಾಚಲ ಪ್ರದೇಶ, ಲಡಾಖ್, ಉತ್ತರಾಖಂಡ, ಸಿಕ್ಕಿಂ ಮತ್ತು ಜಮ್ಮು-ಕಾಶ್ಮೀರ ಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್‌ನ ಸಾಮಾಜಿಕ ಕಾರ್ಯಗಳು ಮುಖ್ಯವಾಗಿ ನಡೆಯುತ್ತಿವೆ. ಕಂಪನಿಯ ಲೆಕ್ಕಾಚಾರದ ಪ್ರಕಾರ, 10,500 ಚದರ ಕಿಲೋಮೀಟರ್‌ಗೂ ಹೆಚ್ಚು ವಿಸ್ತಾರವಾದ ಹಿಮ ಚಿರತೆಗಳ ಆವಾಸಸ್ಥಾನದಲ್ಲಿ ಈ ಸಂರಕ್ಷಣಾ ಯೋಜನೆಗಳು ಹರಡಿಕೊಂಡಿವೆ. ಇದರಲ್ಲಿ 53 ಚದರ ಕಿಲೋಮೀಟರ್ ಪ್ರದೇಶವು ಸಮುದಾಯ ಆಧಾರಿತ ಸಂರಕ್ಷಣಾ ಯೋಜನೆಗಳ ಅಡಿಯಲ್ಲಿ ಬರುತ್ತದೆ. ಭಾರತದಲ್ಲಿ ಸರಿಸುಮಾರು 718 ಹಿಮ ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.
1,600ಕ್ಕೂ ಹೆಚ್ಚು ರೈಡ್‌ಗಳು
ಕಳೆದ ಹಲವು ವರ್ಷಗಳಿಂದ 'ವನ್ ರೈಡ್' ಒಂದು ಜಾಗತಿಕ ರೈಡಿಂಗ್ ಹಬ್ಬವಾಗಿ ಬೆಳೆದಿದೆ. ಬೇರೆ ಬೇರೆ ದೇಶಗಳು ಹಾಗೂ ವಿಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ಬೈಕರ್ಸ್ ಒಟ್ಟಾಗಿ ಪ್ರಯಾಣಿಸುವುದು ಈ ಕಾರ್ಯಕ್ರಮದ ಸ್ಪೆಷಾಲಿಟಿ. 2026ರ ಆವೃತ್ತಿಗಾಗಿ 60 ದೇಶಗಳಾದ್ಯಂತ ಬೈಕರ್ಸ್ 1,600ಕ್ಕೂ ಹೆಚ್ಚು ರೈಡ್‌ಗಳನ್ನು ಮಾಡಿದ್ದಾರೆ. ಹಿಮ ಚಿರತೆಗಳ ರಕ್ಷಣೆ ಸೇರಿದಂತೆ ಪರಿಸರ ಕಾಳಜಿಯ ವಿಷಯಗಳತ್ತ ಬೈಕರ್ಸ್ ಗಮನ ಸೆಳೆಯುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.
ಅಕ್ಟೋಬರ್ 23ಕ್ಕೆ ಮುಂದಿನ ಘೋಷಣೆ
ಸೆಪ್ಟೆಂಬರ್ 20ರಂದೇ 'ವನ್ ರೈಡ್ 2026' ಮುಕ್ತಾಯಗೊಂಡಿದ್ದರೂ, ಸಂರಕ್ಷಣಾ ಅಭಿಯಾನದ ಕೆಲಸಗಳು ಮುಂದುವರಿಯಲಿವೆ. ಅಕ್ಟೋಬರ್ 23ರಂದು ನಡೆಯುವ 'ಅಂತಾರಾಷ್ಟ್ರೀಯ ಹಿಮ ಚಿರತೆ ದಿನ'ದಂದು ಕಂಪನಿಯು ಈ ಯೋಜನೆಯ ಮುಂದಿನ ಹಂತವನ್ನು ಘೋಷಿಸಲಿದೆ. ಅದೇ ದಿನ 'ಗ್ಲೋಬಲ್ ವನ್ ರೈಡ್ 2026' ಆಫ್ಟರ್‌ಮೂವಿಯನ್ನು (After movie) ರಾಯಲ್ ಎನ್‌ಫೀಲ್ಡ್ ರಿಲೀಸ್ ಮಾಡಲಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆದ ರೈಡ್‌ಗಳು ಹಾಗೂ ಬೈಕರ್ಸ್ ಪಾಲ್ಗೊಂಡ ದೃಶ್ಯಗಳು ಈ ವಿಡಿಯೋದಲ್ಲಿ ಇರಲಿವೆ. ವನ್ ರೈಡ್ 2026ರ ಭಾಗವಾಗಿ ಹಿಮ ಚಿರತೆಗಳ ರಕ್ಷಣೆಗಾಗಿ ಕಂಪನಿ ನೀಡುತ್ತಿರುವ ಒಟ್ಟು ದೇಣಿಗೆಯ ಮೊತ್ತವನ್ನೂ ಅಕ್ಟೋಬರ್ 23ರಂದೇ ಪ್ರಕಟಿಸಲಿದೆ. ಈ ಹಣವನ್ನು ಹಿಮ ಚಿರತೆಗಳು ಹಾಗೂ ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಉಳಿಸುವ ಕೆಲಸಗಳಿಗೆ ಬಳಸಲಾಗುತ್ತದೆ.


