ರಾಜೇಶ್ ಶೆಟ್ಟಿ, ಕನ್ನಡಪ್ರಭ 
 
ರಾಯಲ್ ಎನ್‌ಫೀಲ್ಡ್‌ನ ಇಂಟರ್‌ಸೆಪ್ಟರ್ 650 ಬೈಕನ್ನು ಎಲ್ಲಾದರೂ ನಿಲ್ಲಿಸಿ ಅದರ ಪಕ್ಕ ನಿಂತಿದ್ದರೆ ಈ ಬೈಕಿನ ಬಗ್ಗೆ ಗೊತ್ತಿಲ್ಲದವರು ಕುತೂಹಲದಿಂದ ಯಾವ ಬೈಕ್ ಇದು ಎಂದು ಕೇಳುತ್ತಾರೆ. ಅಷ್ಟರ ಮಟ್ಟಿಗೆ ಇಂಟರ್‌ಸೆಪ್ಟರ್ 650 ಹವಾ ಮೇಂಟೇನ್ ಮಾಡಿದೆ.

ಬೈಕು ಹೇಗಿದ್ದರೇನು ಮನೆಯಿಂದ ಆಫೀಸಿನವರೆಗೆ ಬಿಟ್ಟರೆ ಸಾಕು ಎಂಬ ಮನಸ್ಥಿತಿಯವರಿಗೆ ಇಂಟರ್‌ಸೆಪ್ಟರ್ ಹೊಂದಲ್ಲ. ಮಿರರ್‌ನ ಡಿಸೈನ್‌ನಿಂದ ಹಿಡಿದು ಇಂಜಿನ್ ಹೇಗೆ ಕೂರಿಸಿದ್ದಾರೆ ಎಂಬ ವಿವರ ಕೇಳುವವರಿಗೆ, ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಜಾಕೆಟ್, ಗ್ಲೌಸ್, ಶೂ ತೊಟ್ಟುಕೊಂಡು ದೂರ ತೀರ ಯಾನ ಹೊರಡುವವರಿಗೆ ಇಂಟರ್‌ಸೆಪ್ಟರ್ ಆಸಕ್ತಿ, ಕುತೂಹಲ, ಪ್ರೀತಿ ಹೆಚ್ಚಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಖರೀದಿಸಿದ ಭಾರತದ ಮೊದಲ ಮಹಿಳೆ!

648 ಸಿಸಿಯ ಏರ್, ಆಯಿಲ್ ಕೂಲ್ಡ್ ಟ್ವಿನ್ ಇಂಜಿನ್ ಹೊಂದಿರುವ ಬೈಕಿದು. ಆರು ಗೇರ್ ಇದೆ. ಯಾವ ರೋಡಲ್ಲಿ ಬೇಕಾದರೂ ಹತ್ತುತ್ತದೆ, ಇಳಿಯುತ್ತದೆ. ತಿರುವುಮುರುವು ದಾರಿಯಲ್ಲಿ ಯಾವುದೇ ಕೀಟಲೆ ಮಾಡದೆ ಸಾಗುತ್ತದೆ. ಇಂಟರೆಸ್ಟಿಂಗ್ ಅಂದ್ರೆ ಆರನೇ ಗೇರಿನಲ್ಲಿದ್ದಾಗ 50 ಕಿಮೀ ವೇಗಕ್ಕೆ ಇಳಿದರೂ ಬೈಕು ಅಲ್ಲಾಡದೆ ನಡೆ ಮುಂದೆ ನಡೆ ಮುಂದೆ ಅನ್ನುತ್ತದೆ. ಇಂಟರ್‌ಸೆಪ್ಟರ್ ಬಿಎಸ್‌6 ಬೈಕಿನಲ್ಲಿ ಬಿಎಸ್‌4 ಬೈಕಿಗಿಂತ ಮೈಲೇಜು ಚೂರು ಜಾಸ್ತಿ. ಪವರ್ ಕೂಡ ಹೆಚ್ಚು. ಇದರಲ್ಲಿ ಬ್ರೇಕ್‌ಗೆ ಸ್ವಲ್ಪ ಮರ್ಯಾದೆ ಜಾಸ್ತಿ ಕೊಡಬಹುದು. ಎಲ್ಲಿ ಬೇಕಾದರೂ ಥಟ್ ಅಂತ ನಿಲ್ಲಬಲ್ಲ ಶಕ್ತಿ ಇದೆ.

122KM ರಾಯಲ್ ಎನ್‌ಫೀಲ್ಡ್ ರೈಡ್ ಮಾಡಿದ ಅರುಣಾಚಲ CM!

ಬಂಡೆ ಮೇಲೂ ಹತ್ತಬಲ್ಲ, ಮಣ್ಣು ರಸ್ತೆಯಲ್ಲೂ ಚಲಿಸಬಲ್ಲ, ಕಾಂಕ್ರೀಟ್ ರೋಡಲ್ಲಿ ರಾಜನಂತೆ ಸಾಗಬಲ್ಲ, ಭಾರಿ ರೋಡ್ ಗ್ರಿಪ್ ಹೊಂದಿರುವ ಇಂಟರ್‌ಸೆಪ್ಟರ್‌ನಲ್ಲಿ ತುಂಬಾ ಇಷ್ಟವಾಗುವ ಗುಣ ಅದರ ಸೌಂಡು. ಅತ್ತ ಜೋರೂ ಅನ್ನಿಸದ ಇತ್ತ ಕಡಿಮೆಯೂ ಇಲ್ಲದ ಬೈಕಿನ ಹಿತವಾದ ದನಿಯನ್ನು ಕೇಳುತ್ತಾ ಮಂಜನ್ನು ಬಿಸಿಲನ್ನು ಚಳಿಯನ್ನು ಮಳೆಯನ್ನು ಸೀಳುತ್ತಾ ಮುಂದೆ ಸಾಗಬಹುದು. ಇದರ ಸುಸ್ತಾಗದ ಪವರ್, ಹಿತವಾದ ಸೌಂಡ್, ಎಲ್ಲಿ ಬೇಕಾದರೂ ನಡೆಯುವ ಖದರ್‌ನಿಂದಲೇ ಬೈಕ್ ಪ್ರೇಮಿಗಳ ಮೆಚ್ಚುಗೆ ದೃಷ್ಟಿ ಇದರ ಮೇಲೆ ಬಿದ್ದಿದೆ. ಇದರ ಎರಡು ಸೈಲೆನ್ಸರ್ ಈ ಬೈಕಿನ ತೂಕ ಮತ್ತು ಘನತೆ ಎರಡನ್ನೂ ಹೆಚ್ಚಿಸಿದೆ.  

   

202 ಕೆಜಿ ಭಾರ, 174 ಮಿಮೀ ಗ್ರೌಂಡ್ ಕ್ಲಿಯರೆನ್ಸ್, 804 ಮಿಮೀ ಸೀಟ್ ಎತ್ತರ ಹೊಂದಿರುವ ಈ ಬೈಕು ಸ್ವಲ್ಪ ಬೇಸರ ಉಂಟು ಮಾಡುವುದು ಸೀಟ್ ವಿಚಾರಕ್ಕೆ. ಲಾಂಗ್ ರೈಡ್‌ನಲ್ಲಿ ಇದರ ಸಪೂರ ಸೀಟಿನಿಂದಾಗಿ ಬೇಗ ಸುಸ್ತಾಗುತ್ತದೆ. ಪಿಲಿಯನ್ ರೈಡರ್ ಇದ್ದರಂತೂ ಅವರಿಗೆ ಸಾವರಿಸಿ ಕುಳಿತುಕೊಳ್ಳುವುದೇ ಒಂದು ಸವಾಲು. ಅದನ್ನು ಹೊರತುಪಡಿಸಿದರೆ ಸಿಟಿಯಲ್ಲೂ ಹೈವೇಯಲ್ಲೂ ಎರಡೂ ಕಡೆ ಸಲ್ಲುವ ಬೈಕು. ಸಿಟಿಯಲ್ಲಿ ಮೈಲೇಜು ಅಂದಾಜು 26 ಕಿಮೀ ಕೊಡಬಹುದು. ಹೈವೇಯಲ್ಲಿ ಅದಕ್ಕಿಂತ 10 ಕಿಮೀ ಜಾಸ್ತಿ ಕೊಡುತ್ತದೆ.

ಚಂದದ ವಿನ್ಯಾಸ, ಅಗಾಧ ಶಕ್ತಿ, ಖುಷಿ ಕೊಡುವ ರೈಡಿಂಗ್ ಅನುಭವ ಎಲ್ಲವೂ ಸೇರಿ ಇಂಟರ್‌ಸೆಪ್ಟರ್ 650ಯನ್ನು ಅತ್ಯುತ್ತಮ ಬೈಕುಗಳ ಸಾಲಲ್ಲಿ ನಿಲ್ಲಿಸಿದೆ. ಈ ಬೈಕಿನ ಆರಂಭಿಕ ಬೆಲೆ ರು.2.50 ಲಕ್ಷ. ಆನ್‌ರೋಡ್ ಬಂದಾಗ ರು.3.20 ಲಕ್ಷದಿಂದ ಶುರುವಾಗುತ್ತದೆ.