ಒಂದು ಕ್ಲಾಸಿಕ್‌ ಲುಕ್ಕಿನ, ಹೈವೇಯಲ್ಲಿಯೂ ಅದ್ಭುತವಾಗಿ ಓಡಬಹುದಾದ ಸೊಗಸಾದ ಬೈಕ್‌ ಅನ್ನು ಯಾರು ಬಯಸುತ್ತಿರುತ್ತಾರೋ ಇದು ಅವರಿಗೆಂದೇ ಇರುವ ಬೈಕ್‌.

ವರ್ಷದಿಂದ ವರ್ಷಕ್ಕೆ ರಾಯಲ್‌ ಎನ್‌ಫೀಲ್ಡ್‌ ತನ್ನ ಬೈಕ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ. ಇಂಜಿನ್‌ಗಳು ಅಪ್‌ಗ್ರೇಡ್‌ ಆಗಿವೆ. ಲುಕ್ಕು ಸ್ಟೈಲಿಶ್‌ ಆಗಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ರೂಪ ಬದಲಾಗಿವೆ. ಆ ಪ್ರಕಾರ ಹೊಸ ಕಾಲಕ್ಕೆ ತಕ್ಕಂತೆ ರೂಪಿಸಿರುವ ಕಾಲಾತೀತ ರೂಪದ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650.

ಕಪ್ಪು ಬಣ್ಣದ ಕ್ಲಾಸಿಕ್ 650 ಅನ್ನು ಎಲ್ಲೋ ಒಮ್ಮೆ ನೋಡಿದರೆ ಸಾಕು, ಥಟ್‌ ಅಂತ ಗಮನ ಸೆಳೆಯುತ್ತದೆ. ಅಷ್ಟು ಮನಮೋಹಕ ವಿನ್ಯಾಸ. ಅದರ ಗಾಢ ಕಪ್ಪು, ಬೆಳ್ಳಿ ಬಣ್ಣದ ಗಾರ್ಡ್‌, ಪೆಟ್ರೋಲ್‌ ಟ್ಯಾಂಕ್‌ ಮೇಲಿನ ಬಂಗಾರ ಬಣ್ಣದ ಗೆರೆ, ಟ್ವಿನ್‌ ಸಿಲಿಂಡರ್‌, ಹೆಡ್‌ಲೈಟ್‌ ಎಲ್ಲವೂ ಸೇರಿ ಇದಕ್ಕೊಂದು ಅಪೂರ್ವವಾದ ಘನತೆವೆತ್ತ ಲುಕ್‌ ಕೊಟ್ಟಿವೆ. ರೈಡರ್‌ ಕುಳಿತಾಗ ಒಂದು ಚೆಂದವಾದರೆ, ಆ ಬೈಕ್‌ ಎಲ್ಲಿ ನಿಲ್ಲಿಸಲಾಗುತ್ತದೆಯೋ ಆ ವಾತಾವರಣಕ್ಕೇ ಒಂದು ಗೌರವ.

ಒಂದು ಕ್ಲಾಸಿಕ್‌ ಲುಕ್ಕಿನ, ಹೈವೇಯಲ್ಲಿಯೂ ಅದ್ಭುತವಾಗಿ ಓಡಬಹುದಾದ ಸೊಗಸಾದ ಬೈಕ್‌ ಅನ್ನು ಯಾರು ಬಯಸುತ್ತಿರುತ್ತಾರೋ ಇದು ಅವರಿಗೆಂದೇ ಇರುವ ಬೈಕ್‌. 648 ಸಿಸಿಯ ಎಂಜಿನ್‌, 6 ಸ್ಪೀಡ್‌ ಗೇರ್‌ ಹೊಂದಿರುವ ಅಪಾರ ಸಾಮರ್ಥ್ಯ ಹೊಂದಿರುವ ಬೈಕ್‌ ಅದ್ಭುತ ಸಾಮರ್ಥ್ಯ ಹೊಂದಿದೆ. ಈ ಬೈಕ್‌ 243 ಕೆಜಿ ಭಾರ ಇದೆ. ಈ ಭಾರವೇ ಇದರ ತಾಕತ್ತು. ಕಡಿಮೆ ವೇಗದಲ್ಲಿಯೂ ಅದ್ಭುತ ಬ್ಯಾಲೆನ್ಸ್‌ ದೊರೆಯುತ್ತದೆ. ಆದರೆ ಜಾಸ್ತಿ ಕೆಸರು ರಸ್ತೆಯಲ್ಲಿ ಹೋಗದಿರುವುದು ಒಳಿತು. ಭಾರಕ್ಕೆ ಕೊಂಚ ಕುಸಿದಂತೆ ಅನ್ನಿಸಬಹುದು. ಅದೂ ಒಬ್ಬರೇ ಇದ್ದರೆ ಬೈಕ್‌ ಕೊಂಚ ಹಠ ಹಿಡಿಯಬಹುದು.

800 ಎಂಎಂ ಸೀಟ್‌ ಎತ್ತರವಿರುವುದರಿಂದ ಸಾಮಾನ್ಯ ಹೈಟ್‌ ಇರುವವರು ಕೂಡ ಈ ಬೈಕ್ ಅನ್ನು ಆರಾಮಾಗಿ ಓಡಿಸಬಹುದು. ಇದರ ಸೌಂಡ್‌ ಕೂಡ ಕಿವಿಗೆ ಹಿತಕರ. ವೇಗ ಹೆಚ್ಚಿಸುವಾಗ ಸೊಂಯ್‌ ಎಂದು ಮುಂದೆ ಓಡುತ್ತದೆಯಾದರೂ ಕ್ರೂಸಿಂಗ್‌ ವಿಚಾರದಲ್ಲಿ ಇದನ್ನು ಸೂಪರ್‌ ಮಿಟಿಯೋರ್‌ 650 ಜೊತೆ ಹೋಲಿಸಿದರೆ ಇದು ಕೊಂಚ ಹಿಂದೆ ಉಳಿಯಬಹುದು.

ರಾಯಲ್‌ ಎನ್‌ಫೀಲ್ಡ್‌ನ ಕ್ಲಾಸಿಕ್‌ ಸರಣಿಗೆ ಅದರದ್ದೇ ಆದ ಅಭಿಮಾನಿ ವರ್ಗವಿದೆ. ಅವರು ಕ್ಲಾಸಿಕ್‌ ಅನ್ನು ಬಿಟ್ಟುಕೊಡುವುದಿಲ್ಲ ಮತ್ತು ಕ್ಲಾಸಿಕ್‌ ತನ್ನ ಗತ್ತು ಗೌರತ್ತಿನಿಂದ ಅವರನ್ನು ಬಿಟ್ಟುಕೊಡುವುದಿಲ್ಲ. ಆದ್ದರಿಂದ ಈ 650 ಬೈಕ್‌ ಕ್ಲಾಸಿಕ್‌ ಪ್ರಿಯರಿಗೆ ಉತ್ತಮ ಆಯ್ಕೆಯೇ ಸರಿ. ನಾಲ್ಕು ಬಣ್ಣಗಳಲ್ಲಿ ದೊರೆಯುವ ಇದರ ಆರಂಭಿಕ ಬೆಲೆ ರೂ.3,36,610.