Asianet Suvarna News Asianet Suvarna News

ಕೋವಿಡ್ ನಂತರ ಭಾರತದಲ್ಲಿ ಸಾಹಸಮಯ ರೈಡಿಂಗ್ಗೆ ಬೇಡಿಕೆ ಹೆಚ್ಚಳ; ವಿಕ್ರಂ ಪಾವಾಹ್

ಕೋವಿಡ್‌ ನಂತರದ ಮಾರುಕಟ್ಟೆಯಲ್ಲಿ ಆಫ್‌ರೋಡ್‌ ಬೈಕ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ

Indian youths are more into adventure biking post Covid: Vikram Pawah
Author
Bangalore, First Published May 16, 2022, 6:29 PM IST

ಸಂದರ್ಶನ-ಸುಪ್ರೀತಾ ಹೆಬ್ಬಾರ್‌

ಕೋವಿಡ್‌ ನಂತರ ಜನರು ಜೀವನವನ್ನು ನೋಡುವ ರೀತಿ ಬದಲಾಗಿದ್ದು, ಭಾರತೀಯ ಯುವಕರು ಸಾಹಸಮಯ ಬೈಕಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕೋವಿಡ್‌ ನಂತರದ ಮಾರುಕಟ್ಟೆಯಲ್ಲಿ ಆಫ್‌ರೋಡ್‌ ಬೈಕ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಎಂದು ಬಿಎಂಡಬ್ಲ್ಯು ಸಮೂಹ (BMW Group) ಇಂಡಿಯಾದ ಆದ್ಯಕ್ಷ ವಿಕ್ರಮ್‌ ಪಾವಾಹ್‌ ಹೇಳಿದ್ದಾರೆ.

ಬೆಂಗಳೂರಿನ ಜೆಎಸ್‌ಪಿ ಮೋಟರಾಡ್‌ (KSP Motorrad) ಜೊತೆಗಿನ ಬಿಎಂಡಬ್ಲ್ಯು ಮೋಟರಾಡ್‌ (BMW Motorrad) ಡೀಲರ್‌ಶಿಪ್‌ ಪಾಲುದಾರಿಕೆ ಘೋಷಣೆ ವೇಳೆ ನೀಡಿದ ಸಂದರ್ಶನದಲ್ಲಿ ಅವರು, ಸೆಮಿಕಂಡಕ್ಟರ್‌ ಕೊರತೆ, ಕಂಟೈನರ್‌ ಕೊರತೆ, ಚೀನಾ ಮಾರುಕಟ್ಟೆ ಸ್ಥಗಿತದಂತಹ ಸಮಸ್ಯೆಗಳಿಂದ ಎದುರಾಗಿರುವ ಸವಾಲುಗಳನ್ನು ವಿವರಿಸಿದರು.

-ಕೋವಿಡ್‌ ನಂತರ ಮೋಟಾರ್‌ಬೈಕ್‌ಗಳ ಚೇತರಿಕೆ ಹೇಗಿದೆ?

ಈಗ ಮಾರುಕಟ್ಟೆ ಬಹುತೇಕ ಚೇತರಿಸಿಕೊಂಡಿದೆ. ಕಳೆದ ಐದು ವರ್ಷಗಳಿಂದ ಕಳೆದ ವರ್ಷದವರೆಗೆ ನಾವು ಸುಮಾರು 15000 ಬಿಎಂಡಬ್ಲ್ಯು ಮೋಟಾರ್‌ ಬೈಕ್‌ಗಳನ್ನು ಮಾರಾಟ ಮಾಡಿದ್ದೇವೆ.ಕಳೆದ ವರ್ಷ 5,191 ವಾಹನಗಳು ಮಾರಾಟವಾಗಿದ್ದು, ಇದು 2020ಕ್ಕೆ ಹೋಲಿಸಿದರೆ ಶೇ.102.5 ರಷ್ಟು ಪ್ರಗತಿ ದಾಖಲಿಸಿದೆ. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಕೆಲ ಕಾಲ ಎಲ್ಲಾ ಉತ್ಪಾದನೆಗಳು ಸ್ಥಗಿತಗೊಂಡಿದ್ದವು. ಆದರೆ, ಮತ್ತೊಮ್ಮೆ ಮಾರುಕಟ್ಟೆಗಳು ತೆರೆದಾಗ, ಬೇಡಿಕೆ ಮೊದಲಿಗಿಂತಲೂ ಹೆಚ್ಚಾಗಿತ್ತು.  ನಾವು ಕಳೆದ ವರ್ಷ 31 0 ಆರ್‌ ಮತ್ತು 3 10 ಜಿಎಸ್‌ ಅನ್ನು ಮರು ಬಿಡುಗಡೆ ಮಾಡಿದೆವು. ಅದಕ್ಕೆ ಜನರು ಅತ್ಯುದ್ಭುತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.

-ಭಾರತದಲ್ಲಿ ಬಿಎಂಡಬ್ಲ್ಯು ಮಾರಾಟದ ಬೆಳವಣಿಗೆ ಹೇಗಿದೆ?

2017ರಲ್ಲಿ ಆರಂಭಗೊಂಡ ನಂತರ ಇಲ್ಲಿಯವರೆಗೆ ಸುಮಾರು 30 ಸಾವಿರ ವಾಹನಗಳನ್ನು ಮಾರಾಟ ಮಾಡಿದ್ದೇವೆ. ಬಿಎಂಡಬ್ಲ್ಯು ವಾಹನಗಳಿಗೆ ಭಾರತ ಒಂದು ಅತ್ಯುತ್ತಮ ಮಾರುಕಟ್ಟೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಕಂಪನಿಗೆ ಎರಡು ಅಂಕಿಯ ಪ್ರಗತಿ ಕಂಡುಬಂದಿದೆ. ಮೊದಲ ವರ್ಷದಲ್ಲಿ ನಾವು ಕೇವಲ 2 ಸಾವಿರ ವಾಹನಗಳನ್ನು ಮಾರಾಟ ಮಾಡಿದ್ದೆವು. ನಂತರ ಕೇವಲ 3 ವರ್ಷಗಳಲ್ಲಿ ಅದು ದುಪ್ಪಟ್ಟಿಗಿಂತ ಹೆಚ್ಚಾಗಿದೆ.

-ಅತಿ ಹೆಚ್ಚು ಬೇಡಿಕೆಯಿರುವ ಮೋಟಾರ್‌ಸೈಕಲ್‌ ಯಾವುವು?

ಸ್ಥಳೀಯವಾಗಿ ಉತ್ಪಾದಿಸಿದ ಜಿ3 ಮತ್ತು  ಜಿ 3  ಆರ್‌ (G3 and G3 R) ಅಥವಾ 3 10 ಜಿಎಸ್‌ ವಾಹನಗಳು  ಒಟ್ಟು ಮಾರಾಟಕ್ಕೆ ಶೇ.90ರಷ್ಟು ಕೊಡುಗೆ ನೀಡಿವೆ. ಜೊತೆಗೆ, ಆಮದಾದ ಉತ್ಪನ್ನಗಳ ಬೇಡಿಕೆಯಲ್ಲೂ ಭಾರಿ ಏರಿಕೆಯಾಗಿದೆ. ಕೋವಿಡ್‌ ನಂತರ ಹೆಚ್ಚಿನ ಜನರು ಸಾಹಸಮಯ ಬೈಕಿಂಗ್‌ಗಳಿಗೆ ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ. ಮೊದಲು ಭಾರತದಲ್ಲಿ ರೋಡ್‌ ಬೈಕಿಂಗ್‌ಗೆ ಮಾತ್ರ ಬೇಡಿಕೆಯಿತ್ತು. ಈಗ ನಿಧಾನವಾಗಿ ಜನರ ಅಭಿರುಚಿಗಳು ಬದಲಾಗುತ್ತಿವೆ. ಆಫ್‌ರೋಡ್‌ ಮತ್ತು ಸಾಹಸಮಯ ಬೈಕಿಂಗ್‌ಗಳು ಹೆಚ್ಚಾಗುತ್ತಿವೆ. ಮುಂದಿನ ಎರಡು ವರ್ಷಗಳಲ್ಲಿ ಈ ವಲಯ ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ.

-ಮ್ಯಾಕ್ಸಿ ಸ್ಕೂಟರ್‌ ಬಗ್ಗೆ ವಿವರಿಸಿ.

ಕಳೆದ ವರ್ಷದ ಮಧ್ಯದಲ್ಲೇ ಬಿಡುಗಡೆಯಾದ 400 ಸಿಸಿ ಹೈಪವರ್‌ ಗೇರ್‌ಲೆಸ್‌ ಸ್ಕೂಟರ್‌ ಆದ ಸಿ400 ಜಿಟಿ ಬಿಡುಗಡೆಗೊಳಿಸಿದ್ದೇವೆ. ಇದು ಅತ್ಯಂತ ಶಕ್ತಿಯುತ ಹಾಗೂ ದೊಡ್ಡ ಸ್ಕೂಟರ್‌ ಆಗಿದ್ದು, ಬೈಕ್‌ನಂತೆ ಪಿಕ್‌ಅಪ್‌ ತೆಗೆದುಕೊಳ್ಳುತ್ತದೆ. ಆದ್ದರಿಂದ ಇದಕ್ಕೆ ಮ್ಯಾಕ್ಸಿ ಸ್ಕೂಟರ್‌ ಎಂದು ಹೆಸರಿಸಿದ್ದೇವೆ. ಆಸಕ್ತಿಕರ ವಿಷಯವೆಂದರೆ, ಈ ವಲಯ ಭಾರತದಲ್ಲೇ ಅಸ್ತಿತ್ವದಲ್ಲಿಯೇ ಇರಲಿಲ್ಲ. ಮ್ಯಾಕ್ಸಿ ಸ್ಕೂಟರ್‌  ಬಿಡುಗಡೆಗೊಳಿಸಿದ ವರ್ಷದ ಮೊದಲಾರ್ಧದಲ್ಲೇ ಬಹುತೇಕ 100 ಸ್ಕೂಟರ್‌ಗಳು ಮಾರಾಟವಾಗಿದ್ದವು. ಇದರ ದರ 10 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.

ಬಿಎಂಡಬ್ಲ್ಯುಗೆ ಅತಿ ಹೆಚ್ಚಿನ ಮಾರುಕಟ್ಟೆ ಒದಗಿಸುವ ದೇಶ ಯಾವುದು?

ಬಿಎಂಡಬ್ಲ್ಯು ವಾಹನಗಳಿಗೆ ಸಾಂಪ್ರದಾಯಿಕ ಮಾರುಕಟ್ಟೆಗಳಾದ ಅಮೆರಿಕ, ಯೂರೋಪ್‌ಗಳಲ್ಲಿ ಉತ್ತಮ ಬೇಡಿಕೆಯಿದೆ. ಆದರೆ, ಇದರ ಜೊತೆಗೆ, ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖವಾಗಿದೆ.

-ಸೆಮಿ ಕಂಡಕ್ಟರ್‌ ಕೊರತೆಯಿಂದ ನಿಮಗೆ ಸಮಸ್ಯೆಯಾಗಿದೆಯೇ?

ಸೆಮಿ ಕಂಡಕ್ಟರ್‌ ಕೊರತೆ ವಿಶ್ವಾದ್ಯಂತ ಹಲವು ವಲಯಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಇತರ ಕಂಪನಿಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ನಾವು ಸಾಕಷ್ಟು ಫ್ಲೆಕ್ಸಿಬಲ್‌ ಉತ್ಪಾದನಾ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ವೆಂಡರ್‌ಗಳ ಜೊತೆಗೆ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿದ್ದೇವೆ. ಇದರಿಂದ ವಿಶ್ವಾದ್ಯಂತ ನಮ್ಮ ಮಾರುಕಟ್ಟೆಯ ಬೆಳವಣಿಗೆಗೆ ಹೆಚ್ಚಿನ ತೊಂದರೆಯಾಗಿಲ್ಲ.

ಸೆಮಿಕಂಡಕ್ಟರ್‌ ಕೊರತೆ ಶೀಘ್ರದಲ್ಲೇ ಕಡಿಮೆಯಾಗುವ ನಿರೀಕ್ಷೆಯಿದೆಯೇ?

ಸದ್ಯಕ್ಕೆ ಹಿಂದಿನ ಪರಿಸ್ಥಿತಿಯೇ ಮುಂದುವರಿಯಲಿದೆ. ಹಲವು ಉದ್ಯಮಗಳ ಮೇಲೆ ಇದು ಪರಿಣಾಮ ಬೀರಿದೆ. ಈ ಹಿಂದೆ ನಾವು ಒಂದು ವರ್ಷದ ಅವಧಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸ ಹೊಂದಿದ್ದೆವು. ಆದರೆ, ಈಗ ಚೀನಾದ ಪರಿಸ್ಥಿತಿ ಮತ್ತು ಹಲವು ಆಮದು, ರಫ್ತಿನ ಮೇಲಿನ ನಿರ್ಬಂಧಗಳಿಂದ ಪರಿಸ್ಥಿತಿ ಇನ್ನಷ್ಟು ಕ್ಲಿಷ್ಟವಾಗಿದೆ. ಚೀನಾ ಇದಕ್ಕಿದ್ದ ಹಾಗೆ ಸ್ಥಬ್ಧವಾದಾಗ, ಜಗತ್ತಿನಾದ್ಯಂತ ಎಲ್ಲಾ ಲಾಜಿಸ್ಟಿಕ್‌ಗಳ ಪೂರೈಕೆ ಮೇಲೆ ನೇರ ಪರಿಣಾಮ ಬೀರಿತು.

ಇತ್ತೀಚೆಗೆ ಎಲ್ಲವೂ ಜಾಗತಿಕವಾಗಿದೆ. ಪ್ರತಿಯೊಂದು ಉತ್ಪನ್ನಗಳು, ಬಿಡಿ ಭಾಗಗಳ ಪೂರೈಕೆ ಸರಪಳಿ ಎಲ್ಲಾ ದೇಶಗಳಿಗೂ ವ್ಯಾಪಿಸಿರುತ್ತದೆ. ವಿಶ್ವದ ಒಂದು ಪ್ರದೇಶದಲ್ಲಿ ನಡೆಯುವ ಒಂದು ಸಣ್ಣ ಸಮಸ್ಯೆ ಪ್ರತಿಯೊಬ್ಬರನ್ನೂ ಬಾಧಿಸುತ್ತಿದೆ. ಚಿಪ್‌ ಕೊರತೆ ಎಲ್ಲೆಡೆ ಅನಿಶ್ಚಿತತೆ ಮೂಡಿಸುವ ಜೊತೆಗೆ, ನೇರವಾಗಿ ವಾಹನದ ಪೂರೈಕೆಯ ಮೇಲೆ ಪ್ರಭಾವ ಬೀರಲಿದೆ.

ಇದನ್ನೂ ಓದಿ: ಟೆಸ್ಲಾ ಸಿಇಓ ಎಲಾನ್ ಮಸ್ಕ್ಗೆ ವ್ಯಂಗ್ಯವಾಡಿದ ಫೋರ್ಡ್ ಜಾಹೀರಾತು

ಪ್ರೀಮಿಯಂ ಕಾರುಗಳನ್ನು ಭಾರತಕ್ಕೆ ತರಲು ಹಿಂಜರಿಯುತ್ತಿರುವುದೇಕೆ?

ಭಾರತ ಪ್ರೀಮಿಯಂ ಕಾರುಗಳಿಗೆ ಉತ್ತಮ ಮಾರುಕಟ್ಟೆಯಾಗಿದೆ. ಆದರೆ, ಸಣ್ಣ ಕಾರುಗಳಿಗೆ ಹೋಲಿಸಿದರೆ, ಪ್ರೀಮಿಯಂ ಕಾರುಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಸಾಕಷ್ಟು ಹೆಚ್ಚಿದೆ. ಇದರಿಂದ ಗ್ರಾಹಕರಿಗೆ, ಇತರ ದೇಶಗಳಿಗೆ ಕಡಿಮೆ ಬೆಲೆಗೆ ಸಿಗುವ ಕಾರುಗಳಿಗೆ ಇಲ್ಲಿ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಹೆಚ್ಚಿನ ತೆರಿಗೆ, ಆಮದು ಸುಂಕದ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಗೊಂದಲ ಉಂಟಾಗುತ್ತದೆ. ಆದರೆ, ಎಲೆಕ್ಟ್ರಿಕ್‌ ವಾಹನಗಳಿಗೆ ಸರ್ಕಾರ ಜಿಎಸ್‌ಟಿ ಕಡಿತಗೊಳಿಸುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಭಾರತಕ್ಕೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಅನುವು ಮಾಡಿಕೊಡುತ್ತದೆ. ಅವುಗಳನ್ನು ಬೇರೆಡೆಯಿಂದ ತಂದು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಒದಗಿಸಬಹುದು.

-ಸದ್ಯ ಆಟೊಮೊಬೈಲ್‌ ಉದ್ಯಮ ಎದುರಿಸುತ್ತಿರುವ ಸವಾಲುಗಳೇನು?

2020ರಲ್ಲಿ ಕೋವಿಡ್‌  ಎದುರಾಯಿತು. 2021ರಲ್ಲಿ ಕೋವಿಡ್‌ ಮತ್ತು ಸೆಮಿಕಂಡಕ್ಟರ್‌ ಸಮಸ್ಯೆ ಎದುರಾಯಿತು. 2022ರಲ್ಲಿ ಕೋವಿಡ್‌ ಈಗಲೂ ಇದೆ. ಸೆಮಿಕಂಡಕ್ಟರ್‌  ಕೊರತೆ, ಕಂಟೈನರ್‌ ಕೊರತೆ ಈಗಲೂ ಜೀವಂತವಾಗಿದೆ. ಜೊತೆಗೆ, ಭೌಗೋಳಿಕ ರಾಜಕೀಯ ಹಾಗೂ ಇತರ ಲಾಜಿಸ್ಟಿಕ್‌ ಸಮಸ್ಯೆಗಳು ಎದುರಾಗಿವೆ. ಪ್ರತಿ ವರ್ಷ ಉದ್ಯಮಕ್ಕೆ ಸವಾಲುಗಳು ಹೆಚ್ಚುತ್ತಲೇ ಇವೆ.

ಇದನ್ನೂ ಓದಿ: Range Rover Sport ನಾಲೆ ನೀರಿನಲ್ಲಿ ಯಶಸ್ವಿಯಾಗಿ ಮುನ್ನುಗ್ಗಿದ ರೇಂಜ್ ರೋವರ್

2022ರಲ್ಲಿ ಮೋಟಾರ್‌ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆಯೇ?

2022ರಲ್ಲಿ ಮೊದಲ ತ್ರೈಮಾಸಿಕದಲ್ಲಿ ಒಟ್ಟು 2074 ದ್ವಿಚಕ್ರ ವಾಹನಗಳು ಮಾರಾಟವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.49ರಷ್ಟು ಹೆಚ್ಚಳವಾಗಿದೆ. ಈ ವರ್ಷಾಂತ್ಯದ ವೇಳೆಗೆ ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ಡಿಸೆಂಬರ್‌ನಲ್ಲಿ ಐಎಕ್ಸ್‌ ಎಲೆಕ್ಟ್ರಿಕ್‌ ವಾಹನ ಹಾಗೂ 2022ರ ಫೆಬ್ರವರಿಯಲ್ಲಿ ಮಿನಿ ಕೂಪರ್‌ ಎಸ್‌ಇ ಬಿಡುಗಡೆಗೊಳಿಸಿದ್ದೇವೆ. ಮೇ ತಿಂಗಳ ಅಂತ್ಯದಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್‌ ಎಸ್‌ಯುವಿ ಐ4 ಬಿಡುಗಡೆಯಾಗಲಿದೆ.

Follow Us:
Download App:
  • android
  • ios