ಇಬೈಕ್‌ಗೋ ಎಂಬ ಕಂಪನಿಯು ಭಾರತೀಯ ಮಾರುಕಟ್ಟೆಗೆ ರಗಡ್ ಎಂಬ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಎರಡು ವೆರಿಯೆಂಟ್‌ಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಭಾರತೀಯ ರಸ್ತೆಗಳಿಗೆ ಹೊಂದಾಣಿಕೆಯಾಗುವಂತೆ ಸ್ಕೂಟರ್ ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. 

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಬಳಕೆಯ ಮೇಲೆ ತೀವ್ರ ಹೊಡೆತ ಬೀಳುತ್ತದೆ. ಜೊತೆಗೆ ಈ ಸಾಂಪ್ರದಾಯಿಕ ಇಂಧನ ಆಧರಿತ ದ್ವಿಚಕ್ರವಾಹನ ಮತ್ತು ನಾಲ್ಕು ಚಕ್ರವಾಹನಗಳಿಂದ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ.

ಈ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚೆಚ್ಚು ಉತ್ತೇಜನ ನೀಡುತ್ತಿವೆ. ಅದರ ಫಲವಾಗಿ ಈಗ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನ, ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ.

ರಿವರ್ಸ್ ಗೇರ್‌ನಲ್ಲಿಯೂ ಓಡಲಿದೆ ಓಲಾ ಸ್ಕೂಟರ್, ಪರಿಚಯಿಸುತ್ತಿದೆ ರಿವರ್ಸ್

ಈ ಅವಕಾಶವನ್ನು ಬಳಸಿಕೊಳ್ಳಲು ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ದ್ವಿಚಕ್ರವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿಗೆ ಇಬೈಕ್‌ಗೋ ಕಂಪನಿ ಹೊಸ ಸೇರ್ಪಡೆಯಾಗಿದೆ. 

ಇತ್ತೀಚೆಗಷ್ಟೇ ಇಬೈಕ್‌ಗೋ ಕಂಪನಿಯು ಸ್ಮಾರ್ಟ್‌ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹೆಸರು ರಗಡ್(Rugged). ಇಬೈಕ್‌ಗೋ ಕಂಪನಿಯು ಈ ಸ್ಕೂಟರ್ ಅನ್ನು ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದೆ. ರಗಡ್ ಜಿ1 ವೆರಿಯೆಂಟ್ ಸ್ಕೂಟರ್ ಬೆಲೆ 79,999 ರೂ.ನಿಂದ ಆರಂಭವಾದರೆ, ರಗಡ್ ಜಿ1 ಪ್ಲಸ್ ಸ್ಕೂಟರ್ ಬೆಲೆ 99,999 ರೂ.ನಿಂದ ಆರಂಭವಾಗುತ್ತದೆ. ಇದು ಎಕ್ಸ್‌ಶೋರೂಮ್ ಬೆಲೆಯಾಗಿದೆ.

ಇಬೈಕ್‌ಗೋ ಲಾಂಚ್ ಮಾಡಿರುವ ರಗಡ್ ಜಿ1 ಮತ್ತು ರಗಡ್ ಜಿ1 ಪ್ಲಸ್ ಸ್ಮಾರ್ಟ್‌ ಸ್ಕೂಟರ್‌ಗಳ ಅಧಿಕೃತ ಮಾರಾಟವು 2021ರ ನವೆಂಬರ್‌ನ ಮೊದಲ ವಾರದಲ್ಲಿ ಶುರುವಾಗಲಿದೆ. ಈ ಎರಡೂ ಸ್ಕೂಟರ್‌ಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಸಬ್ಸಿಡಿಗಳಿಗೆ ಅರ್ಹವಾಗಿರುವುದರಿಂದ, ಗ್ರಾಹಕರ ಕಿಸೆಯ ಮೇಲಿನ ಹೊರೆ ತುಸು ಕಡಿಮೆಯಾಗಬಹುದು ಎಂದು ಹೇಳಬಹುದು.

ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ

ಇಬೈಕ್‌ಗೋ ಲಾಂಚ್ ಮಾಡಿರುವ ಈ ರಗಡ್ ಎಲೆಕ್ಟ್ರಿಕ್ ಸ್ಕೂಟರ್ 3ಕೆಡಬ್ಲ್ಯೂ ಮೋಟಾರ್ ಹೊಂದಿದ್ದು, ಅದು ಗಂಟೆಗೆ 70 ಕಿ.ಮೀ.ವರೆಗೂ ಸ್ಪೀಡ್‌ ತಲುಪಬಹುದು. ಇದಕ್ಕೆ 2ಕೆಎಚ್ ಬ್ಯಾಟರಿ ಪ್ಯಾಕ್ ಒದಗಿಸಲಾಗಿದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಅಂದರೆ, ಜೀರೋದಿಂದ ಪೂರ್ತಿಯಾಜಿ ಚಾರ್ಜ್ ಆಗಲು ಗರಿಷ್ಠ 3.5 ಗಂಟೆಗಳು ಬೇಕಾಗುತ್ತವೆ. ಒಮ್ಮೆ ಚಾರ್ಜ್ ಮಾಡಿದರೆ, ಈ ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೀವು 160 ಕಿ.ಮೀ.ವರೆಗೂ ಓಡಿಸಬಹುದು. 

ಈ ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿಯು ಕ್ರೆಡೆಲ್ ಚಾಸೀಸ್ ಮೇಲೆ ನಿರ್ಮಿಸಿದೆ. ಸ್ಟೀಲ್ ಫ್ರೇಮ್ ಇದ್ದು, 30 ಲೀ.ವರೆಗೂ ಸ್ಟೋರೇಜ್ ಸಾಮರ್ಥ್ಯವಿದೆ. ರಗಡ್ ಎಲೆಕ್ಟ್ರಿಕ್ ಸ್ಕೂಟರ್ 12 ಅಂತರ್ನಿರ್ಮಿತ ಸ್ಮಾರ್ಟ್ ಸೆನ್ಸರ್‌ಗಳನ್ನು ಒಳಗೊಂಡಿದೆ, ಇವುಗಳು ಎಲೆಕ್ಟ್ರಿಕ್ ಬೈಕ್ ಅನ್ನು ಲಾಕ್ ಮಾಡಲು ಮತ್ತು ಅನ್‌ಲಾಕ್ ಮಾಡಲು ಪ್ರವೇಶಿಸಬಹುದಾದ ತನ್ನದೇ ಆಪ್‌ಗೆ ಲಿಂಕ್ ಮಾಡಲಾಗಿದೆ. ಇದು ಅಪಘಾತ ಅಥವಾ ಇತರ ಯಾವುದೇ ತುರ್ತು ಸಂದರ್ಭಗಳಲ್ಲಿ ಚಾಲಕನ ಸುರಕ್ಷತೆಯನ್ನು ಖಾತ್ರಿಪಡಿಸುವ ಆಂಟಿ ಥೆಪ್ಟ್ ವೈಶಿಷ್ಟ್ಯವನ್ನು ಹೊಂದಿದೆ.

ಇಬೈಕ್‌ಗೋನ ಕೃತಕ ಬುದ್ಧಿಮತ್ತೆ-ಚಾಲಿತ ಫ್ಲೀಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮತ್ತು ಇಬಿಜಿ ಮ್ಯಾಟಿಕ್ಸ್(ಇಬೈಕ್‌ಗೋನ ಪೇಟೆಂಟ್ ಪಡೆದ ಐಒಟಿ ತಂತ್ರಜ್ಞಾನ) ತನ್ನ ಬಿ2ಬಿ ಮತ್ತು ಬಿ2ಸಿ ಕಾರ್ಯಾಚರಣೆಗಳಿಂದ ವಿಶ್ಲೇಷಿಸಿದ ಲಕ್ಷಾಂತರ ಡೇಟಾ ಪಾಯಿಂಟ್‌ಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ವಾಹನವನ್ನು ರಚಿಸಲಾಗಿದೆ. 

ಇ ವಾಹನ ಖರೀದಿಸಿದ್ರೆ ನೋಂದಣಿ ಸರ್ಟಿಫಿಕೇಟ್ ಶುಲ್ಕ ಕೊಡಬೇಕಿಲ್ಲ!

ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ತಯಾರಿಸಲಾಗಿದೆ ಮತ್ತು ಇದು ಭಾರತೀಯ ರಸ್ತೆಗಳಿಗಾಗಿ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ಮತ್ತು ಬಾಳಿಕೆ ಬರುವ ವಿದ್ಯುತ್ ವಾಹನ ಎಂದು ಹೇಳಿಕೊಂಡಿದೆ. ಬೈಕು ಚಾಸಿಸ್ ಮೇಲೆ 7 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ.