'Hero' Brand ಬಳಕೆ ವಿವಾದ: ಮಧ್ಯಸ್ಥಿಕ ನ್ಯಾಯಮಂಡಳಿ ಸ್ಥಾಪಿಸಿದ ಹೈಕೋರ್ಟ್!
- ಬ್ರ್ಯಾಂಡ್ ಹೆಸರು ಕುರಿತು ಎರಡು ಕಂಪನಿಗಳ ನಡುವೆ ವ್ಯಾಜ್ಯ
- ಹೀರೋ ಎಲೆಕ್ಟ್ರಿಕ್ ಮತ್ತು ಹೀರೋ ಮೋಟೋಕಾರ್ಪ್ ನಡುವೆ ಕತ್ತಾಟ
- ತ್ರಿಸದಸ್ಯ ಸಮಿತಿ ರಚಿಸಿದ ಹೈಕೋರ್ಟ್
Auto Desk: ಹೊಸದಾಗಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳಿಗೆ ‘ಹೀರೋ’(Hero) ಎಂಬ ಬ್ರ್ಯಾಂಡ್ ಹೆಸರು ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಹೀರೋ ಎಲೆಕ್ಟ್ರಿಕ್ (Hero electric) ಮತ್ತು ಹೀರೋ ಮೋಟೋಕಾರ್ಪ್ (Hero Motocorp) ನಡುವಿನ ಕಾನೂನು ವ್ಯಾಜ್ಯಕ್ಕೆ ಹೊಸ ತಿರುವು ದೊರೆತಿದೆ. ಈ ವ್ಯಾಜ್ಯದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ (High Court), ರಾಜಿ ಸಂಧಾನದ ಮೂಲಕ ಈ ಕುಟುಂಬದ ಪ್ರತಿಷ್ಠೆಯ ವಿವಾದವನ್ನು ಬಗೆಹರಿಸಲು ‘ ಮಧ್ಯಸ್ಥಿಕೆ ನ್ಯಾಯಮಂಡಳಿ’ಯನ್ನು (Mediation tribunal) ರಚಿಸಿದೆ.
ಹೀರೋ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ವಾಹನಗಳಿಗೆ ಹೀರೋ ಟ್ರೇಡ್ಮಾರ್ಕ್ (Trademark) ಅನ್ನು ಬಳಸಲು ವಿಶೇಷ ಹಕ್ಕುಗಳನ್ನು ಹೊಂದಿದೆಯೇ ಎಂದು ನಿರ್ಧರಿಸಲು ನ್ಯಾಯಾಲಯ, ಮೂರು ನಿವೃತ್ತ ನ್ಯಾಯಮೂರ್ತಿಗಳಾದ ಇಂಧು ಮಲ್ಹೋತ್ರಾ, ದೀಪಕ್ ಮಿಶ್ರಾ ಮತ್ತು ಇಂದರ್ಮೀತ್ ಕೌರ್ ಅವರ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ: ಹೀರೋ ಮೋಟಾರ್ಸ್, ಮಹೀಂದ್ರಾ ಪಾಲುದಾರಿಕೆಯಲ್ಲಿ ಮೊದಲ ಎಲೆಕ್ಟ್ರಿಕ್ ವಾಹನ ಬಿಡುಗಡೆ
ಈ ಕುರಿತು ಹೇಳಿಕೆ ನೀಡಿರುವ ಹೀರೋ ಎಲೆಕ್ಟ್ರಿಕ್ "ವ್ಯಾಜ್ಯವನ್ನು ಮಧ್ಯಸ್ಥಿಕೆಗೆ ವಹಿಸಲು ಹೀರೋ ಎಲೆಕ್ಟ್ರಿಕ್ ಅರ್ಜಿ ಸಲ್ಲಿಸಿತ್ತು. ಇದನ್ನು ಹೀರೋ ಮೋಟೋಕಾರ್ಪ್ ಬಲವಾಗಿ ವಿರೋಧಿಸಿತ್ತು. ಹೀರೋ ಮೋಟೋಕಾರ್ಪ್ನ ಎಲ್ಲಾ ವಿವಾದಗಳನ್ನು ತಿರಸ್ಕರಿಸಿದ ನ್ಯಾಯಾಲಯ, ಕುಟುಂಬದ ವ್ಯವಸ್ಥೆಗೆ ಒಳಪಟ್ಟಿರುವ ಎಲ್ಲಾ ವಿವಾದಗಳನ್ನು ಮೂರು ಸದಸ್ಯರ ಮಧ್ಯಸ್ಥಿಕೆ ನ್ಯಾಯಮಂಡಳಿಗೆ ವರ್ಗಾಯಿಸಿದೆ” ಎಂದು ಮಾಹಿತಿ ನಿಡಿದೆ.
ಹೀರೋ ಎಲೆಕ್ಟ್ರಿಕ್ನ ಮ್ಯಾನೇಜಿಂಗ್ ಡೈಕ್ಟರ್ ನವೀನ್ ಮುಂಜಾಲ್, ತನ್ನ ಚಿಕ್ಕಪ್ಪ ಪವನ್ ಮುಂಜಾಲ್ ಜೊತೆಗೆ ತನ್ನ ಎಲೆಕ್ಟ್ರಿಕ್ ವಾಹನಗಳಿಗೆ 'ಹೀರೋ' ಎಂಬ ಬ್ರಾಂಡ್ ಹೆಸರನ್ನು ಬಳಸುವ ಬಗ್ಗೆ ಕಾನೂನು ಹೋರಾಟದಲ್ಲಿ ತೊಡಗಿದ್ದರು. 2022ರ ಜನವರಿಯಲ್ಲಿ, ವಿಜಯ್ ಮುಂಜಾಲ್ ಮತ್ತು ಅವರ ಮಗ ನವೀನ್ ಮುಂಜಾಲ್, ಪವನ್ ಮುಂಜಾಲ್ ನೇತೃತ್ವದ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್ ಗೆ ಬ್ರ್ಯಾಂಡ್ ಹೆಸರು ಬಳಕೆ ವಿರುದ್ಧ ತಡೆಯಾಜ್ಞೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Hero Bike Booking 10 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಹೀರೋ Xಪಲ್ಸ್ 200 4 Valve ಬೈಕ್!
"ಹೀರೋ ಎಲೆಕ್ಟ್ರಿಕ್ ಮನವಿ ಮಾಡಿದ ಪರಿಹಾರವನ್ನು ನೀಡಲು ಹೈಕೋರ್ಟ್ ನಿರಾಕರಿಸಿದೆ ಮತ್ತು ಹೀರೋ ಮೋಟೋಕಾರ್ಪ್ ಟ್ರೇಡ್ ಮಾರ್ಕ್ ಹೀರೋ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಯಾವುದೇ ತಡೆಯಜ್ಞೆ ನೀಡಿಲ್ಲ " ಎಂದು ಹೀರೋ ಮೋಟೋಕಾರ್ಪ್ ವಕೀಲ ರಾಜೀವ್ ನಾಯರ್ ತಿಳಿಸಿದ್ದಾರೆ.
ಆದರೆ, ಹೀರೋ ಟ್ರೇಡ್ಮಾರ್ಕ್ಗೆ ಸಂಬಂಧಿಸಿದ ವಿವಾದವನ್ನು ಈಗ ಮಧ್ಯಸ್ಥಿಕೆ ನ್ಯಾಯಮಂಡಳಿ ನಿರ್ಧರಿಸುವುದರಿಂದ ಕಂಪನಿಯು ತಡೆಯಾಜ್ಞೆಯ ಮನವಿಯನ್ನು ಹಿಂಪಡೆದಿದೆ ಎಂದು ಹೀರೋ ಎಲೆಕ್ಟ್ರಿಕ್ನ ನಿಕಟ ಮೂಲಗಳು ತಿಳಿಸಿವೆ. "ನಾವು ಹೀರೋ ಮೋಟೋಕಾರ್ಪ್ ವಿರುದ್ಧ ಮಧ್ಯಂತರ ತಡೆಯಾಜ್ಞೆಗಾಗಿ ನ್ಯಾಯಮಂಡಳಿಯ ಮುಂದೆ ಅರ್ಜಿ ಸಲ್ಲಿಸಲಿದ್ದೇವೆ” ಎಂದು ಹೀರೋ ಎಲೆಕ್ಟ್ರಿಕ್ ಹೇಳಿದೆ.
ಮುಂಜಾಲ್ ಕುಟುಂಬದ ನಡುವೆ ಈ ರೀತಿಯ ವಿವಾದ ಏರ್ಪಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಇಂತಹ ಕಲಹ ಉಂಟಾದಾಗ 2010ರಲ್ಲಿ ಅದರ ಸದಸ್ಯರು ಒಂದು ಒಪ್ಪಂದಕ್ಕೆ ಬಂದಿದ್ದರು. ಅದರ ಪ್ರಕಾರ, ಎಲೆಕ್ಟ್ರಿಕ್ ವಾಹನದ ಜಾಗಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್ ಹೆಸರನ್ನು ಬಳಸುವ ಏಕೈಕ ಹಕ್ಕನ್ನು ತಾವು ಹೊಂದಿದ್ದೇವೆ. ಮತ್ತು ಇತರ ಸದಸ್ಯರು ಅದರ ಮೇಲೆ ಹಕ್ಕುಗಳನ್ನು ಹೊಂದಿಲ್ಲ ಎಂದು ಹೀರೋ ಎಲೆಕ್ಟ್ರಿಕ್ ಹೇಳಿಕೊಂಡಿದೆ.
ಮೊದಲಿನಿಂದಲೂ ಹೀರೋ ಎಲೆಕ್ಟ್ರಿಕ್, ತನ್ನ ವಾಹನಗಳಿಗೆ ಬ್ರ್ಯಾಂಡ್ ಹೆಸರು ಬಳಸುತ್ತಿದ್ದು, ಯಾವುದೇ ವಿವಾದ ಸೃಷ್ಟಿಯಾಗಿರಲಿಲ್ಲ. ಈಗ ಎಲೆಕ್ಟ್ರಿಕ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ, ಹೀರೋ ಮೋಟೋಕಾರ್ಪ್ ಹೊಸ ವಾಹನ ಬಿಡುಗಡೆಗೆ ಮುಂದಾಗಿದ್ದು, ಅದಕ್ಕೆ ಕೂಡ ಇದೇ ಬ್ರ್ಯಾಂಡ್ ಹೆಸರು ಬಳಸಲಿದೆ. ಇದು ಕಾನೂನು ವ್ಯಾಜ್ಯಕ್ಕೆ ಎಡೆ ಮಾಡಿಕೊಟ್ಟಿದೆ.