ಅವೋರ್ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಬೈಕ್ ವಿಭಾಗದಲ್ಲೇ ಅತೀ ಕಡಿಮೆ ಬೆಲೆಯಲ್ಲಿ ಇವಿ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 260 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಬೆಂಗಳೂರು (ಜು.28) ಸಮರ್ಥ್ ಇ-ಮೊಬಿಲಿಟಿ ಸಂಸ್ಥೆಯ ಭಾಗವಾಗಿರುವ ಭಾರತದ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಂಪನಿ ಅವೋರ್ ಹೊಸ ಬೈಕ್ ಬಿಡುಗಡೆ ಮಾಡಿದೆ. ಇದು ಅವೋರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್. ವಿಶೇಷ ಅಂದರೆ ಅತೀ ಕಡಿಮೆ ಬೆಲೆಯಲ್ಲಿ ಈ ಬೈಕ್ ಬಿಡುಗಡೆ ಮಾಡಲಾಗಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಜೊತೆಗೆ ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 260 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ.

ಅವೋರ್ ಎಲೆಕ್ಟ್ರಿಕ್ ಬೈಕ್ ಬೆಲೆ

ಹೊಚ್ಚ ಹೊಸ ಅವೋರ್ ಇವಿ ಬೈಕ್ ಆರಂಭಿಕ ಬೆಲೆ 1.24 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸ್ವದೇಶಿ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ವಿನ್ಯಾಸದ ಮೂಲಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೈಡ್ ಮತ್ತಷ್ಟು ಸರಳ ಹಾಗೂ ಆನಂದದಾಯಕವಾಗಿಸಿದೆ.

ಬೈಕ್ ಮೈಲೇಜ್

ಎಲೆಕ್ಟ್ರಿಕ್ ವಾಹನ ಖರೀದಿದಾರರಲ್ಲಿ ಕಾಡುವ ರೇಂಜ್ ಆತಂಕವನ್ನು ನಿವಾರಿಸಲು ಅವೋರ್ ಇಎಕ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅತ್ಯುನ್ನತ ವೇರಿಯೆಂಟ್ ಗಳಾದ ಇಎಕ್ಸ್ 2ಎಸ್ ಮತ್ತು ಇಎಕ್ಸ್ 2 ಮಾದರಿಗಳು ಕ್ರಮವಾಗಿ 260 ಕಿ.ಮೀ ಹಾಗೂ 255 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇನ್ನು ಇಎಕ್ಸ್ 1 ಮಾದರಿಯು ಒಂದೇ ಚಾರ್ಜ್‌ ನಲ್ಲಿ 160 ಕಿ.ಮೀ ರೇಂಜ್ ನೀಡಲಿದೆ.

ಚಾರ್ಜಿಂಗ್ ಪ್ರಕ್ರಿಯೆಯನ್ನು ಸಹ ಅತ್ಯಂತ ಸರಳಗೊಳಿಸಲಾಗಿದೆ. ಮೂರೂ ವೆರಿಯೆಂಟ್‌ಗಳಲ್ಲಿ 1500ವ್ಯಾಟ್ ಆನ್‌ ಬೋರ್ಡ್ ಫಾಸ್ಟ್ ಚಾರ್ಜರ್ ನೀಡಲಾಗಿದ್ದು, ಯಾವುದೇ ಸಾಮಾನ್ಯ 5ಎ ಅಥವಾ 15ಎ ಮನೆಯ ಸಾಕೆಟ್‌ ಗೆ ನೇರವಾಗಿ ಪ್ಲಗ್ ಮಾಡಿ ಚಾರ್ಜ್ ಮಾಡಬಹುದು. ಹೀಗಾಗಿ ಪ್ರತ್ಯೇಕ ಚಾರ್ಜಿಂಗ್ ನೆಟ್‌ ವರ್ಕ್ ಹುಡುಕುವ ಅಗತ್ಯವಿಲ್ಲ. ಕೇವಲ 2 ಗಂಟೆಗಳಲ್ಲಿ ಬ್ಯಾಟರಿಯನ್ನು ಶೇ. 20 ರಿಂದ ಶೇ. 80 ರಷ್ಟು ಚಾರ್ಜ್ ಮಾಡಬಹುದು. ಸಂಪೂರ್ಣ (ಶೇ. 0 ದಿಂದ 100) ಚಾರ್ಜ್ ಆಗಲು ಸರಿಸುಮಾರು 4 ಗಂಟೆಗಳು ಬೇಕಾಗುತ್ತವೆ. ಈ ಬೈಕ್‌ ನ ಬ್ಯಾಟರಿ ಪ್ಯಾಕ್ ಅನ್ನು ನ್ಯಾಟ್ರಾಕ್ಸ್ ನಿಂದ ಅನುಮೋದಿಸಲಾಗಿದ್ದು, ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಬಿಎಂಎಸ್) ಅನ್ನು ಐಸಿಎಟಿ ನಿಂದ ಪ್ರಮಾಣೀಕರಿಸಲಾಗಿದೆ.

ವೇರಿಯೆಂಟ್‌ ಗೆ ಅನುಗುಣವಾಗಿ ಈ ಬೈಕ್ 7.5 ಕಿವ್ಯಾಟ್ ನಿಂದ 10.5 ಕಿ ವ್ಯಾಟ್ ವರೆಗೆ ಗರಿಷ್ಠ ಪವರ್ ನೀಡುತ್ತದೆ. ನಗರದ ರಸ್ತೆಗಳಿರಲಿ ಅಥವಾ ಹೈವೇ ಇರಲಿ, ಅದ್ಭುತ ಚಾಲನಾ ಅನುಭವಕ್ಕಾಗಿ ಮೂರೂ ವೆರಿಯೆಂಟ್‌ಗಳಲ್ಲಿ 250 ಎನ್ಎಂ ಪೀಕ್ ವೀಲ್ ಟಾರ್ಕ್ ಸಿಗಲಿದೆ. ಇಎಕ್ಸ್ 2ಎಸ್ ವೆರಿಯೆಂಟ್ ಗಂಟೆಗೆ 114 ಕಿ.ಮೀ ಗರಿಷ್ಠ ವೇಗವನ್ನು ತಲುಪಿದರೆ, ಇಎಕ್ಸ್ 2 ಮತ್ತು ಇಎಕ್ಸ್ 1 ವೆರಿಯೆಂಟ್‌ ಗಳು ಗಂಟೆಗೆ 100 ಕಿ.ಮೀ ವೇಗವನ್ನು ತಲುಪಬಲ್ಲವು.

ಆಕರ್ಷಕ ವಿನ್ಯಾಸ ಮತ್ತು ಚಾಲಕ-ಕೇಂದ್ರಿತ ತಂತ್ರಜ್ಞಾನ

ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಮೋಟಾರ್‌ ಸೈಕಲ್ ಕಣ್ಣುಸೆಳೆಯುವ ಮತ್ತು ಸೊಗಸಾದ ವಿನ್ಯಾಸ ಶೈಲಿಯನ್ನು ಪರಿಚಯಿಸಿದೆ. ಭಾರತೀಯ ಸವಾರರನ್ನೇ ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಲಾದ ಈ ಬೈಕ್, ಸಾಂಪ್ರದಾಯಿಕ ಪೆಟ್ರೋಲ್ (ಐಸಿಇ) ಬೈಕ್‌ ಗಳಿಂದ ಎಲೆಕ್ಟ್ರಿಕ್ ವಾಹನಕ್ಕೆ ಬದಲಾಗುವ ಪ್ರಕ್ರಿಯೆಯನ್ನು ಅತ್ಯಂತ ಸುಲಭ ಹಾಗೂ ನೈಸರ್ಗಿಕವಾಗಿಸುತ್ತದೆ. ಬೈಕ್ ಚಲಾಯಿಸುವ ಭಂಗಿ, ಚಾಲನಾ ಅನುಭವ ಮತ್ತು ಒಟ್ಟಾರೆ ಬಳಕೆಯ ಅನುಭವದಲ್ಲಿ ಇದು ವಿಶಿಷ್ಟವಾಗಿ ಮೂಡಿಬಂದಿದೆ.